ಒಮ್ಮೆ ಪಂತ್, ಜಬ್ ಜರೂರತ್ ಪಡೇಗಿ ಯೆ ಮುಝೆ ಘರ್ ಸೆ ಬುಲಾಲೇಂಗೆ, ಅಂದಿದ್ದರು!

| Updated By: ರಶ್ಮಿ ಕಲ್ಲಕಟ್ಟ

Updated on: Jan 21, 2021 | 2:44 PM

ಟೀಮ್ ಇಂಡಿಯಾದ ಇತರ ಬ್ಯಾಟ್ಸ್​ಮನ್​ಗಳು ಡ್ರಾಗಾಗಿ ಆಡುವುದೋ ಇಲ್ಲವೇ ಗೆಲ್ಲುವ ಪ್ರಯತ್ನ ಮಾಡುವುದೋ ಎಂಬ ದ್ವಂದ್ವದಲ್ಲಿದ್ದರು. ಆದರೆ, 23 ವರ್ಷ ವಯಸ್ಸಿನ ದೆಹಲಿ ಹುಡುಗ ಪಂತ್ ಮನಸ್ಸಿನಲ್ಲಿ ಯಾವುದೇ ಗೊಂದಲವಿರಲಿಲ್ಲ.

ಒಮ್ಮೆ ಪಂತ್, ಜಬ್ ಜರೂರತ್ ಪಡೇಗಿ ಯೆ ಮುಝೆ ಘರ್ ಸೆ ಬುಲಾಲೇಂಗೆ, ಅಂದಿದ್ದರು!
ರಿಷಭ್ ಪಂತ್
Follow us on

ವಿಶ್ವದ ನಂಬರ್ ವನ್ ಟೆಸ್ಟ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಮತ್ತು ಅವರ ಜೊತೆಗಾರರಾಗಿರುವ ಮಿಚೆಲ್ ಸ್ಟಾರ್ಕ್ ಹಾಗೂ ಜೊಷ್ ಹೆಜೆಲ್​ವುಡ್ ಬೆಂಕಿಯುಗುಳುತ್ತಿದ್ದರು. ಮತ್ತೊಂದು ತುದಿಯಲ್ಲಿ ವಿಶ್ವದ ಅಗ್ರಮಾನ್ಯ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ನೇಥನ್ ಲಿಯಾನ್ ಚೆಂಡನ್ನು ಬುಗುರಿಯಂತೆ ತಿರುಗಿಸುತ್ತಾ ಪಿಚ್ಚಿನ ರಫ್ ಭಾಗಗಳಲ್ಲಿ ಅದನ್ನು ಪಿಚ್ ಮಾಡುತ್ತಾ ಬ್ಯಾಟ್ಸ್​ಮನ್​ಗಳ ಬದುಕನ್ನು ಯಾತನಾಮಯಗೊಳಿಸಿದ್ದರು. ಭಾರತದ ನಾಯಕ ಅಜಿಂಕ್ಯಾ ರಹಾನೆ ಔಟಾದಾಗ ಬಾರತದ ಗೆಲುವಿಗೆ ಇನ್ನೂ 162ರನ್ ಬೇಕಿದ್ದವು, ಅದಕ್ಕೂ ಮಿಗಿಲಾಗಿ ಭಾರತವನ್ನು ಸೋಲಿನಿಂದ ತಪ್ಪಿಸುವುದೂ ದೊಡ್ಡ ಟಾಸ್ಕ್ ಆಗಿತ್ತು. ಅಂಥ ಕಷ್ಟಕರ, ಕ್ಲಿಷ್ಟ ಮತ್ತು ಸಂದಿಗ್ಧ ಸ್ಥಿತಿಯಲ್ಲಿ ರಿಷಭ್ ಪಂತ್ ಬ್ರಿಸ್ಬೇನ್​ನಲ್ಲಿ ಆಡಲು ಕ್ರೀಸಿಗೆ ಬಂದರು.

ಟೀಮ್ ಇಂಡಿಯಾದ ಇತರ ಬ್ಯಾಟ್ಸ್​ಮನ್​ಗಳು ಡ್ರಾಗಾಗಿ ಆಡುವುದೋ ಇಲ್ಲವೇ ಗೆಲ್ಲುವ ಪ್ರಯತ್ನ ಮಾಡುವುದೋ ಎಂಬ ದ್ವಂದ್ವದಲ್ಲಿದ್ದರು. ಆದರೆ, 23 ವರ್ಷ ವಯಸ್ಸಿನ ದೆಹಲಿ ಹುಡುಗನ ಮನಸ್ಸಿನಲ್ಲಿ ಯಾವುದೇ ಗೊಂದಲವಿರಲಿಲ್ಲ. ‘ನಾನಾಡೋದೇ ಗೆಲ್ಲೋದಕ್ಕೆ’ ಧೋರಣೆಯೊಂದಿಗೆ ಹೊಡೆತಗಳನ್ನು ಬಾರಿಸಿಲು ಶುರವಿಟ್ಟುಕೊಂಡ ಪಂತ್ ಬಾರಿಸಿದ ಕೊನೆ ಹೊಡೆತ ಬೌಂಡರಿ ಗೆರೆ ಮತ್ತು ಭಾರತ ವಿಜಯ ರೇಖೆಯನ್ನು ದಾಟಿದ ನಂತರವೇ ಅವರ ಬ್ಯಾಟ್​ ಸದ್ದು ಮಾಡುವುದನ್ನು ನಿಲ್ಲಿಸಿದ್ದು.

ಗಬ್ಬಾ ಮೈದಾನದಲ್ಲಿ ಆಸ್ಸೀಗಳು ಇತರರು ಆಸೂಯೆಪಟ್ಟುಕೊಳ್ಳುವ ದಾಖಲೆಯನ್ನು ಹೊಂದಿದ್ದಾರೆ. ಕೊನೆಯ ಬಾರಿ ಅವರು ಈ ಮೈದಾನದಲ್ಲಿ ಸೋತಿದ್ದು 1988 ರಲ್ಲಿ, ಅಂದರೆ ಟೀಮ್ ಇಂಡಿಯಾದ ಹಲವಾರು ಆಟಗಾರರು ಹುಟ್ಟುವ ಮೊದಲು!

ರಿಷಭ್ ಪಂತ್ ಮತ್ತು ಅಜಯ್ ಜಡೇಜಾ

ಡೆವಿಲ್ ಮೇ ಕೇರ್ ಧೋರಣೆಯ ಪಂತ್ ನಿನ್ನೆ ಆಡಿದ್ದು ನಿಸ್ಸಂದೇಹವಾಗಿಯೂ ದಶಕಗಳಲ್ಲೊಮ್ಮೆಮಾತ್ರ ನೋಡಲು ಸಿಗಬಹುದಾದ ಇನ್ನಿಂಗ್ಸ್. 138 ಎಸೆತಗಳಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್​ನೊಂದಿಗೆ ಅವರು ಬಾರಿಸಿದ ಅಜೇಯ 89 ರನ್​ಗಳು ಭಾರತದ ಕ್ರಿಕೆಟ್​ ಪ್ರೇಮಿಗಳ ಮನಸ್ಸಿನಲ್ಲಿ, ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿವೆ.

ನಿನ್ನೆ ಪಂದ್ಯದ ನಂತರ ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್ ನಡೆಸುವ ಎಕ್ಸ್​ಟ್ರಾ ಇನ್ನಿಂಗ್ಸ್​ನಲ್ಲಿ ಹರ್ಷ ಭೋಗ್ಲೆ ಜೊತೆ ಮಾತಾಡಿದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಅಜಯ್ ಜಡೇಜಾ, ಪಂತ್ ಕುರಿತು ಒಂದು ಕುತೂಹಲಕಾರಿ ಘಟನೆಯನ್ನು ಹೇಳಿದರು. ಇದು ಸುಮಾರು ನಾಲ್ಕು ವರ್ಷಗಳ ಹಿಂದೆ ನಡೆದ ವಿಷಯ. ದೆಹಲಿ ಆಯ್ಕೆ ಸಮಿತಿ ಸದಸ್ಯರು ರಣಜಿ ಪಂದ್ಯವೊಂದಕ್ಕೆ ಪಂತ್ ಸ್ಥಾನದಲ್ಲಿ ಬೇರೊಬ್ಬ ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ನನ್ನು ಆರಿಸಿದ್ದರಿಂದ ಬೇಸರಗೊಂಡ ಪಂತ್ ಆಚೆ ಬಾರದೆ ಮನೆಯಲ್ಲೇ ಇದ್ದುಬಿಟ್ಟಿದ್ದರಂತೆ.

ಆದೇ ಸಮಯಕ್ಕೆ ದೆಹಲಿ ತಂಡ ಅಭ್ಯಾಸ ಮಾಡುತ್ತಿದ್ದ ಮೈದಾನದಲ್ಲಿದ್ದ ಜಡೇಜಾಗೆ ವಿಷಯ ಗೊತ್ತಾಗಿ, ಪಂತ್​ಗೆ ಪೋನ್ ಮಾಡಿದರಂತೆ. ’ನಿನ್ನನ್ನು ತಂಡಕ್ಕೆ ಆರಿಸದಿದ್ದರೇನಂತೆ, ಇಲ್ಲಿಗೆ ಬಂದು ಇಲ್ಲಿರುವವರ ಜೊತೆ  ಪ್ರಾಕ್ಟೀಸ್ ಮಾಡಬಹುದಲ್ಲ,’ ಎಂದರಂತೆ.

ಆಗ ಪಂತ್, ‘ಪಾಜಿ, ಜಬ್ ಜರೂರತ್ ಪಡೆಗಿ, ಯೆ ಘರ್ ಸೆ ಬುಲಾಯೇಂಗೆ (ಅವರಿಗೆ ಬೇಕಾದಾಗ ನನ್ನನ್ನು ಮನೆಯಿಂದ ಕರೆದೊಯ್ಯುತ್ತಾರೆ)’ ಎಂದು ಹೇಳಿದ ಅಂತ ಜಡೇಜಾ ಹೇಳಿದರು.

‘ನಾಲ್ಕು ವರ್ಷಗಳ ಹಿಂದೆ ಅವನು ಆಡಿದ ಮಾತು ನನ್ನ ಮನಸಿನಲ್ಲಿ ಹಾಗೆಯೇ ಉಳಿದುಬಿಟ್ಟಿದೆ. ಪ್ರತಿಸಲ ಅವನ ಸಾಮರ್ಥ್ಯದ ಬಗ್ಗೆ, ಕಳಪೆ ಮಟ್ಟದ ಕೀಪಿಂಗ್ ಪ್ರಶ್ನೆಗಳೆದ್ದಾಗ ಬೇರೆಯವರಂತೆ ನಾನೂ ಸಹ ಅದನ್ನು ಒಪ್ಪಿಕೊಳ್ಳುತ್ತೇನೆ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಹೇಗೆ ರಿಸ್ಕ್ ತೆಗೆದುಕೊಳ್ಳುತ್ತಿದ್ದನೋ ಟೆಸ್ಟ್​ಗಳಲ್ಲೂ ಹಾಗೆಯೇ ಮಾಡುತ್ತಾನೆ. ವೈಫಲ್ಯಗಳು ಅವನನ್ನು ದಿಗಿಲುಗೊಳಿಸುವುದಿಲ್ಲ ಮತ್ತು ಒತ್ತಡಕ್ಕೆ ನೂಕುವುದಿಲ್ಲ. ತನಗೆ ಸರಿಯೆನ್ನಿಸುವುದನ್ನು ಮಾಡುವ ಜಾಯಮಾನ ಅವನದ್ದು,’ ಎಂದು ಜಡೇಜಾ ಹೇಳಿದರು.

ಈ ಜಮಾನಾದ ಯುವಕರು ವಿಭಿನ್ನವಾದ ಮೈಂಡ್​ಸೆಟ್​ ಹೊಂದಿದ್ದಾರೆ ಎಂದು ಜಡೇಜಾ ಹೇಳುತ್ತಾರೆ.

‘ರಿಷಭ್​​​ನಂತೆ ಇಂದಿನ ಯುವಕರ ಯೋಚನಾ ಲಹರಿ ಭಿನ್ನವಾಗಿದೆ. ತಾವು ಮಾಡುತ್ತಿರುವುದು ಸರಿಯೆನ್ನಿಸಿದರೆ, ಅವರನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಮ್ಮ ಸುತ್ತಲಿರುವವರನ್ನು ಖುಷಿ ಪಡಿಸಲು ಅವರು ಕ್ರಿಕೆಟ್ ಆಡುವುದಿಲ್ಲ. ಸುತ್ತಲಿನವರೆಂದರೆ, ಕ್ರಿಕೆಟ್ ಕುರಿತು ಮಾತಾಡುವವರು, ಬರೆಯುವವರು. ಈ ಹುಡುಗರು ಆವರೇನು ಬರೆಯುತ್ತಾರೆ, ಏನು ಹೇಳುತ್ತಾರೆ ಅನ್ನುವ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಅವರ ಬದುಕಿನ ತತ್ವ ಒಂದೇ; ನನಗೆ ಅತ್ಯುತ್ತಮವಾದದ್ದು ಏನು ಅಂತ ನನಗೆ ಚೆನ್ನಾಗಿ ಗೊತ್ತಿದೆ. ಈ ಹುಡುಗರ ಧೋರಣೆ ಮತ್ತು ಮತ್ತು ಭಾರತಕ್ಕೆ ಅವರಾಡುವ ಶೈಲಿ ನನಗೆ ಬಹಳ ಇಷ್ಟವಾಗುತ್ತದೆ,’ ಎಂದು ಜಡೇಜಾ ಹೇಳಿದರು.

India vs Australia Test Series ನಾವು ಪಂತ್​ರನ್ನು ಬೆಂಬಲಿಸುವ ಹಿಂದೆ ಕಾರಣವಿದೆ: ರವಿ ಶಾಸ್ತ್ರೀ

Published On - 2:31 pm, Thu, 21 January 21