ಏನಿದು ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಸುತ್ತ ಬೆಳೆಯುತ್ತಿರುವ ಬಿಜೆಪಿ ರಾಜಕೀಯ?
ಗುರುವಾರ ಬೆಳಿಗ್ಗೆ ತನಕ ಯಡಿಯೂರಪ್ಪ ಅವರ ಜೊತೆಗಿದ್ದ ಸಂತೋಷ್ ಸಂಜೆಯಾಗುವುದರೊಳಗೆ ಅಂಥ ಬದಲಾವಣೆ ಏನಾಯ್ತು? ಇದು ಮೊದಲ ಪ್ರಶ್ನೆಯಾದರೆ, ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಕ್ಕೂ ಡಿ.ಕೆ. ಶಿವಕುಮಾರ್ ಎತ್ತಿರುವ ಓರ್ವ ವಿಧಾನ ಪರಿಷತ್ ಶಾಸಕನ ವಿಡಿಯೋಕ್ಕೂ ಯಾವ ಸಂಬಂಧ? ಆ ವಿಡಿಯೋನಿಂದಾಗಿ ಸಂತೋಷ್ ಇಂಥ ಪ್ರಯತ್ನಕ್ಕೆ ಕೈ ಹಾಕಿದರೆ?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಅವರ ಆತ್ಮಹತ್ಯೆ ಯತ್ನ ಕರ್ನಾಟಕದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹೇಳಿ ಕೇಳಿ ಅವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಮತ್ತು ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಿನಿಂದ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ತುಂಬಾ ಪವರ್ಫುಲ್ ಆಗಿರುವವರು. ರಾಜಕೀಯವಾಗಿ ತುಂಬಾ ಆಸೆ ಇಟ್ಟುಕೊಂಡಿರೋ ಸಂತೋಷ್ ಅವರಿಗೆ ಇನ್ನೂ 37 ರ ಹರೆಯ. ಇಷ್ಟು ಚಿಕ್ಕ ವಯಸ್ಸಿನ ಸಂತೋಷ್ ತನ್ನ ಜೀವಕ್ಕೆ ಕಂಟಕ ತಂದುಕೊಳ್ಳುವ ಪ್ರಯತ್ನ ಮಾಡಿದ್ದೇಕೆ? ಇದು ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ, ಸಂತೋಷ್ ಯಡಿಯೂರಪ್ಪ ಅವರಿಗೆ ಬಹಳ ಹತ್ತಿರವಿದ್ದವರು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಆಗುವವರೆಗೂ, ಯಡಿಯೂರಪ್ಪ ಅವರಿಗೆ ಕಣ್ಣ, ಕಿವಿ, ಮಾತಾಗಿ ಕೆಲಸ ಮಾಡಿದ್ದ್ದೇ ಸಂತೋಷ್.
ವಿಜಯಂದ್ರ vs ಸಂತೋಷ್
ಈಗ್ಗೆ ಕೆಲವು ದಿನದ ಹಿಂದಿನವರೆಗೂ ಸಂತೋಷ್, ಯಡಿಯೂರಪ್ಪ ಅವರಿಗೆ ತುಂಬಾ ಹತ್ತಿರವಿದ್ದವರು. ಆದರೆ, ಯಾವಾಗ ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ತಮ್ಮ ತಂದೆಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೋ ಆಗ ಸಂತೋಷ್ಗೆ ಶುರುವಾಯ್ತು ಕಂಟಕ. ವಿಜಯೇಂದ್ರ ಪಡೆದುಕೊಂಡ ಮಾಹಿತಿಯಂತೆ, ಸಂತೋಷ್ ತಮ್ಮ ತಂದೆಯವರ ಉದ್ದೇಶಕ್ಕೆ ವಿರುದ್ಧವಾಗಿ (working at cross purpose) ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯಿತು. ವಿಜಯೇಂದ್ರ ಅವರ ಅಣತಿಯಂತೆ ಸಂತೋಷ್ಗೆ ಹೋಗುತ್ತಿದ್ದ ಕಡತಗಳು ನಿಂತವು. ಬರೀ ವಿಧಾನ ಸೌಧದಲ್ಲಿ ಕಚೇರಿ ಮತ್ತು ನಾಮಫಲಕ ಮಾತ್ರ ಸಂತೋಷ್ ಪಾಲಿಗೆ ಉಳಿಯಿತು. ಈ ಮಧ್ಯೆ ರಾಜಕೀಯ ಕಾರ್ಯದರ್ಶಿಯಾಗಿ ಕೆಲವರಿಗೆ ಕೆಲಸ ಮಾಡಿಕೊಡುವುದಾಗಿ ಕೊಟ್ಟ ವಚನಗಳನ್ನು ಪೂರೈಸಲೇಬೇಕೆಂಬ ಒತ್ತಡ ಹೊರಗಿನಿಂದ ಜಾಸ್ತಿಯಾಯಿತು. ಇದರಿಂದ ಸಂತೋಷ್ ತುಂಬಾ ನೊಂದರು.
ಸಂತೋಷ್ಗೆ ಅನಾಮಿಕ ವಿಡಿಯೋ ಸಂಬಂಧ ಏನು?
ಗುರುವಾರ ಬೆಳಿಗ್ಗೆ ತನಕ ಯಡಿಯೂರಪ್ಪ ಅವರ ಜೊತೆಗಿದ್ದ ಸಂತೋಷ್ ಸಂಜೆಯಾಗುವುದರೊಳಗೆ ಅಂಥ ಬದಲಾವಣೆ ಏನಾಯ್ತು? ಇದು ಮೊದಲ ಪ್ರಶ್ನೆಯಾದರೆ, ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಕ್ಕೂ ಡಿ.ಕೆ. ಶಿವಕುಮಾರ್ ಎತ್ತಿರುವ ಓರ್ವ ವಿಧಾನ ಪರಿಷತ್ ಶಾಸಕನ ವಿಡಿಯೋಕ್ಕೂ ಯಾವ ಸಂಬಂಧ? ಆ ವಿಡಿಯೋನಿಂದಾಗಿ ಸಂತೋಷ್ ಇಂಥ ಪ್ರಯತ್ನಕ್ಕೆ ಕೈ ಹಾಕಿದರೆ? ನಗರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿರುವ ಸಂತೋಷ್ ಗುಣಮುಖರಾಗಿ ಬಂದ ಮೇಲೆಯೇ ನಿಜವಾದ ಕಾರಣ ಹೊರಜಗತ್ತಿಗೆ ಗೊತ್ತಾಗಬೇಕು.
ಆದರೆ, ಭಾರತೀಯ ಜನತಾ ಪಕ್ಷದ ಮೂಲಗಳ ಪ್ರಕಾರ ಸಂತೋಷ್ ಆತ್ಮಹತ್ಯೆ ಪ್ರಯತ್ನಕ್ಕೂ ಆ ವಿಡಿಯೋಕ್ಕೂ ನೇರ ಸಂಬಂಧ ಇದ್ದಂತೆ ಕಾಣುತ್ತಿಲ್ಲ. ಡಿ.ಕೆ. ಶಿವಕುಮಾರ್ ಹೇಳಿದಂತೆ, ಒಂದೊಮ್ಮೆ ಸಂತೋಷ್ ಅವರ ಬಳಿ ಬೇರೆ ಯಾವುದೋ ನಾಯಕರ ವಿಡಿಯೋ ಇದ್ದರೆ, ಬಿಜೆಪಿ ನಾಯಕರು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗಿಶ್ವರ್ ಮತ್ತು ಭಾರೀ ನೀರಾವರಿ ಸಚಿವ, ರಮೇಶ್ ಜಾರಕಿಹೊಳಿ ಅವರ ಹೆಸರನ್ನು ಈ ವಿಡಿಯೋ ಜೊತೆ ತಳುಕು ಹಾಕಿದ್ದು ಎಷ್ಟು ಸರಿ? ಪಕ್ಷದ ಮೂಲಗಳ ಪ್ರಕಾರ, ಸಂತೋಷ್, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗಿಶ್ವರ್ ಮತ್ತು ಭಾರೀ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ತುಂಬಾ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಸರಕಾರ ರಚಿಸುವ ಮೊದಲು ಶಾಸಕರ ನಡುವೆ ನಡೆದ ಮಾತುಕತೆ, ಸರಣಿ ಸಭೆಗಳು, ಮುಂಬೈ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿನ ಮಾತುಕತೆಗಳ ವಿಡಿಯೋ ಸಂತೋಷ್ ಬಳಿ ಇದೆ ಎಂಬುದು ಪಕ್ಷದ ಮೂಲಗಳ ವಾದ. ಇಲ್ಲೀವರೆಗೆ ಈ ಕುರಿತಾದ ಸಾಂದರ್ಭಿಕ ಸಾಕ್ಷ್ಯಧಾರಗಳು ಇನ್ನೂ ಹೊರಬಂದಿಲ್ಲ. ಹಾಗಾಗಿ ಇದರ ಸತ್ಯಾಸತ್ಯತೆ ಕುರಿತು ಏನನ್ನೂ ಹೇಳುವುದು ಕಷ್ಟ.
ಹಾಗಾದರೆ ಸಂತೋಷ್ ಮತ್ತು ಯೋಗೀಶ್ವರ್, ಜಾರಕಿಹೊಳಿಗೂ ಏನು ಸಂಬಂಧ?
ಸಂತೋಷ್ ಎದುರಿಸುತ್ತಿರುವ ಕಷ್ಟದ ದಿನದಲ್ಲಿ ಅವರ ಜೊತೆಗೆ ನಿಂತವರು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗಿಶ್ವರ್ ಮತ್ತು ರಮೇಶ್ ಜಾರಕಿಹೊಳಿ. ಯಾಕೆಂದರೆ, ಈ ಸರಕಾರ ತರಲು ಪ್ರಯತ್ನ ಪಟ್ಟವರಲ್ಲಿ ಯೋಗಿಶ್ವರ್ ಕೂಡ ಒಬ್ಬರು. ಆ ಕಡೆ ಕಾಂಗ್ರೆಸ್ ಭಿನ್ನಮತೀಯ ಶಾಸಕರನ್ನು ಕೂಡಿಟ್ಟುಕೊಂಡು, ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಜೊತೆ ಮಾತನಾಡಿದ ಕೆಲವರಲ್ಲಿ ರಮೇಶ್ ಜಾರಕಿಹೊಳಿ ಕೂಡ ಒಬ್ಬರು. ಹಾಗಾಗಿ ಅವರೀರ್ವರಿಗೂ ಸಂತೋಷ್ ಬಳಿ ಈ ವಿಡಿಯೋ ಇರುವುದು ಗೊತ್ತು. ಈಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಹೊತ್ತಿನಲ್ಲಿ ಸಂತೋಷ್ ಬೆಳವಣಿಗೆ ನಡೆದಿರುವುದು ವಿಶೇಷ.
ಪಕ್ಷದ ಮೂಲಗಳ ಪ್ರಕಾರ ಈ ಹಿಂದೆ ಯೋಗಿಶ್ವರ್ ಮಂತ್ರಿ ಪಟ್ಟ ತೆಗೆದುಕೊಳ್ಳಲು ಬಹಳ ಪ್ರಯತ್ನ ಮಾಡಿದ್ದಾರೆ. ಯಾವಾಗ ಮಂತ್ರಿ ಪಟ್ಟ ಸಿಗುವುದು ಕಷ್ಟ ಎಂಬುದು ತಿಳಿಯಿತೋ ಆಗ ಅವರು ವಿಚಲಿತರಾದರು. ಅದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಂದ ತಮಗೆ ಕವಡೆ ಕಿಮ್ಮತ್ತು ಸಿಗುತ್ತಿಲ್ಲ ಎನ್ನುವುದು ಖಾತ್ರಿಯಾದಾಗಿನಿಂದ ಯೋಗಿಶ್ವರ್ ಸಿಟ್ಟಾಗಿದ್ದಾರೆ. ಯಡಿಯೂರಪ್ಪ ಮೇಲೆ ಹಗೆ ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಆಗ ಸಿಕ್ಕಿದ್ದೇ ಈ ವಿಡಿಯೋ. ಅದನ್ನಿಟ್ಟುಕೊಂಡು ತನಗೆ ಮಂತ್ರಿ ಪದವಿ ಕೊಡಬೇಕೆಂದು ಯೋಗಿಶ್ವರ್ ದುಂಬಾಲು ಬಿದ್ದಿದ್ದಾರೆ ಮತ್ತು ಯೋಗಿಶ್ವರ್ಗೆ ಜಾರಕಿಹೊಳಿ ಸಾಥ್ ಕೊಡುತ್ತಿದ್ದಾರೆ, ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಾರಕಿಹೊಳಿಗೆ ಏಕೆ ಸಿಟ್ಟು?
ಯಡಿಯೂರಪ್ಪ ಜೊತೆ ಮಂತ್ರಿಯಾಗಿ ಭಾರೀ ನೀರಾವರಿ ಖಾತೆ ತೆಗೆದುಕೊಂಡು ಕೆಲಸ ಮಾಡುತ್ತಿರುವ ರಮೇಶ್ ಜಾರಕಿಹೊಳಿಗೆ ಕೂಡ ಖುಷಿ ಇಲ್ಲ. ಯಾಕೆಂದರೆ, ಈ ಸರಕಾರ ರಚಿಸುವಾಗ ಜಾರಕಿಹೊಳಿ ಪಟ್ಟು ಹಿಡಿದಿದ್ದು ಉಪ ಮುಖ್ಯಮಂತ್ರಿ ಪಟ್ಟಕ್ಕೆ. ಆಗ ಅದು ಅವರಿಗೆ ಸಿಕ್ಕಿರಲಿಲ್ಲ. ಅದೂ ಕೂಡ ತಮ್ಮದೇ ಜಿಲ್ಲೆಯವರಾದ ಲಕ್ಷ್ಮಣ ಸವದಿ ಅಲ್ಲಿ ಕುಳಿತಿರುವುದನ್ನ ನೋಡಿ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ಪಕ್ಷದಲ್ಲಿನ ಕೆಲವು ನಾಯಕರ ವಾದ. ಮೊದ ಮೊದಲು ಯಡಿಯೂರಪ್ಪಗೆ ಸವದಿ ಕಂಡರೆ ಆಗುತ್ತಿರಲಿಲ್ಲ, ಹಾಗಾಗಿ ಜಾರಕಿಹೊಳಿ ಖುಷಿಯಲ್ಲಿದ್ದರು. ಈ ಬಾರಿ ಪುನರಚನೆ/ ವಿಸ್ತರಣೆ ಹೊತ್ತಿನಲ್ಲಿ ಉಪ ಮುಖ್ಯಮಂತ್ರಿಯಾಗಲೇಬೇಕೆಂದು ಓಡಾಡುತ್ತಿರುವವರು ಜಾರಕಿಹೊಳಿ. ಈಗ ಅವರು ಕೂಡ ಸಂತೋಷ್ ಜೊತೆ ಕೈ ಜೋಡಿಸಿದ್ದಾರೆಂಬುದು ಪಕ್ಷದ ಮೂಲಗಳು ಹೇಳುತ್ತಿವೆ.
ಮೇಲ್ನೋಟಕ್ಕೆ ಇವೆಲ್ಲ ನಿಜವೆಂದಾದರೂ, ಸಂತೋಷ್ ಆತ್ಮಹತ್ಯೆಗೆ ಪ್ರಯತ್ನಸಿದ್ದೇಕೆ? ಈ ಪ್ರಶ್ನೆಗೆ ಬಿಜೆಪಿ ನಾಯಕರ ಬಳಿ ಇನ್ನು ತರ್ಕಬದ್ಧ ಉತ್ತರವಾಗಲಿ ಅಥವಾ ವಿವರಣೆಯಾಗಲಿ ಸಿಗುತ್ತಿಲ್ಲ. ಇದನ್ನೂ ಓದಿ CM ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಯ್ತಾ.. ಆ ಪರ್ಸನಲ್ ವಿಡಿಯೋ?
Published On - 4:49 pm, Sat, 28 November 20