ಜಾಹಿರಾತು ಫಲಕಗಳ ಹಾವಳಿ: ಶತಾಯುಷಿ ಮರಗಳು ಹೇಳುತ್ತಿವೆ ಕಣ್ಣೀರ ಕತೆ
ತಮ್ಮ ಸಂಸ್ಥೆಗಳ ಜಾಹೀರಾತಿಗೆ ಇದೇ ಗಿಡಗಳನ್ನು ಬಳಸಿಕೊಳ್ಳುತ್ತಿರೋದೇ ಸಮಸ್ಯೆಗೆ ಕಾರಣವಾಗಿದೆ. ಹೀಗೆ ಮರಗಳಿಗೆ ಹತ್ತಾರು ತಾರ್ ಮೊಳೆ ಹೊಡೆದು ಜಾಹಿರಾತುಗಳನ್ನು ನೇತು ಹಾಕಿದವರ ಸಂಪರ್ಕ, ವಿಳಾಸವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಲು ಮನಸ್ಸು ಮಾಡುತ್ತಿಲ್ಲ!
ಧಾರವಾಡ: ವಿದ್ಯಾಕಾಶಿ ಧಾರವಾಡ ಸಸ್ಯಕಾಶಿಯೂ ಹೌದು. ಇಲ್ಲಿನ ಅದ್ಭುತ ಪರಿಸರಕ್ಕೆ ಕಾರಣ ನೂರಾರು ವರ್ಷಗಳಿಂದ ಬೆಳೆದು ನಿಂತಿರೋ ಗಿಡ-ಮರಗಳು. ಆದರೆ ಇಂಥ ಮರಗಳು ಸ್ವಾರ್ಥಿಗಳಿಂದಾಗಿ ಕಣ್ಣೀರು ಹಾಕುವಂತಾಗಿದೆ.
ಶತಮಾನ ಕಂಡ ಅರಳಿ, ಆಲ, ಅತ್ತಿ ಮತ್ತು ಹುಣಿಸೆ ಮರಗಳೂ ಸೇರಿದಂತೆ, ಅರಣ್ಯ ಇಲಾಖೆ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ರಸ್ತೆ ಬದಿಗೆ ನೆಟ್ಟ ರೇನ್ ಟ್ರೀ, ಪೆಥೋಡಿಯ, ಫಾರೆಸ್ಟ್ ಫ್ಲೇಮ್ ಮರಗಳಿಗೆ ಧಾರವಾಡದ ತುಂಬ ಅನಧಿಕೃತ ಜಾಹಿರಾತುಗಳನ್ನು ಹತ್ತಾರು ಮೊಳೆ ಹೊಡೆದು ನೇತು ಹಾಕಲಾಗುತ್ತಿದೆ. ಈ ಮುಂಚೆ ಹಲವಾರು ಬಾರಿ ಪರಿಸರ ಪ್ರೇಮಿ ಸಂಘಟನೆಗಳು ಇದರ ವಿರುದ್ಧ ಹೋರಾಟ ನಡೆಸಿವೆ.
ಮೊಳೆ ಕಿತ್ತು ಹಾಕಿ, ಜಾಹಿರಾತು ಫಲಕ ತೆಗೆದು ಹಾಕಿ ಎಚ್ಚರಿಕೆಯನ್ನು ನೀಡಿದ್ದವು. ಈ ರೀತಿ ಮಾಡುವುದರಿಂದ ಮರಗಳಿಗೆ ನಂಜಾಗಬಹುದು ಅನ್ನೋ ಆತಂಕ ಹೋರಾಟಗಾರರದ್ದು. ಆದರೆ ಇದೀಗ ಮತ್ತೆ ಜಾಹಿರಾರು ಫಲಕಗಳನ್ನು ಮತ್ತೆ ಗಿಡ-ಮರಗಳ ಕಾಂಡಕ್ಕೆ ಮೊಳೆಗಳನ್ನು ಬಳಸಿ ಅಳವಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಮುತ್ತಲಿನ ಗಿಡಗಳಿಗೂ ಇಂಥದ್ದೇ ಸ್ಥಿತಿ ಬಂದೊದಗಿದೆ. ಧಾರವಾಡ ವಿದ್ಯಾಕಾಶಿಯೂ ಆಗಿರುವುದರಿಂದ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಟ್ಯುಟೋರಿಯಲ್, ಪಿಜಿಗಳಿವೆ. ಅನೇಕ ಶಾಲಾ-ಕಾಲೇಜುಗಳಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಲು ಮನಸ್ಸು ಮಾಡುತ್ತಿಲ್ಲ.. ಇವರೆಲ್ಲ ತಮ್ಮ ಸಂಸ್ಥೆಗಳ ಜಾಹೀರಾತಿಗೆ ಇದೇ ಗಿಡಗಳನ್ನು ಬಳಸಿಕೊಳ್ಳುತ್ತಿರೋದೇ ಸಮಸ್ಯೆಗೆ ಕಾರಣವಾಗಿದೆ. ಹೀಗೆ ಮರಗಳಿಗೆ ಹತ್ತಾರು ತಾರ್ ಮೊಳೆ ಹೊಡೆದು ಜಾಹಿರಾತುಗಳನ್ನು ನೇತು ಹಾಕಿದವರ ಸಂಪರ್ಕ, ವಿಳಾಸವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ದೂರು ದಾಖಲಿಸಲು ಮನಸ್ಸು ಮಾಡುತ್ತಿಲ್ಲ! ಇಲಾಖೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡರೆ ಜಾಹಿರಾತು ಫಲಕ ಅಳವಡಿಸುವವರು ಈ ಪರಿಯ ದಾರ್ಷ್ಟ್ಯದ ನಡೆಯನ್ನು ತೋರಲಾರರು. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣವಾಗಿದೆ.
ಇದೆಲ್ಲ ಒಂದು ಕಡೆಯಾದರೆ ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬಗಳ ಬೀಳದಂತೆ ಅವುಗಳ ಆಧಾರಕ್ಕೆ ದಪ್ಪನೆಯ ತಂತಿಯನ್ನು ಕಟ್ಟಿ, ಪಕ್ಕದ ಗಿಡಗಳಿಗೆ ವೈರ್ ಬಿಗಿದ ಪರಿಣಾಮ ಗಿಡಕ್ಕೆ ಶಾಶ್ವತ ಕಚ್ಚು ಬಿದ್ದಿವೆ. ತಂತಿಗಳನ್ನು ತಮ್ಮ ಉದರದಲ್ಲಿಯೇ ಸಿಕ್ಕಿಸಿಕೊಂಡು ಗಿಡಗಳು ಬೆಳೆಯುತ್ತಿವೆ. ಇಷ್ಟೆಲ್ಲಾ ಕಣ್ಣಿಗೆ ಕಾಣುತ್ತಿದ್ದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಾಗಲೀ, ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ ಜಾಣಗುರುಡರಂತೆ ವರ್ತಿಸುತ್ತಿರೋದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. -ನರಸಿಂಹಮೂರ್ತಿ ಪ್ಯಾಟಿ