AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 ನಿರೀಕ್ಷೆ | ಈ ವರ್ಷದ ಬಜೆಟ್​ನಿಂದ ಮಹಿಳೆಯರು ಬಯಸುತ್ತಿರುವುದೇನು?

ಕುಟುಂಬ ನಿರ್ವಹಣೆಗಾಗಿ ಅದೆಷ್ಟೋ ಮಹಿಳೆಯರು ಸ್ವಯಂ ಉದ್ಯೋಗದ ಹಾದಿ ಹಿಡಿದಿದ್ದಾರೆ. ಈ ವರ್ಷದ ಬಜೆಟ್ ಮಹಿಳಾ ಉದ್ಯಮಿಗಳಿಗೆ ಏನು ಕೊಡುಗೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Budget 2021 ನಿರೀಕ್ಷೆ | ಈ ವರ್ಷದ ಬಜೆಟ್​ನಿಂದ ಮಹಿಳೆಯರು ಬಯಸುತ್ತಿರುವುದೇನು?
ಪ್ರಾತಿನಿಧಿಕ ಚಿತ್ರ (ಕೃಪೆ: ಪಿಟಿಐ)
ರಶ್ಮಿ ಕಲ್ಲಕಟ್ಟ
|

Updated on:Jan 28, 2021 | 4:32 PM

Share

ಫೆಬ್ರುವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಕೊರೊನಾ ಸಾಂಕ್ರಾಮಿಕದ ಹೊಡೆತಕ್ಕೊಳಗಾಗಿ ಉದ್ಯೋಗ ಕಳೆದುಕೊಂಡ ಕುಟುಂಬಗಳು ಈ ಬಾರಿ ಬಜೆಟ್ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ. ಇಲ್ಲಿಯವರೆಗೆ ಗಂಡಸರೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮನೆಗಳಲ್ಲಿ ಲಾಕ್​ಡೌನ್​ನಿಂದಾಗಿ ಮಹಿಳೆಯರೂ ದುಡಿಯಬೇಕಾದ ಪರಿಸ್ಥಿತಿ ಬಂದಿದೆ. ಕುಟುಂಬ ನಿರ್ವಹಣೆಗಾಗಿ ಅದೆಷ್ಟೋ ಮಹಿಳೆಯರು ಸ್ವಯಂ ಉದ್ಯೋಗದ ಹಾದಿ ಹಿಡಿದಿದ್ದಾರೆ. ಈ ವರ್ಷದ ಬಜೆಟ್ ಮಹಿಳಾ ಉದ್ಯಮಿಗಳಿಗೆ ಏನು ಕೊಡುಗೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಹಿಳಾ ಉದ್ಯಮಿಗಳಿಗೆ ಉತ್ತೇಜನ ಕೋವಿಡ್ -19 ಸಾಂಕ್ರಾಮಿಕವು ಮಹಿಳಾ ಉದ್ಯೋಗಿಗಳಿಗೆ ತೀವ್ರ ಪೆಟ್ಟು ನೀಡಿದೆ. ಮಹಿಳಾ ವಲಸೆ ಕಾರ್ಮಿಕರಿಂದ ಹಿಡಿದು ಕಂಪನಿಯ ಉದ್ಯೋಗಿಗಳಿಂದ ಶಿಕ್ಷಕರವರೆಗೆ ಎಲ್ಲರೂ ಕೆಟ್ಟ ಪರಿಣಾಮ ಎದುರಿಸಿದ್ದಾರೆ. ದೇಶದ ಮಹಿಳೆಯರು ಈ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ದತ್ತಾಂಶದ ಪ್ರಕಾರ, 2019-20ರಲ್ಲಿ ಶೇ 10.7 ರಷ್ಟು ಮಹಿಳೆಯರು ಉದ್ಯೋಗಿಗಳಾಗಿದ್ದಾರೆ. ಆದರೆ, ಲಾಕ್‌ಡೌನ್ ಆಘಾತದ ಮೊದಲ ತಿಂಗಳಾದ 2020ರ ಏಪ್ರಿಲ್‌ನಲ್ಲಿ ಅವರು ಶೇ 13.9 ರಷ್ಟು ಉದ್ಯೋಗ ನಷ್ಟವನ್ನು ಅನುಭವಿಸಿದ್ದಾರೆ. ನವೆಂಬರ್ 2020 ರ ಹೊತ್ತಿಗೆ, ಪುರುಷರು ತಮ್ಮ ಕಳೆದುಹೋದ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಂಡರೂ ಮಹಿಳೆಯರಿಗೆ ಇದು ಸಾಧ್ಯವಾಗಲಿಲ್ಲ. ಅಂಕಿಅಂಶದ ಪ್ರಕಾರ ನವೆಂಬರ್ ವೇಳೆಗೆ ಶೇ 49 ರಷ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗ ನಷ್ಟ ಮತ್ತು ವೇತನ ಕಡಿತದಿಂದಾಗಿ, ಅನೇಕ ಮಹಿಳೆಯರು ಈಗ ಸಂಸಾರ ನಿಭಾಯಿಸಲು ತಮ್ಮದೇ ಆದ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ನೋಡುತ್ತಿದ್ದಾರೆ. ಅನೇಕರು ಖರ್ಚುಗಳನ್ನು ಪೂರೈಸಲು ಸಣ್ಣ ಉದ್ಯಮಗಳಲ್ಲಿ ತೊಡಗಿದ್ದಾರೆ. ಹವ್ಯಾಸಗಳನ್ನು ಆದಾಯದ ಮೂಲವಾಗಿಸಲು ಹಲವಾರು ಮಹಿಳೆಯರು ಪ್ರಯತ್ನಿಸಿದ್ದು ಇದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ,.

ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿಯಲ್ಲಿ ತರಬೇತಿ ನೀಡಲು ಉದ್ದೇಶಿಸಿರುವ ಮಹಿಳೆಯರಿಗಾಗಿ ಎಸ್‌ಟಿಇಪಿ (ತರಬೇತಿ ಮತ್ತು ಉದ್ಯೋಗ ಕಾರ್ಯಕ್ರಮಕ್ಕೆ ಬೆಂಬಲ) ಎಂಬ ಸರ್ಕಾರಿ ಯೋಜನೆ ಅನೇಕರಿಗೆ ತಿಳಿದಿಲ್ಲ. ಇದಲ್ಲದೆ, ವರದಿಗಳ ಪ್ರಕಾರ, ಈ ಯೋಜನೆಗೆ ನಿಧಿ ಹಂಚಿಕೆಯನ್ನು ಸಹ ₹40 ಕೋಟಿ ಗಳಿಂದ ₹5 ಕೋಟಿಗೆ ಇಳಿಸಲಾಗಿದೆ.

ಮಹಿಳೆಯರಿಗೆ ಆದಾಯ ತೆರಿಗೆ ವಿನಾಯಿತಿಯನ್ನು (ಸೆಕ್ಷನ್ 80 ಸಿ) ₹1.5 ಲಕ್ಷಗಳಿಂದ ₹2.5 ಲಕ್ಷಕ್ಕೆ ಹೆಚ್ಚಿಸಲು ಬೇಡಿಕೆ ಹೆಚ್ಚುತ್ತಿದೆ. ಇದು ದುಡಿಯುವ ಮಹಿಳೆಯರಿಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಮಾತೃತ್ವ ರಜೆಯನ್ನು ಮೂರು ತಿಂಗಳಿಂದ ಆರು ತಿಂಗಳವರೆಗೆ ವಿಸ್ತರಿಸಿದ್ದು ಸ್ವಾಗತಾರ್ಹ ಕ್ರಮವಾಗಿದ್ದು, ಹೆರಿಗೆ ರಜೆ ಅವಧಿಯನ್ನು ಕನಿಷ್ಠ ಒಂಬತ್ತು ತಿಂಗಳವರೆಗೆ ಹೆಚ್ಚಿಸಬೇಕು ಎಂಬುದು ದುಡಿಯುವ ಮಹಿಳೆಯರು ಆಗ್ರಹಿಸಿದ್ದಾರೆ. ಅದೇ ವೇಳೆ ಗೃಹಿಣಿಯರು ದಿನಸಿ ಮತ್ತು ಅಡುಗೆ ಅನಿಲದಂತಹ ಅಗತ್ಯ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಚಿನ್ನದ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಮಧ್ಯಮ ವರ್ಗದ ಮಹಿಳೆಯರು ಆಸೆ ಪಡುತ್ತಿದ್ದಾರೆ.

ಮಣ್ಣಿನಲ್ಲಿ ವಿಲೀನವಾಗುವ ಸ್ಯಾನಿಟರಿ ಉತ್ಪನ್ನ ತಯಾರಿಕೆಗೆ ಸಿಗಲಿ ಪ್ರೋತ್ಸಾಹ ಸ್ಯಾನಿಟರಿ ಪ್ಯಾಡ್​ಗಳ ಬದಲು ಮಣ್ಣಿನಲ್ಲಿ ವಿಲೀನವಾಗಿ ಹೋಗುವ ಹೈಜೀನ್ ಪ್ರಾಡೆಕ್ಟ್ ಗಳನ್ನು ಬಳಸಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಪ್ಲಾಸ್ಟಿಕ್ ಇರುವ ಸ್ಯಾನಿಟರಿ ಪ್ಯಾಡ್​ಗಳಿಂದ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನು ನಿಯಂತ್ರಿಸಲು ಮತ್ತು ಆರೋಗ್ಯ ದೃಷ್ಟಿಯಿಂದ ಪುನರ್ಬಳಕೆಯ ಸ್ಯಾನಿಟರಿ ಉತ್ಪನ್ನಗಳಾದ ಬಟ್ಟೆಯ ಪ್ಯಾಡ್, ಮೆನುಸ್ಟ್ರಲ್ ಕಪ್ ಬಳಕೆಯತ್ತ ಮಹಿಳೆಯರು ಒಲವು ತೋರುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಈ ರೀತಿಯ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡಬೇಕಿದೆ. ಇದರಿಂದ ಸ್ಟಾರ್ಟ್ ಅಪ್ ಗಳಿಗೂ ಮಾರುಕಟ್ಟೆ ಲಭಿಸಲಿದ್ದು, ಉತ್ಪನ್ನಗಳ ಮಾರಾಟ ಜತೆಗೆ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂಬುದು ಮಹಿಳೆಯರ ಅಂಬೋಣ.

ನಿರ್ಭಯಾ ಫಂಡ್ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ  ಪ್ರಕರಣದ ನಂತರ ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ  ಯುಪಿಎ ಸರ್ಕಾರ ಈ ನಿರ್ಭಯಾ ನಿಧಿ ಸ್ಥಾಪಿಸಿತ್ತು.  2020 ಮಾರ್ಚ್ ತಿಂಗಳಲ್ಲಿ ಸರ್ಕಾರ ನೀಡಿದ ಅಂಕಿಅಂಶ ಪ್ರಕಾರ ದೇಶದಲ್ಲಿ ನಿರ್ಭಯಾ ನಿಧಿ ಬಳಕೆಯಾಗಿದ್ದು ಶೇ.25ಕ್ಕಿಂತಲೂ ಕಡಿಮೆ.

ನಿರ್ಭಯಾ ನಿಧಿ ಬಳಕೆ ಉದ್ದೇಶ 1. ಒನ್‌ ಸ್ಟಾಪ್‌ ಸೆಂಟರ್‌ (ಒಎಸ್‌ಸಿ) ಸ್ಥಾಪನೆ 2. ಮಹಿಳಾ ಸಹಾಯವಾಣಿ ಸಾರ್ವತ್ರಿಕರಣ 3. ಮಹಿಳಾ ಪೊಲೀಸ್‌ ವಾಲಂಟಿಯರ್‌ ಯೋಜನೆ

2016 ರಿಂದ 19ರವರೆಗೆ ಒಎಸ್‌ಸಿಗೆ ಕೇಂದ್ರ ಮೀಸಲಿಟ್ಟ ಹಣ ₹ 219 ಕೋಟಿ ಆಗಿದ್ದರೂ ಇದರಲ್ಲಿ ರಾಜ್ಯಗಳು ಬಳಸಿದ ಪ್ರಮಾಣ ₹ 53.98 ಕೋಟಿ ಆಗಿದೆ. ಮಹಿಳಾ ಸಹಾಯವಾಣಿ ಸಾರ್ವತ್ರೀಕರಣಕ್ಕೆ ಕೇಂದ್ರ ಮೀಸಲಿರಿಸಿದ ಹಣ ₹ 20.24 ಕೋಟಿ ಆಗಿದ್ದು, ಇದರಲ್ಲಿ ರಾಜ್ಯಗಳು ಬಳಸಿದ್ದು ₹ 13.34 ಕೋಟಿ. ಮಹಿಳಾ ಪೊಲೀಸ್‌ ವಾಲಂಟಿಯರ್‌ ಯೋಜನೆಗೆ ಕೇಂದ್ರ ಸರಕಾರ ಮೀಸಲಿರಿಸಿದ ಹಣ ₹ 15.15 ಕೋಟಿ.  ರಾಜ್ಯಗಳು ಬಳಸಿದ ಪ್ರಮಾಣ ₹ 4.7 ಲಕ್ಷ ರೂ ಆಗಿದೆ. ಸಿಕ್ಕಿಂ, ಮಣಿಪುರ, ತ್ರಿಪುರಾ, ಕೇಂದ್ರಾಡಳಿತ ಪ್ರದೇಶವಾದ ದಮನ್‌ ಮತ್ತು ದಿಯು ನಿಧಿಯನ್ನು ಇಲ್ಲಿವರೆಗೆ ಬಳಸಿಯೇ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದರು.

ದೇಶದಲ್ಲಿ ನಿರ್ಭಯಾ ಪ್ರಕರಣದ ನಂತರ ಈ ರೀತಿಯ ಯಾವುದೇ ಘಟನೆ ಮರುಕಳಿಸಬಾರದು. ಮಹಿಳೆಯರಿಗೆ ಹೆಚ್ಚಿನ ಭದ್ರತೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ನಿರ್ಭಯಾ ನಿಧಿ ಸ್ಥಾಪಿಸಲಾಗಿತ್ತು. ಕೇಂದ್ರ ಸರ್ಕಾರ ನಿರ್ಭಯಾ ನಿಧಿಗೆ ಹಣ ಮೀಸಲಿಟ್ಟರೂ ರಾಜ್ಯ ಸರ್ಕಾರಗಳು ಅದನ್ನು ಸದ್ಬಳಕೆ ಮಾಡುತ್ತಿಲ್ಲ ಎಂಬುದು ಗಂಭೀರ ವಿಷಯ.

Budget Explainer | ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ ಎಂದರೇನು? ಸರ್ಕಾರಗಳ ಪಾಲಿಗೆ ಇದೇಕೆ ಹಗ್ಗದ ಮೇಲಿನ ನಡಿಗೆ?

ಚಿನ್ನ ಅಂದ್ರೆ ಆಪತ್ಕಾಲಕ್ಕಾಗುವ ರಮಣ ಅಂತಾರೆ ಶರವಣ

Published On - 7:01 am, Fri, 22 January 21