ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದಲ್ಲಿ ಸಕಲ ಸಿದ್ಧತೆ
ಗುಣಮಟ್ಟದ ಶಾಲಾ ಶಿಕ್ಷಣಕ್ಕಾಗಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಪರಿಷತ್ (ಕೆಎಸ್ಎಸ್ಇಸಿ) ಮತ್ತು ಸ್ವಾಯತ್ತ ನಿಯಂತ್ರಕ ಪ್ರಾಧಿಕಾರವಾಗಿ ಶಾಲಾ ಗುಣಮಟ್ಟ ಪ್ರಾಧಿಕಾರ ರಚನೆ ಆಗಬೇಕಿದೆ.
ಬೆಂಗಳೂರು: ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಆಧರಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಮಾರ್ಚ್ನಲ್ಲಿಯೇ ಕಾರ್ಯಪಡೆ ರಚಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಇದೀಗ ಶಿಕ್ಷಣ ನೀತಿಗೆ ಸಂಬಂಧಿಸಿದ ವರದಿಯನ್ನೂ ಉಳಿದೆಲ್ಲಾ ರಾಜ್ಯಗಳಿಗಿಂತ ಮೊದಲು ಕರ್ನಾಟಕ ಸಲ್ಲಿಸಿದ್ದು ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಭರದ ಸಿದ್ಧತೆ ಸಾಗಿದೆ.
2030ರ ವೇಳೆಗೆ ಭಾರತದ ಪ್ರತಿ ಮಗುವಿಗೂ ಅತ್ಯುನ್ನತ ಶಿಕ್ಷಣ ಲಭಿಸಬೇಕೆಂಬ ಉದ್ದೇಶದೊಂದಿಗೆ ಜಾರಿಗೊಳಿಸಲಾಗಿರುವ ಈ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮೂರ್ನಾಲ್ಕು ಸುತ್ತಿನ ಚರ್ಚೆ ನಡೆದಿದೆ.
ಶಿಕ್ಷಣದ ಕ್ಷೇತ್ರದ ಸಮಗ್ರ ಏಳ್ಗೆಗೆ ಯೋಜನೆ ಕರ್ನಾಟಕದಲ್ಲಿ ಪ್ರಸ್ತುತ 1.13 ಕೋಟಿ ಶಾಲಾ ವಿದ್ಯಾರ್ಥಿಗಳಿದ್ದು 78,233 ಶಾಲೆಗಳಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ, ಬುಡಕಟ್ಟು ಮತ್ತು ಸಮಾಜ ಕಲ್ಯಾಣ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 8 ವಿಭಿನ್ನ ಸಂಸ್ಥೆಗಳು ಈ ಶಾಲೆಗಳನ್ನು ನಿರ್ವಹಿಸುತ್ತಿವೆ.
ಸದ್ಯ ರಚನೆಯಾಗಿರುವ ಕಾರ್ಯಪಡೆಯು ಶಾಸನಾತ್ಮಕ, ಆಡಳಿತಾತ್ಮಕ, ರಚನಾತ್ಮಕ, ಶೈಕ್ಷಣಿಕ ಹಾಗೂ ಹಣಕಾಸಿಗೆ ಸಂಬಂಧಿಸಿದ ವಿಚಾರಗಳನ್ನು ಶಿಫಾರಸು ಮಾಡಿದೆ. ಉನ್ನತ ಶಿಕ್ಷಣವನ್ನೂ ಗಮನದಲ್ಲಿರಿಸಿಕೊಂಡು ಈ ಶಿಫಾರಸನ್ನು ಮಾಡಲಾಗಿದೆ.
ಕರ್ನಾಟಕ ಶಿಕ್ಷಣ ಆಯೋಗದ ರಚನೆ ಕಾರ್ಯಪಡೆಯ ಪ್ರಸ್ತಾವದ ಪ್ರಕಾರ ಕರ್ನಾಟಕ ಶಿಕ್ಷಣ ಆಯೋಗದ ರಚನೆಯಾಗಬೇಕಿದ್ದು ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ಶಾಲಾ ಶಿಕ್ಷಣ ಸಚಿವರು ಉಪಾಧ್ಯಕ್ಷ ಹುದ್ದೆಯಲ್ಲಿ ಇರಲಿದ್ದು ಸಚಿವರು, ಅಧಿಕಾರಿಗಳು ಹಾಗೂ ತಜ್ಞರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಗುಣಮಟ್ಟದ ಶಾಲಾ ಶಿಕ್ಷಣಕ್ಕಾಗಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಪರಿಷತ್ ಗುಣಮಟ್ಟದ ಶಾಲಾ ಶಿಕ್ಷಣಕ್ಕಾಗಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಪರಿಷತ್ (ಕೆಎಸ್ಎಸ್ಇಸಿ) ಮತ್ತು ಸ್ವಾಯತ್ತ ನಿಯಂತ್ರಕ ಪ್ರಾಧಿಕಾರವಾಗಿ ಶಾಲಾ ಗುಣಮಟ್ಟ ಪ್ರಾಧಿಕಾರ ರಚನೆ ಆಗಬೇಕಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕಮಿಷನ್ ಸ್ಥಾಪಿಸಿ ಅದರಡಿಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಧನ ಸಹಾಯ ಪರಿಷತ್, ಉನ್ನತ ಶಿಕ್ಷಣ ನಿಯಂತ್ರಕ ಪ್ರಾಧಿಕಾರ, ಸಂಶೋಧನೆ ಮತ್ತು ನಾವೀನ್ಯತಾ ಪರಿಷತ್, ಮತ್ತು ನ್ಯಾಕ್ನಿಂದ ಮಾನ್ಯತಾ ಸಂಸ್ಥೆಗಳನ್ನು ಸ್ಥಾಪಿಸಲು ಶಿಫಾರಸು ನೀಡಲಾಗಿದೆ.
ವಿಶೇಷ ಶೈಕ್ಷಣಿಕ ವಲಯಗಳ ರಚನೆ ಇದರೊಂದಿಗೆ ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವು ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದ್ದು ವಿಶೇಷ ಶೈಕ್ಷಣಿಕ ವಲಯಗಳನ್ನು ಗುರುತಿಸಬೇಕು ಹಾಗೂ ಮತ್ತೊಂದು ಹೊಸ ಕಾಯಿದೆಯನ್ನು ತರಬೇಕು ಎನ್ನಲಾಗಿದೆ.
ಕಾರ್ಯಪಡೆ ವರದಿಗೆ ಕ್ಯಾಬಿನೆಟ್ ಅನುಮೋದನೆ ಸಿಕ್ಕು ಅನುಷ್ಠಾನಗೊಳಿಸಿದರೆ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಲಿದೆ.
ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೀಗಿರುತ್ತದೆ