ಹಾಸನ: ದೇವರ ಬಳಿ ಬರುವ ಭಕ್ತರು ಕಷ್ಟ ಪರಿಹಾರ ಮಾಡು, ಸುಖ ಸಮೃದ್ದಿ ಕರುಣಿಸು ಎಂದು ಬೇಡಿಕೊಳ್ಳೋದು ಮಾಮೂಲಿ, ಆದ್ರೆ ನೆನ್ನೆ ಕೊನೆಯಾದ ಹಾಸನಾಂಬೆ ಉತ್ಸವದ ಹುಂಡಿ ಎಣಿಕೆ ವೇಳೆ ಸಿಕ್ಕ ಕೋರಿಕೆ ಪತ್ರ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ.
ನನ್ನ ಹೆಂಡತಿ ಮಕ್ಕಳು ನನ್ನಿಂದ ದೂರವಾಗಿದ್ದಾರೆ..
ಹೌದು ಇಂದು ಬೆಳಿಗ್ಗೆಯಿಂದ ಹಾಸನಾಂಬೆಯ 9 ಹುಂಡಿಗಳನ್ನ ಓಪನ್ ಮಾಡಿದಾಗ ಸಿಕ್ಕ ಪತ್ರಗಳು ಚಿತ್ರ ವಿಚಿತ್ರವಾಗಿದ್ದವು. ಪ್ರತಾಪ್ ಎಂಬ ಭಕ್ತನೊರ್ವ ಬರೆದಿರುವ ಪತ್ರ ಅದಿಕಾರಿಗಳನ್ನೇ ಹೌಹಾರುವಂತೆ ಮಾಡಿದೆ. ಹೌದು ಎರಡು ಪುಟ ಪತ್ರ ಬರೆದಿರೊ ಈತ ನಾನು ಮೂರು ಹೊತ್ತೂ ಕುಡಿತೀನಿ ನನ್ನನ್ನು ಕ್ಷಮಿಸು ತಾಯಿ. ಇದೇ ಕಾರಣಕ್ಕೆ ನನ್ನ ಹೆಂಡತಿ ಮಕ್ಕಳು ನನ್ನಿಂದ ದೂರವಾಗಿದ್ದಾರೆ.
ಅಕಸ್ಮಾತ್ ಮಾತು ತಪ್ಪಿ ಕುಡಿದರೆ ನನ್ನ ಕ್ಷಮಿಸು ತಾಯಿ.. ನಾನು ಇನ್ಮುಂದೆ ಬೆಳಿಗ್ಗೆ ಮದ್ಯಾಹ್ನ ಕುಡಿಯೊದಿಲ್ಲ. ರಾತ್ರಿ ವೇಳೆ ಮಾತ್ರ ಸ್ವಲ್ಪ ಸ್ವಲ್ಪ ಕುಡಿತೀನಿ, ಅಕಸ್ಮಾತ್ ಮಾತು ತಪ್ಪಿ ಕುಡಿದರೆ ನನ್ನ ಕ್ಷಮಿಸು ತಾಯಿ ಎಂದು ಹಾಸನಾಂಬೆಯಲ್ಲಿ ಮೊರೆಯಿಟ್ಟಿದ್ದಾನೆ. ನಾನು ಕುಡಿಯೋದನ್ನ ಬಿಟ್ಟರೆ ಮುಂದಿನ ಬಾರಿ ಮಡದಿ ಮಕ್ಕಳ ಜೊತೆಗೆ ಬಂದು ನಿನ್ನ ದರ್ಶನ ಮಾಡ್ತೀನಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಇದೇ ರೀತಿಯಲ್ಲಿ ಪತ್ರ ಬರೆದಿರೋ ಮತ್ತೋರ್ವ ಮಧ್ಯ ವ್ಯಸನಿ ಜೈರಾಜ್, ನಾನು ಹೆಚ್ಚಾಗಿ ಕುಡಿತಿನಿ ಅದನ್ನ ನಾನು ಬಿಡಬೇಕು. ನನ್ನ ಕಷ್ಟ ದೂರ ಆಗಬೇಕು ಎಂದು ದೇವಿಯಲ್ಲಿ ಮೊರೆಯಿಟ್ಟಿದ್ದಾರೆ.
ನವೆಂಬರ್ 5ರಿಂದ 16 ರವರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ನೆನ್ನೆಗೆ ಕೊನೆಯಾಗಿತ್ತು. ಇಂದು ದೇವಾಲಯದ ಆಡಳಿತಾದಿಕಾರಿಯೂ ಆಗಿರುವ ಹಾಸನ ಉಪ ವಿಭಾಗ ಅಧಿಕಾರಿ ಜಗದೀಶ್ ಸಮ್ಮುಖದಲ್ಲಿ ಹುಂಡಿ ಎಣಿಕೆ ಆರಂಭ ಆದಾಗ ಇಂತಹ ಛಿತ್ರ ವಿಚಿತ್ರ ಪತ್ರಗಳು ಸಿಕ್ಕಿವೆ.
ನನಗೆ ಪಿಡಬ್ಲ್ಯೂ ಕೆಲಸ ಸಿಗಲಿ..
ವಿದ್ಯಾರ್ಥಿಯೋರ್ವ ನೀಟ್ ಪರೀಕ್ಷೆಯಲ್ಲಿ ಒಳ್ಳೆ ಅಂಕ ಬಂದು MBBS ಸೀಟ್ ಸಿಗಲಿ ಎಂದು ಬೇಡಿಕೊಂಡಿದ್ದರೆ, ವರ್ಗಾವಣೆ ಆಗಲಿ, ಪಿಡಬ್ಲ್ಯೂ ಕೆಲಸ ಸಿಗಲಿ, ಮುಂದಿನ ಬಾರಿ ಎಲ್ಲರಿಗೂ ಹಾಸನಾಂಬೆ ದರ್ಶನ ಸಿಗಲಿ ಎಂದು ಬರೆದಿದ್ದಾರೆ. ಇನ್ನೂ ಕೆಲವರು ಕೊರೊನಾ ಬೇಗನೆ ದೂರವಾಗಲಿ ಎಂದು ಹೀಗೆ 30ಕ್ಕೂ ಅಧಿಕವಾದ ಬಗೆ ಬಗೆಯ ಪತ್ರಗಳು ಹಾಸನಾಂಬೆಗೆ ಬಂದಿದ್ದು ಭಕ್ತರ ಈ ಕೋರಿಕೆ ಈಡೇರುತ್ತಾ ಎನ್ನೊದನ್ನ ಹಾಸನಾಂಬೆಯೇ ಬಲ್ಲಳು.
-ಮಂಜುನಾಥ್ ಕೆಬಿ