ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿ ಪುಶ್​ಅಪ್ಸ್ ಮಾಡಿದ ಯುವಕ; ಪೊಲೀಸರು ಕೊಟ್ರು ಭರ್ಜರಿ ಗಿಫ್ಟ್

ಉಜ್ವಲ್​ ಯಾದವ್​ ಎಂಬ ಯುವಕ ಇಂತಹ ಸಾಹಸ ಮಾಡಿದ್ದು, ಇದನ್ನು ನೋಡಿದ ಉತ್ತರ ಪ್ರದೇಶದ ಪೊಲೀಸರು ಅವನಿಗೆ ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ್ದಷ್ಟೇ ಅಲ್ಲದೇ ಆತನನ್ನು ಅದೇ ಕಾರಿನ ಮುಂದೆ ನಿಲ್ಲಿಸಿ ಇನ್ನೆಂದೂ ಈ ರೀತಿ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ.

ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿ ಪುಶ್​ಅಪ್ಸ್ ಮಾಡಿದ ಯುವಕ; ಪೊಲೀಸರು ಕೊಟ್ರು ಭರ್ಜರಿ ಗಿಫ್ಟ್
ಚಲಿಸುತ್ತಿದ್ದ ಕಾರಿನ ಮೇಲೆ ಪುಶ್​ಅಪ್ಸ್​ ಮಾಡಿದ ಯುವಕ
Follow us
Skanda
| Updated By: ganapathi bhat

Updated on: Mar 16, 2021 | 6:34 PM

ಲಕ್ನೋ: ಮೀಸೆ ಚಿಗುರುವಾಗ ಲೋಕ ಕಾಣೋದಿಲ್ಲ ಎಂಬ ಮಾತೊಂದಿದೆ. ವಯಸ್ಸು ಒಂದು ಹಂತ ದಾಟುತ್ತಿದ್ದಂತೆ ಬಹುತೇಕರಿಗೆ ತಾವು ಏನು ಮಾಡುತ್ತಿದ್ದೇವೆ? ಅದರಿಂದ ಏನು ಅನಾಹುತ ಆಗಬಹುದು? ಕಾನೂನಿನ ಪ್ರಕಾರ ಇದು ತಪ್ಪೋ, ಸರಿಯೋ? ಎಂಬ ಅರಿವೇ ಇರುವುದಿಲ್ಲ. ತಮ್ಮ ಸುತ್ತಮುತ್ತ ಯಾರೋ ಮಾಡಿದ್ದನ್ನು ನೋಡಿಯೋ? ಸಿನಿಮಾದ ಯಾವುದೋ ದೃಶ್ಯವನ್ನು ಅನುಕರಿಸಿಯೋ? ದೊಡ್ಡ ಸಾಹಸ ಮಾಡುತ್ತಿರುವೆನೆಂಬ ಹುಮ್ಮಸ್ಸಿನಲ್ಲಿ ಏನಾದರೂ ಮಾಡಲು ಹೋಗಿ ಪೇಚಿಗೆ ಸಿಲುಕುತ್ತಾರೆ. ಅಂತಹದ್ದೇ ಒಂದು ಯಡವಟ್ಟನ್ನು ಉತ್ತರಪ್ರದೇಶದ ಯುವಕನೊಬ್ಬ ಮಾಡಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿ ಪುಶ್​ಅಪ್ಸ್​ ಮಾಡಿದ್ದಾನೆ. ಸಾಲದ್ದಕ್ಕೆ ಆ ದೃಶ್ಯವನ್ನು ಚಿತ್ರೀಕರಣ ಕೂಡ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇಷ್ಟೆಲ್ಲಾ ಆದ ನಂತರ ಆತನ ಸಾಹಸಕ್ಕೆ ಪೊಲೀಸರಿಂದ ಸೂಕ್ತ ಬಹುಮಾನವೂ ಸಿಕ್ಕಿದೆ!

ಉಜ್ವಲ್​ ಯಾದವ್​ ಎಂಬ ಯುವಕ ಇಂತಹ ಸಾಹಸ ಮಾಡಿದ್ದು, ಇದನ್ನು ನೋಡಿದ ಉತ್ತರ ಪ್ರದೇಶದ ಪೊಲೀಸರು ಅವನಿಗೆ ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ್ದಷ್ಟೇ ಅಲ್ಲದೇ ಆತನನ್ನು ಅದೇ ಕಾರಿನ ಮುಂದೆ ನಿಲ್ಲಿಸಿ ಇನ್ನೆಂದೂ ಈ ರೀತಿ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಮುಖೇನ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಪೊಲೀಸರು, ವಿಡಿಯೋ ತುಣುಕೊಂದನ್ನು ಹರಿಬಿಟ್ಟಿದ್ದಾರೆ. ಮೊದಲು ಯುವಕನ ವಿಡಿಯೋ ವೈರಲ್​ ಆಗಿದ್ದಕ್ಕಿಂತಲೂ ಹೆಚ್ಚಾಗಿ ಇದೀಗ ಪೊಲೀಸರು ಬಿಟ್ಟ ವಿಡಿಯೋ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ.

ಪೊಲೀಸರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲು ಯುವಕ ಕಾರಿನ ಮೇಲೆ ಹತ್ತಿ ಪುಶ್​ಅಪ್ಸ್​ ಮಾಡಿರುವ ದೃಶ್ಯವಿದ್ದು, ನಂತರದಲ್ಲಿ ನಾವು ನಿಮ್ಮ ಪರಿಶ್ರಮವನ್ನು ಗುರುತಿಸಿದ್ದೇವೆ. ಇದಕ್ಕಾಗಿ ನಿಮಗೆ ಉಡುಗೊರೆಯನ್ನೂ ನೀಡುತ್ತಿದ್ದೇವೆ ಎಂದು ಹೇಳಿ ದಂಡ ವಿಧಿಸಿರುವ ಚಲನ್​ ಪ್ರದರ್ಶಿಸಿದ್ದಾರೆ. ಅದಾದ ನಂತರ, ಯುವಕ ಕಾರಿನ ಮುಂದೆ ನಿಂತು ತಪ್ಪು ಒಪ್ಪಿಕೊಳ್ಳುತ್ತಿರುವ ದೃಶ್ಯವೂ ಇದೆ. ಕೊನೆಯಲ್ಲಿ ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿ ಅಜಯ್​ ಕುಮಾರ್, ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ.

ಉತ್ತರಪ್ರದೇಶದ ಪೊಲೀಸರ ವಿಡಿಯೋ ಟ್ವಿಟರ್​ನಲ್ಲಿ ಭಾರೀ ಜನಪ್ರಿಯಗೊಂಡಿದ್ದು, ಕಮೆಂಟ್​ ಮಾಡಿರುವ ಬಹುತೇಕರು ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸದ್ದಾರೆ. ಅಲ್ಲದೇ, ಅದನ್ನು ಅತ್ಯಂತ ಕ್ರಿಯಾಶೀಲತೆಯೊಂದಿಗೆ ಹಂಚಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Divya Suresh: ಬಿಗ್​ ಬಾಸ್​ ಮನೆ ಸೇರಿರುವ ದಿವ್ಯಾ ಸುರೇಶ್​ ಹಳೆಯ ಮಾದಕ​ ವಿಡಿಯೋ ವೈರಲ್​! 

ಅವರೇ, ಇವರಾ? ಜೊಮ್ಯಾಟೋ ಪ್ರಕರಣದಲ್ಲಿ ಸದ್ದು ಮಾಡಿದ ಯುವತಿ ನಿಜ ಜೀವನದಲ್ಲಿ ಹೀಗಿದ್ದಾರಾ?