ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ; ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಜೆಡಿಎಸ್‌ನ ಭದ್ರಕೋಟೆ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತಗೊಂಡಿದೆ. ಬೆಂಬಲಿಗರ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಮಾರ್ಚ್ 5ರಂದು ಸಿದ್ದರಾಮಯ್ಯ ಸಮ್ಮುಖದಲ್ಲಿ ಅರಸೀಕೆರೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಹಾಸನ: ಜೆಡಿಎಸ್‌ನ (JDS) ಭದ್ರಕೋಟೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ (KM Shivalinge Gowda) ಕಾಂಗ್ರೆಸ್ ಸೇರುವುದು ಬಹುತೇಕ ಖಚಿತಗೊಂಡಿದೆ. ಬೆಂಬಲಿಗರ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಮಾರ್ಚ್ 5ರಂದು ಸಿದ್ದರಾಮಯ್ಯ ಸಮ್ಮುಖದಲ್ಲಿ ಅರಸೀಕೆರೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇದರೊಂದಿಗೆ ಶಿವಲಿಂಗೇಗೌಡ ಜೆಡಿಎಸ್‌ಗೆ ವಿದಾಯ ಹೇಳುವ ಕುರಿತಾಗಿ ಕಳೆದೊಂದು ವರ್ಷದಿಂದ ನಡೆಯುತ್ತಿದ್ದ ಚರ್ಚೆಗೆ ತೆರೆಬಿದ್ದಂತಾಗಿದೆ. ಜೆಡಿಎಸ್ ನಾಯಕತ್ವದಲ್ಲಿ ಇನ್ನು ಮುಂದುವರಿಯುವುದು ಕಷ್ಟ. ಕಾರ್ಯಕರ್ತರ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಕಾರ್ಯಕರ್ತರ ಹಾಗೂ ಬೆಂಬಲಿಗರ ತೀರ್ಮಾನವೇ ಅಂತಿಮ ಎಂದು ಎರಡು ವಾರಗಳ ಹಿಂದೆ ಶಿವಲಿಂಗೇಗೌಡ ಹೇಳಿದ್ದರು.
ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯಲ್ಲಿ ಶಿವಲಿಂಗೇಗೌಡ್ ಕಾಂಗ್ರೆಸ್ ಸೇರುವ ಬಗ್ಗೆ ಒಲವು ವ್ಯಕ್ತವಾಗಿದೆ. ಅರಸೀಕೆರೆಯ ತೋಟದ ಮನೆಯಲ್ಲಿ ಶಾಸಕರು ಕರೆದಿದ್ದ ಸಭೆಯಲ್ಲಿ ಭಾಗಿಯಾದ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನನ್ನೂ ಜಿಟಿ ದೇವೇಗೌಡರಂತೆ ರಾಜಿ ಮಾಡಿಸಬಹುದಿತ್ತು. ಆದರೆ, ನನ್ನ ಜೊತೆ ಗುರುತಿಸಿಕೊಂಡವರನ್ನು ಪಕ್ಷದಿಂದ ತೆಗೆದರು. ಹೀಗಾಗಿ ನಿಮ್ಮ ಅಭಿಪ್ರಾಯ ಹೇಳಿ ಎಂದು ಬೆಂಬಲಿಗರು ಹಾಗೂ ಕಾರ್ಯಕರ್ತರಲ್ಲಿ ಶಿವಲಿಂಗೇಗೌಡ ಮನವಿ ಮಾಡಿದ್ದರು. ಈ ವೇಳೆ, ಅವರಿಗೆ ಬೆಂಬಲಿಗರು ಹಸ್ತದ ಗುರುತು ತೋರಿಸಿದರು.
ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಭಿನ್ನಮತ: ದಳಪತಿಗಳಿಗೆ ತಲೆ ನೋವಾದ ಬಂಡಾಯ ನಾಯಕರ ನಡೆ
ಮಾರ್ಚ್ 5ರಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅರಸೀಕೆರೆಗೆ ಬರುತ್ತಿದ್ದು, ಅದೇ ವೇಳೆ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲಿದ್ದಾರೆ. ಇದೇ ವೇಳೆ, ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಗೌಡರಿಗೂ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಡಲು ಕಾರ್ಯಕರ್ತರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಹಾಸನ ಟಿಕೆಟ್ ನೀಡಿಕೆ ವಿಚಾರದಲ್ಲಿ ಜೆಡಿಎಸ್ನಲ್ಲಿ ಭಿನ್ನಮತ ಪ್ರಕಟಗೊಂಡಿರುವ ಬೆನ್ನಲ್ಲೇ ಅದೇ ಜಿಲ್ಲೆಯ ಶಾಸಕರು ಪಕ್ಷ ತ್ಯಜಿಸಲು ನಿರ್ಧರಿಸಿದ್ದಾರೆ. ದಳಪತಿಗಳ ಭದ್ರಕೋಟೆ ಮಂಡ್ಯದಲ್ಲಿಯೂ ಭಿನ್ನಮತ ಹೆಚ್ಚಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಿವಲಿಂಗೇಗೌಡ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರುವ ನಿರ್ಧಾರ ಕೈಗೊಂಡಿರುವುದು ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ದಳಪತಿಗಳಿಗೆ ಆಘಾತ ನೀಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 pm, Wed, 1 March 23