Shivamogga Blast ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟ, ಸಾವಿನ ಸಂಖ್ಯೆ 8ಕ್ಕೆ ಏರಿಕೆ
ನಿನ್ನೆ ರಾತ್ರಿ ಕೇಳಿಬಂದ ಭಾರಿ ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ನಿದ್ದೆ ಬಿಟ್ಟು ಮನೆಯಿಂದ ಹೊರಬಂದಿದ್ದ ಜನ ಏನ್ ಆ ಶಬ್ದ ಅಂತಾ ವಿಚಾರಿಸುತ್ತಿರುವಾಗಲೇ, ಮತ್ತೊಂದು ಮಹಾನ್ ಘನ ಘೋರ ಸುದ್ದಿಯೊಂದು ಅಪ್ಪಳಿಸಿತ್ತು. ಮೊದಲೇ ಭಯಭೀತರಾಗಿದ್ದ ಜನ, ತಡರಾತ್ರಿ ನಡೆದಿರೋ ದುರಂತ ನಿಜಕ್ಕೂ ಭಯಾನಕವಾಗಿದೆ.
ಶಿವಮೊಗ್ಗ: ಒಂದು ಕ್ಷಣ.. ಒಂದೇ ಒಂದು ಕ್ಷಣವಷ್ಟೇ.. ಇಲ್ಲಿನ ವಾತಾವರಣವೇ ಬದ್ಲಾಗಿ ಹೋಗಿತ್ತು. ಕಗ್ಗತ್ತಲ್ಲಿ ಅಯ್ಯೋ ಅಯ್ಯಯ್ಯೋ ಅಂತ ನೋವಿನಿಂದ ನರಳಾಡ್ತಿದ್ದವರು ಕೆಲ ಸೆಕೆಂಡ್‌ಗಳ ಬಳಿಕ ಅಲ್ಲಿ ಮೌನಕ್ಕೆ ಜಾರಿದ್ರು. ಇಡೀ ಪ್ರದೇಶ ಸೈಲೆಂಟ್. ಏನಾಗಿದೆ ಅಂತಾ ನೋಡುವಷ್ಟರಲ್ಲಿ ಸಾಲು ಸಾಲು ಹೆಣಗಳು ಉರುಳಿದ್ವು, ಮೃತದೇಹಗಳು ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ವಿದ್ವು.
ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟ, 8ಕ್ಕೂ ಹೆಚ್ಚು ಕಾರ್ಮಿಕರ ಸಾವು ರಾತ್ರಿ ಸುಮಾರು 10 ರಿಂದ 10.30ರ ಸಮಯವಿರಬಹುದು. ಜಿಲೆಟಿನ್ ತುಂಬಿದ್ದ ಲಾರಿಯೊಂದು ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಇನ್ನೇನು ಕ್ವಾರಿ ರೀಚ್ ಆಗ್ಬೇಕಿತ್ತು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಲಾರಿ ಬ್ಲಾಸ್ಟ್ ಆಗಿದೆ.
ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರ.. ಛಿದ್ರ..! ಲಾರಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳಲ್ಲಿ, ಬಹುತೇಕ ಜಿಲ್ಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಾರಿ ಛಿದ್ರ ಛಿದ್ರವಾಗಿದ್ರೆ, ಲಾರಿಯಲ್ಲಿದ್ದ ಬಿಹಾರ ಮೂಲದ 8ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ 8ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ. ಸ್ಫೋಟದ ತೀವ್ರತೆ ಹೇಗಿತ್ತು ಅಂದ್ರೆ, ದುರಂತದಲ್ಲಿ ಮೃತಪಟ್ಟಿರೋ ಅದೆಷ್ಟೋ ಕಾರ್ಮಿಕರ ಮೃತದೇಹ ಗುರುತೇ ಸಿಗದಷ್ಟು ಛಿದ್ರ ಛಿದ್ರವಾಗಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಆ್ಯಂಬುಲೆನ್ಸ್ ವಿಷ್ಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಘಟನಾ ಸ್ಥಳಕ್ಕೆ ಆಗಮಿಸಿದ್ರು. ಇದರ ಬೆನ್ನಲ್ಲೇ ಮೂರಕ್ಕೂ ಹೆಚ್ಚು ಌಂಬುಲೆನ್ಸ್ ದೌಡಾಯಿಸಿ ಬಂದ್ವು. ಇನ್ನು ಪೊಲೀಸರು ಛಿದ್ರ ಛಿದ್ರವಾಗಿ ಬಿದ್ದಿದ್ದ ಮೃತದೇಹಗಳ ಶೋಧಕಾರ್ಯದಲ್ಲಿ ತೊಡಗಿದ್ರು. ಘಟನಾ ಸ್ಥಳದಲ್ಲಿ ಕತ್ತಲು ಆವರಿಸಿದ್ದ ಕಾರಣ ಶೋಧಕಾರ್ಯ ನಿಧಾನವಾಗಿ ಸಾಗಿತ್ತು. ಪತ್ತೆಯಾದ ರಕ್ತಸಿಕ್ತ ನಾಲ್ವರ ಮೃತದೇಹಗಳನ್ನ ಌಂಬುಲೆನ್ಸ್‌ಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದ್ರು. ಉಳಿದ ಮೃತದೇಹಗಳಿಗೆ ತಡರಾತ್ರಿವರೆಗೂ ಶೋಧಕಾರ್ಯ ಮುಂದುವರೆದಿತ್ತು.
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಸ್ಫೋಟದ ತೀವ್ರತೆ ನೋಡಿದ್ರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕೆಲ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಳ್ಳುವ ಸಾಧ್ಯತೆಯಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಷ್ಟೇ ಅಲ್ಲ ಶೋಧಕಾರ್ಯಕ್ಕೆ ಕತ್ತಲು ಅಡ್ಡಿಯಾಗಿದ್ದರಿಂದ ಮೃತದೇಹಗಳ ಪತ್ತೆ ಹಚ್ಚಲು ಪರದಾಡುವಂತಾಗಿತ್ತು. ಇನ್ನು ಬೆಂಗಳೂರಿನಿಂದ ಹೊರಟಿರುವ ಎನ್ಡಿಆರ್ಎಫ್ ತಂಡ ಘಟನಾ ಸ್ಥಳಕ್ಕೆ ಆಗಮಿಸಲಿದ್ದು, ಕಾರ್ಯಾಚರಣೆಗೆ ನೆರವಾಗಲಿದೆ.
20 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಇಂತಹವೊಂದು ಅನಾಹುತಕ್ಕೆ ಕಾರಣ ಶಿವಮೊಗ್ಗದ ಹುಣಸೋಡು ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ. ಅಂದಹಾಗೆ ಈ ಜಾಗ ಅವಿನಾಶ್ ಎಂಬುವವರಿಗೆ ಸೇರಿದ್ದು. ಭಾಸ್ಕರ್ ಅನ್ನೋ ವ್ಯಕ್ತಿ ಗುತ್ತಿಗೆ ಪಡೆದು, ರೈಲ್ವೆ ಇಲಾಖೆಗೆ ಜಲ್ಲಿ ಪೂರೈಕೆ ಮಾಡ್ತಿದ್ದರಂತೆ. ಅಂದಹಾಗೆ ಇಲ್ಲಿರುವ ಬಂಡೆಗಳನ್ನ ಒಡೆಯಲು ದೊಡ್ಡ ಪ್ರಮಾಣದಲ್ಲಿ ಲಾರಿಯಲ್ಲಿ ಜಿಲೆಟಿನ್ ವಸ್ತು ಸಾಗಿಸ್ತಿದ್ದಾಗ ಸ್ಫೋಟ ಸಂಭವಿಸಿದೆ ಅಂತಾ ತಿಳಿದು ಬಂದಿದೆ.
ಒಟ್ನಲ್ಲಿ ಯಾರ ನಿರ್ಲಕ್ಷ್ಯವೋ ಏನೋ ದುರಂತದಲ್ಲಿ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ಅವರನ್ನೇ ನಂಬಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ.
ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆಂದು.. ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟ
Published On - 6:35 am, Fri, 22 January 21