ದಾವಣಗೆರೆ: ಅದು ಮಧ್ಯಾಹ್ನದ ಬಿಸಿಲು, ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮೇಲಾಗಿ ದೀಪಾವಳಿ ಹಬ್ಬ ಮುಗಿದ ಹಿನ್ನೆಲೆ ಬಹುತೇಕರು ತಮ್ಮ ಕೆಲ್ಸಕ್ಕೆ ಹೋಗಿದ್ದರು. ಕೊರೊನಾ ಕಾಟದಿಂದಾಗಿ ಶಾಲಾ ಕಾಲೇಜುಗಳ ಸಹ ಬಂದ್ ಇವೆ. ವಸತಿ ಪರಿಸರ ಬಿಕೋ ಅನ್ನುತ್ತಿದೆ. ಸರಿಯಾಗಿ ಅಂತಹುದೇ ಘಳಿಗೆಯಲ್ಲಿ.. ಮಧ್ಯಾಹ್ನ ಆ 12 ವರ್ಷದ ಬಾಲಕನಿಗೆ ಚಾಕೊಲೇಟ್ ತಿನ್ನುವ ಆಸೆ ಆಗಿದೆ. ಹೀಗಾಗಿ ಆತ ಮನೆ ಹತ್ತಿರವೆ ಇರುವ ಅಂಗಡಿಗೆ ಹೋಗಿದ್ದಾನೆ..
ನಾವು ಹೇಳುತ್ತಿರುವುದು ದಾವಣಗೆರೆ ನಗರದ ಹೊರ ವಲಯದ ಆವರಗೆರೆ ಬಳಿಯ ಉತ್ತಮಚಂದ ಬಡಾವಣೆಯಲ್ಲಿ ನಡೆದ ನಿಜ ಘಟನೆ ಬಗ್ಗೆ. ಪೊಲೀಸ್ ಇಲಾಖೆಯಲ್ಲಿ ಎ ಎಸ್ ಐ ಆಗಿರುವ ವೆಂಕಟೇಶ ರೆಡ್ಡಿ-ಲಕ್ಷ್ಮಿ ರೆಡ್ಡಿ ದಂಪತಿಯ ಕುಟುಂಬ ಆ ಬಡಾವಣೆಯ ನಿವಾಸಿಗಳು. ಅವರ ಮಕ್ಕಳಾದ 12 ವರ್ಷದ ಸುಶಾಂತ್ ರೆಡ್ಡಿ ಹಾಗೂ 19 ವರ್ಷದ ಪ್ರಣೀತಾ ರೆಡ್ಡಿ ಸಾಧನೆ ಕುರಿತು ಇಲ್ಲಿ ಕುತೂಹಲಕಾರಿ ಮಾಹಿತಿಯಿದೆ..
ಅಂಗಡಿಯ ಯಜಮಾನಿ ಆತ್ಮಹತ್ಯೆಗೆ ಮುಂದಾಗಿದ್ದಳು.. ಮನೆಯಲ್ಲಿ ಆಟವಾಡಿಕೊಂಡಿದ್ದ ಸುಶಾಂತ್ ರೆಡ್ಡಿ ಮಧ್ಯಾಹ್ನದ ಸಮಯದಲ್ಲಿ ಅಂಗಡಿಗೆ ಚಾಕೊಲೇಟ್ ತರಲು ಹೋಗಿದ್ದಾನೆ. ಆದರೆ ಅಂಗಡಿಯಲ್ಲಿ ಸುಶಾಂತ್ ರೆಡ್ಡಿಗೆ ಯಾರೂ ಇಲ್ಲದಿರುವುದು ಕಂಡಿದೆ. ಹೀಗಾಗಿ ಸುಶಾಂತ್ ರೆಡ್ಡಿ ನೇರವಾಗಿ ಅಂಗಡಿ ಒಳಗೆ ಹೋಗಿ ನೋಡಿದ್ದಾನೆ. ಅಲ್ಲಿ ಅಂಗಡಿ ಯಜಮಾನಿ ಕಿಟಕಿಗೆ ಟಾವಲ್ ಬಿಗಿದು ಆತ್ಮಹತ್ಯೆಗೆ ಮುಂದಾಗಿದ್ದಳು. ಅವಳ ಬಾಯಿಂದ ರಕ್ತ ಕೂಡಾ ಬರುತ್ತಿತ್ತು. ಇದನ್ನ ನೋಡಿದ ಸುಶಾಂತ್ ರೆಡ್ಡಿ ತನ್ನ ಅಕ್ಕ ಪ್ರಣೀತಾ ರೆಡ್ಡಿಯನ್ನ ಕರೆದಿದ್ದಾನೆ.
ಕೂಡಲೇ ಇಬ್ಬರೂ ಸೇರಿ ಮನೆಯವರಿಗೆ ವಿಚಾರ ಮುಟ್ಟಿಸಿದ್ದಾರೆ. ಜೊತೆಗೆ ಸ್ಥಳೀಯರ ಮೊಬೈಲ್ ಪಡೆದು ಅಂಬ್ಯುಲೆನ್ಸ್ಗೆ ಸುಶಾಂತ್ ರೆಡ್ಡಿ ಪೋನ್ ಮಾಡಿದ್ದಾನೆ. ಅಷ್ಟರಲ್ಲಾಗಲೇ ಆ ಮಹಿಳೆಯ ಸಂಬಂಧಿಕರು ಸ್ಥಳಕ್ಕೆ ಬಂದಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸಲು ಅಕ್ಕ ತಮ್ಮ ಮಹತ್ವದ ಪಾತ್ರ ವಹಿಸಿದ್ದಾರೆ. ಬಾಲಕನ ಹಾಗೂ ಆತನ ಅಕ್ಕನ ಸಮಯ ಪ್ರಜ್ಞೆ ಯಿಂದ ಓರ್ವ ಮಹಿಳೆಯ ಪ್ರಾಣ ಉಳಿದಿದೆ. ಆದರೆ ಮಹಿಳೆಯ ಆತ್ಮಹತ್ಯೆ ಯತ್ನಕ್ಕೆ ಸರಿಯಾದ ಕಾರಣ ತಿಳಿದುಬಂದಿಲ್ಲ.
ಬಾಲಕನ ಈ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಮಹಿಳೆ ದಾವಣಗೆರೆ ಬಾಪೂಜಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ಮಹಿಳೆ ಬದುಕಿ ಬಂದ್ರೆ ಬಾಲಕನ ಶ್ರಮ ಸಾರ್ಥಕವಾದಂತೆಯೇ ಸರಿ.