ಮೈಸೂರು: ಜಿಲ್ಲೆಯ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಂದು ಮೀನು ಗೂಬೆ ಮಾರುತ್ತಿದ್ದ ಮೂವರನ್ನು ಮಂಡ್ಯದ ಶ್ರೀರಂಗಪಟ್ಟಣದ ಬಳಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಂಡ್ಯ ಮೂಲದ ಕುಮಾರ್, ಮೊಹಮ್ಮದ್ ರಫಿ ಹಾಗೂ ರಾಜೇಶ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕಂದು ಮೀನು ಗೂಬೆ, ಬೈಕ್ ಹಾಗೂ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು, ಅರಣ್ಯ ಸಂಚಾರಿ ದಳದ DCF ಎ.ಟಿ ಪೂವಯ್ಯರ ಮಾರ್ಗದರ್ಶನದಲ್ಲಿ ಮತ್ತು RFO ವಿವೇಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ನಕ್ಷತ್ರ ಆಮೆ ಮಾರಾಟ.. ನಾಲ್ವರ ಬಂಧನ ಇತ್ತ, ಅಕ್ರಮವಾಗಿ ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ 4 ಮಂದಿಯನ್ನು ಕೊಡಗು ಜಿಲ್ಲೆಯ ಮಡಿಕೇರಿಯ ಸಿಐಡಿ ಪೊಲೀಸರ ಅರಣ್ಯ ಘಟಕದ ಸಿಬ್ಬಂದಿ ಬಂಧಿಸಿದ್ದಾರೆ. ಅಂದ ಹಾಗೆ, ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲುನಲ್ಲಿ ನಡೆದಿದೆ.
ಆಂಧ್ರಪ್ರದೇಶದ ಲಕ್ಷ್ಮಣ, ರಾಮಪೋಗು ಲಕ್ಷ್ಮೀನಾರಾಯಣ, ನಾಗೇಶ್ ಹಾಗೂ ತೆಲಂಗಾಣದ ತೆಲಗು ತಿಮ್ಮಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಗೋಣಿಕೊಪ್ಪಲು ಪಟ್ಟಣಕ್ಕೆ ನಕ್ಷತ್ರ ಆಮೆ ಮಾರಾಟ ಮಾಡಲು ಬಂದಿದ್ದ ಆರೋಪಿಗಳು, 1,50,000 ರೂಪಾಯಿಗೆ ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಬಂಧಿತರಿಂದ ಮಹೀಂದ್ರ ವೆರೀಟೋ ಕಾರು ಮತ್ತು ಆಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೀಪಾವಳಿ ವೇಳೆ ಗೂಬೆ ಪೂಜೆ: ಲಕ್ಷ್ಮೀ ವಾಹನ ಎಂದು ತಿಳಿದಿದ್ದೂ ಕೊಲ್ತಾರೆ.. ಏಕೆ ಇಂತಹ ದುಷ್ಕೃತ್ಯ?