ಸಂಗೀತ ಸಂಯೋಜಕ, ಗಾಯಕ ಎ.ಆರ್.ರೆಹಮಾನ್ ಅವರಿಗೆ ಇಂದು 54ನೇ ಹುಟ್ಟುಹಬ್ಬದ ಸಂಭ್ರಮ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನ ನೀಡುವ ಜತೆಗೆ ಹಾಡಿನ ಸಾಹಿತ್ಯ ಕೂಡಾ ಬರೆದು ಮಿಂಚಿದ ಪ್ರತಿಭೆ ರೆಹಮಾನ್.
ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿದ್ದ ಆರ್.ಕೆ.ಶೇಖರ್ ಅವರ ಪುತ್ರ ದಿಲೀಪ್ ಕುಮಾರ್, ರೆಹಮಾನ್ ಆಗಿ ಬೆಳೆದು ಸಂಗೀತ ಮಾಂತ್ರಿಕ ಎಂದು ಖ್ಯಾತಿ ಪಡೆದರು. ದಿಲೀಪ್ ಎಂಬ ಪೋರನಿಗೆ ಚಿಕ್ಕಂದಿನಿಂದಲೇ ಸಂಗೀತ ಉಪಕರಣಗಳಲ್ಲಿ ಒಲವು. ಅಪ್ಪನಿಂದಲೇ ಸಂಗೀತ ಪಾಠ ಕಲಿತ ದಿಲೀಪ್ ತಮ್ಮನ್ನು ಪೂರ್ಣವಾಗಿ ಸಂಗೀತದಲ್ಲಿಯೇ ತೊಡಗಿಸಿಕೊಂಡಿದ್ದು ಅಪ್ಪ ತೀರಿದ ಮೇಲೆ. ಅಪ್ಪನ ಮರಣದಿಂದ ಕುಸಿದು ಹೋದ ಈ ಬಾಲಕನ ಶಿಕ್ಷಣ ಅರ್ಧಕ್ಕೆ ಮೊಟಕುಗೊಂಡಿತು. ಸಂಗೀತವನ್ನೇ ಬದುಕಾಗಿಸಿಕೊಳ್ಳಲು ಹೊರಟ ದಿಲೀಪ್ಗೆ ಬೆಂಬಲವಾಗಿ ನಿಂತದ್ದು ಅಮ್ಮ ಕರೀಮಾ ಬೇಗಂ. ರೆಹಮಾನ್ ಅವರ ಅಮ್ಮ ಕರೀಮಾ ಬೇಗಂ ಇತ್ತೀಚೆಗೆ ತೀರಿಕೊಂಡಿದ್ದಾರೆ.
ಅಪ್ಪ ತೀರಿದ ನಂತರ ದಿಲೀಪ್ ಅವರ ಕುಟುಂಬ ಇಸ್ಲಾಂಗೆ ಮತಾಂತರವಾಯಿತು. ದಿಲೀಪ್ ಎಂಬ ಹುಡುಗ ಅಲ್ ರಖಾ ರೆಹಮಾನ್ ಎಂಬ ಹೆಸರು ಸ್ವೀಕರಿಸಿದರು. ಖ್ಯಾತ ಸಂಗೀತಗಾರರಾದ ಎಂ.ಎಸ್. ವಿಶ್ವನಾಥನ್ ಮತ್ತು ಇಳಯರಾಜಾ ಅವರ ತಂಡದಲ್ಲಿ ಸಂಗೀತಗಾರನಾಗಿ ಕೆಲಸ ಮಾಡಿದ ರೆಹಮಾನ್ ಲಂಡನ್ ಮ್ಯೂಸಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ತಮ್ಮ ಆಸಕ್ತಿಯ ಕ್ಷೇತ್ರವನ್ನು ವಿಸ್ತರಿಸಿಕೊಂಡರು.
ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಸೌತ್ 2020 ಪ್ರಶಸ್ತಿ: ರಕ್ಷಿತ್-ರಶ್ಮಿಕಾಗೆ ಅವಾರ್ಡ್
2002ರಲ್ಲಿ ನಿರ್ದೇಶಕ ಮಣಿರತ್ನಂ ರೆಹಮಾನ್ ಸಂಗೀತವನ್ನು ಗಮನಿಸಿ ರೋಜಾ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುವ ಅವಕಾಶವನ್ನು ನೀಡಿದರು. ರೋಜಾ ಸಿನಿಮಾದ ಎಲ್ಲ ಹಾಡುಗಳು ಹಿಟ್ ಆದವು. ಮನಸ್ಸಿನಲ್ಲಿ ಸದಾ ಕಾಲ ಉಳಿದು ಬಿಡುವ ಸಂಗೀತವನ್ನು ಜನಮೆಚ್ಚಿದರು. ಮೊದಲ ಸಿನಿಮಾಲ್ಲಿಯೇ ರೆಹಮಾನ್ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ಭಾರತೀಯ ಸಿನಿಮಾ ಜಗತ್ತಿನಲ್ಲಿ ತಮ್ಮ ನೆಲೆ ಕಂಡುಕೊಂಡರು.
2008ರಲ್ಲಿ ತೆರೆಕಂಡ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಸಂಗೀತಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದ ಕ್ಷಣ. ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲಿ ರೆಹಮಾನ್ ದೇವರನ್ನು ಸ್ಮರಿಸಿದ್ದು ತಮಿಳು ಭಾಷೆಯಲ್ಲಿ. ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಮತ್ತು BAFTA ಪ್ರಶಸ್ತಿಗಳು ರೆಹಮಾನ್ಗೆ ಸಂದಿವೆ.
ಇಸ್ಲಾಂಗೆ ಮತಾಂತರವಾದರೆ ಖ್ಯಾತರಾಗುತ್ತಾರಾ?
ರೆಹಮಾನ್ ಅವರಲ್ಲಿ ಹಲವಾರು ಮಂದಿ ಈ ಪ್ರಶ್ನೆ ಕೇಳಿದ್ದಾರಂತೆ. ಇದಕ್ಕೆ ರೆಹಮಾನ್ ಉತ್ತರ ಹೀಗಿತ್ತು–ನೀವು ಯಾವುದನ್ನೂ ಹೇರಿಕೆ ಮಾಡಬಾರದು. ಇತಿಹಾಸ ವಿಷಯ ಬೋರಿಂಗ್, ಅದರ ಬದಲು ಎಕನಾಮಿಕ್ಸ್ ಅಥವಾ ಸೈನ್ಸ್ ತೆಗೆದುಕೊಳ್ಳಿ ಎಂದು ನೀವು ನಿಮ್ಮ ಮಗ ಅಥವಾ ಮಗಳಿಗೆ ಹೇಳಬಾರದು. ಅದು ವೈಯಕ್ತಿಕ ಆಯ್ಕೆ. ಇಸ್ಲಾಂಗೆ ಮತಾಂತರವಾಗಿದ್ದೀರೋ ಇಲ್ಲವೊ ಎಂಬುದಲ್ಲ, ನಿಜವಾದ ಒಂದು ಗುರಿ, ಅದರೆಡೆಗೆ ನೀವು ಹೋಗಲು ಪ್ರೇರಣೆ ನೀಡಬೇಕ. ಸೂಫಿ ಶಿಕ್ಷಕರು, ಧಾರ್ಮಿಕ ಶಿಕ್ಷಕರು ನನಗೆ ಮತ್ತು ನನ್ನ ಅಮ್ಮನಿಗೆ ಹೇಳಿದ್ದು ನೀವು ತುಂಬಾ ತುಂಬಾ ಸ್ಪೆಷಲ್. ಎಲ್ಲ ನಂಬಿಕೆಯಲ್ಲಿಯೂ ವಿಶೇಷವಾಗಿರುವುದು ಇದ್ದೇ ಇರುತ್ತದೆ. ನಾವು ಅದನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಪ್ರಾರ್ಥನೆ ತುಂಬಾ ಸಹಕಾರಿಯಾಯಿತು. ನಾನು ಕುಗ್ಗಿಹೋದಾಗಲೆಲ್ಲಾ ಅದು ನನ್ನನ್ನು ಮೇಲೆತ್ತಿದೆ ಎಂದಿದ್ದಾರೆ.
90ರ ದಶಕದಲ್ಲಿ ಜಾಹೀರಾತುಗಳ ಸಂಗೀತ
ಸಿನಿಮಾ ಸಂಗೀತ ಕ್ಷೇತ್ರಕ್ಕೆ ಕಾಲಿಡುವ ಮುಂಚೆ ಎ.ಆರ್.ರೆಹಮಾನ್ ಜಾಹೀರಾತುಗಳಿಗೆ ಸಂಗೀತ (ಜಿಂಗಲ್ಸ್) ಸಂಯೋಜನೆ ಮಾಡಿದ್ದರು. 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಹಲವಾರು ಜಾಹೀರಾತುಗಳಿಗೆ ರೆಹಮಾನ್ ಸಂಗೀತ ಸ್ಪರ್ಶವಿದೆ. ಟೈಟಾನ್, ಏಷ್ಯನ್ ಪೇಂಟ್ಸ್, ಪ್ರೀಮಿಯರ್ ಪ್ರೆಶರ್ ಕುಕ್ಕರ್, ಎಂಆರ್ಎಫ್ ಟಯರ್ಸ್, ಹೀರೊ ಮೊಟಾರ್ ಕಾರ್ಪೊರೇಷನ್, ಏರ್ಟೆಲ್ ಮೊದಲಾದ ಜಾಹೀರಾತುಗಳಲ್ಲಿ ರೆಹಮಾನ್ ಸಂಗೀತವನ್ನು ಕೇಳಬಹುದು.
ಸದಾ ನೆನಪಿನಲ್ಲಿ ಉಳಿಯುವ ರೆಹಮಾನ್ ಸಂಗೀತ
ದಿಲ್ ಸೇ ಸಿನಿಮಾದ ದಿಲ್ ಸೇ ರೇ, ಸ್ಲಮ್ ಡಾಗ್ ಮಿಲೇನಿಯರ್ ಸಿನಿಮಾದ ಜೈ ಹೋ, ಲಗಾನ್ ಸಿನಿಮಾದ ಚಲೇ ಚಲೊ, ಸ್ವದೇಶ್ ಸಿನಿಮಾದ ಯೆ ಜೋ ದೇಸ್ ಹೈ ಮೇರಾ, ಗುರು ಸಿನಿಮಾದ ತೇರೆ ಬಿನಾ, ರಾಕ್ಸ್ಟಾರ್ ಸಿನಿಮಾದ ಸದ್ದಾ ಹಕ್, ಹೈವೇ ಸಿನಿಮಾದ ಮಾಹೀ ವೇ ಮೊದಲಾದ ಹಾಡುಗಳು ಸದಾ ನೆನಪಿನಲ್ಲಿ ಉಳಿಯುವಂಥವು. 1992ರಿಂದ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಈ ಪ್ರತಿಭೆ ಮತ್ತಷ್ಟು ಸಾಧನೆ ಮಾಡಲಿ..
ಹ್ಯಾಪಿ ಬರ್ತ್ ಡೇ ರೆಹಮಾನ್.
Published On - 2:55 pm, Wed, 6 January 21