AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 | ಬನ್ನಿ, ಅರ್ಥ ಮಾಡಿಕೊಳ್ಳೋಣ: ಏನಿದು ಧನವಿನಿಯೋಗ ವಿಧೇಯಕ, ಹಣಕಾಸು ಮಸೂದೆ?

ಯಾವ ಉದ್ದೇಶಕ್ಕೆ ಸರ್ಕಾರ ಎಷ್ಟು ಹಣ ಬಳಸಲಿದೆ ಎಂಬುದನ್ನು ಧನ ವಿನಿಯೋಗ ವಿಧೇಯಕ ವಿವರಿಸುತ್ತದೆ. ಈ ಹಣವನ್ನು ಸರ್ಕಾರ ಹೇಗೆ ಒಗ್ಗೂಡಿಸುತ್ತದೆ ಎಂಬುದನ್ನು ಹಣಕಾಸು ಮಸೂದೆ ವಿವರಿಸುತ್ತದೆ.

Budget 2021 | ಬನ್ನಿ, ಅರ್ಥ ಮಾಡಿಕೊಳ್ಳೋಣ: ಏನಿದು ಧನವಿನಿಯೋಗ ವಿಧೇಯಕ, ಹಣಕಾಸು ಮಸೂದೆ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ರಶ್ಮಿ ಕಲ್ಲಕಟ್ಟ
| Edited By: |

Updated on:Jan 28, 2021 | 10:07 PM

Share

ಫೆಬ್ರುವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು, ಕೋವಿಡ್ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವ ಜನತೆ ಈ ಬಾರಿಯ ಬಜೆಟ್ ಬಗ್ಗೆ ನಿರೀಕ್ಷೆಯ ಕಣ್ಣು ನೆಟ್ಟಿದ್ದಾರೆ. ಬಜೆಟ್ ಪ್ರಕ್ರಿಯೆ ಪ್ರತಿವರ್ಷ ನಡೆಯುತ್ತದೆ. ಬಜೆಟ್ ರೂಪಿಸುವುದು, ಮಂಡಿಸುವುದು ಹಲವು ಹಂತಗಳ ದೊಡ್ಡ ಪ್ರಕ್ರಿಯೆ. ಈ ಪ್ರಕ್ರಿಯೆಯ ಅತಿಮುಖ್ಯ ಹಂತ ಧನವಿನಿಯೋಗ ವಿಧೇಯಕ ಮತ್ತು ಹಣಕಾಸು ಮಸೂದೆಗಳ ಮಂಡನೆ ಮತ್ತು ಅನುಮೋದನೆ.

ಬಜೆಟ್ ಪ್ರಸ್ತಾಪ ಮತ್ತು ಅನುದಾನದ ಬೇಡಿಕೆ ಬಗ್ಗೆ ಚರ್ಚೆಯಾದ ನಂತರ ಸಂಸತ್ತಿನ ಕೆಳಮನೆ ಅಂದರೆ ಲೋಕಸಭೆಯಲ್ಲಿ ಹಣಕಾಸು ಸಚಿವರು ಧನವಿನಿಯೋಗ ವಿಧೇಯಕವನ್ನು ಮಂಡಿಸುತ್ತಾರೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ ಇದು ರಾಜ್ಯಸಭೆಯಲ್ಲಿ ಮಂಡನೆಯಾಗುತ್ತದೆ. ಈ ವಿಧೇಯಕಕ್ಕೆ ತಿದ್ದುಪಡಿ ಮಾಡಲು ಸೂಚಿಸುವ ಅಧಿಕಾರ ರಾಜ್ಯಸಭೆಗೆ ಇರುತ್ತದೆ. ಆದಾಗ್ಯೂ, ಲೋಕಸಭೆಯು ಅದನ್ನು ಸ್ವೀಕರಿಸಲೇಬೇಕೆಂಬ ನಿಯಮವಿಲ್ಲ. ಆದರೆ ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರವಾಗದಿದ್ದರೆ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ.

ಏನಿದು ಧನ ವಿನಿಯೋಗ ವಿಧೇಯಕ? ಧನ ವಿನಿಯೋಗ ವಿಧೇಯಕಕ್ಕೆ ಸಂಸತ್ ಅಂಗೀಕಾರ ನೀಡದೇ ಇದ್ದರೆ ಸಂಚಿತ ನಿಧಿಯಿಂದ ಸರ್ಕಾರ ಹಣವನ್ನು ವಿನಿಯೋಗ ಮಾಡಲು ಸಾಧ್ಯವಿಲ್ಲ. ಈ ಹಣವನ್ನು ಪಡೆದುಕೊಳ್ಳಲು ದೇಶದ (ಜನಪ್ರತಿನಿಧಿಗಳ) ಅನುಮತಿ ಕೋರುವ ಪ್ರಕ್ರಿಯೆಯೇ ಧನ ವಿನಿಯೋಗ ವಿಧೇಯಕ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶದ ಖರ್ಚು ವೆಚ್ಚಗಳಿಗಾಗಿ ಸಂಚಿತ ನಿಧಿಯಿಂದ ಹಣ ಪಡೆಯಲು ಇರುವ ಅಧಿಕಾರವನ್ನು ಧನ ವಿನಿಯೋಗ ವಿಧೇಯಕ ನೀಡುತ್ತದೆ.

ಹಣಕಾಸು ಮಸೂದೆಗಿಂತ ಇದು ಹೇಗೆ ಭಿನ್ನ? ಸರ್ಕಾರವು ಎಷ್ಟು ಮೊತ್ತದ ಹಣವನ್ನು ಯಾವ ಉದ್ದೇಶಗಳಿಗೆ ಬಳಸಲಿದೆ ಎಂಬುದುನ್ನು ಧನವಿನಿಯೋಗ ವಿಧೇಯಕ ವಿವರಿಸುತ್ತದೆ. ಅದೇ ವೇಳೆ ಇಷ್ಟು ಮೊತ್ತದ ಹಣವನ್ನು ಸರ್ಕಾರ ಹೇಗೆ ಒಗ್ಗೂಡಿಸಲಿದೆ ಎಂಬುದನ್ನು ಹಣಕಾಸು ಮಸೂದೆ ವಿವರಿಸುತ್ತದೆ.

ಏನಿದು ಹಣಕಾಸು ಮಸೂದೆ? ಭಾರತದ ಸಂವಿಧಾನದ 110ನೇ ಪರಿಚ್ಛೇದದ ಪ್ರಕಾರ ಹಣಕಾಸು ಮಸೂದೆಯು (Money Bill) ವಿತ್ತ ಸಚಿವರು ಪ್ರಸ್ತಾಪಿಸಿದ ತೆರಿಗೆಯಲ್ಲಿ ಬದಲಾವಣೆಗೆ ಅಗತ್ಯವಾದ ಕಾನೂನು ತಿದ್ದುಪಡಿಗಳನ್ನು ನಿಗದಿಪಡಿಸುತ್ತದೆ. ಕೇಂದ್ರ ಬಜೆಟ್‌ನಲ್ಲಿ ಮಾಡಿದ ತೆರಿಗೆ ಪ್ರಸ್ತಾವಗಳಿಗೆ ಅನುಗುಣವಾಗಿ ತೆರಿಗೆಗೆ ಸಂಬಂಧಿಸಿದ ವಿವಿಧ ಕಾನೂನುಗಳಲ್ಲಿ ಅಗತ್ಯವಿರುವ ಎಲ್ಲಾ ತಿದ್ದುಪಡಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಹಣಕಾಸು ಮಸೂದೆಯನ್ನು ಸಂಸತ್ತಿನ ಕೆಳಮನೆ (ಲೋಕಸಭೆ) ಅಂಗೀಕರಿಸಬೇಕು. ಲೋಕಸಭೆಯ ಅನುಮೋದನೆಯ ನಂತರ ಹಣಕಾಸು ಮಸೂದೆ ಹಣಕಾಸು ಕಾಯ್ದೆಯಾಗುತ್ತದೆ.

ಲೋಕಸಭೆಯ ಅನುಮೋದನೆಯ ನಂತರ ವಿಧೇಯಕವನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ರಾಜ್ಯಸಭೆಗೆ ಕಳಿಸಲಾಗುತ್ತದೆ. ಮಂಡನೆಯಾದ 14 ದಿನಗಳೊಳಗೆ ವಿಧೇಯಕವನ್ನು ಅಂಗೀಕಾರ ಮಾಡಿ ರಾಜ್ಯಸಭೆಯು ಲೋಕಸಭೆಗೆ ವಿಧೇಯಕವನ್ನು ಕಳಿಸಿಕೊಡಬೇಕು. ಈ ಮಸೂದೆಗೆ ರಾಜ್ಯಸಭೆಯು ಸೂಚಿಸಿದ ಎಲ್ಲ ಅಥವಾ ಕೆಲವು ಶಿಫಾರಸುಗಳನ್ನು ತಳ್ಳಿಹಾಕುವ ಹಕ್ಕು ಲೋಕಸಭೆಗೆ ಇರುತ್ತದೆ . ಸಂವಿಧಾನದ 117 ನೇ ಪರಿಚ್ಛೇದದ ಅನ್ವಯ ರಾಷ್ಟ್ರಪತಿ ಶಿಫಾರಸು ನಂತರವೇ ಮಸೂದೆಯನ್ನು ಹಣಕಾಸು ಮಸೂದೆಯನ್ನು ಲೋಸಭೆಯಲ್ಲಿ ಮಂಡಿಸಬೇಕು. ಲೋಕಸಭೆಯಲ್ಲಿ ಮಂಡಿಸುವ ಮೊದಲು ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ.

ಮಂಡನೆಯಾದ ಮಸೂದೆ Money Bill ಹೌದೋ ಅಲ್ಲವೋ ಎಂದು ಯಾರು ನಿರ್ಧರಿಸುತ್ತಾರೆ? ಲೋಕಸಭೆಯಲ್ಲಿ ಮಂಡನೆಯಾದ ಮಸೂದೆ Money Bill ಹೌದೋ ಅಲ್ಲವೋ ಎಂಬುದನ್ನು ಲೋಕಸಭೆಯ ಸ್ಪೀಕರ್ ನಿರ್ಧರಿಸುತ್ತಾರೆ. ಇಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮವಾಗಿರುತ್ತದೆ.

Union Budget 2021 ನಿರೀಕ್ಷೆ | ಜಿಎಸ್​ಟಿ ಪಾವತಿಯಲ್ಲಿ ಲಂಚಾವತಾರ, ಬೇಕಿದೆ ಕಡಿವಾಣ

Published On - 10:05 pm, Thu, 28 January 21

Follow Us