ಟಿವಿ9 ಇಂಪ್ಯಾಕ್ಟ್: APMC ಗೋದಾಮಿನಲ್ಲೇ ಸೇವೆ ಸಲ್ಲಿಸ್ತಿದ್ದ ಪೊಲೀಸರಿಗೆ ಹೊಸ ಠಾಣೆ; ಗೃಹಸಚಿವರಿಂದ ಲೋಕಾರ್ಪಣೆ
ಒಟ್ನಲ್ಲಿ ಸುಸಜ್ಜಿತವಾದ ಠಾಣೆ ಕಟ್ಟಡ ನಿರ್ಮಾಣಗೊಂಡ್ರು ಕೆಲಸ ಮಾಡೊಕ್ಕಾಗದೆ ಎಪಿಎಂಸಿ ಗೋದಾಮಿನಲ್ಲೆ ಸೇವೆ ಸಲ್ಲಿಸ್ತಿದ್ದ ಪೊಲೀಸ್ ಸಿಬ್ಬಂದಿಗೆ ಸದ್ಯ ಮುಕ್ತಿ ಸಿಕ್ಕಂತಾಗಿದೆ. ಜನರಿಗೂ ಇದರಿಂದ ಅನುಕೂಲವಾಗಲಿದೆ.

ರಾಯಚೂರು: ಅಲ್ಲಿನ ಪೊಲೀಸರಿಗೆ ಸ್ವಂತದ್ದೊಂದು ಠಾಣೆಯೇ ಇರಲಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಹೊರ ವಲಯದ ಎಪಿಎಂಸಿ ಗೋದಾಮಿನಲ್ಲಿದ್ದ ಆ ಠಾಣೆಗೆ ತೆರಳಲು ಜನ ಹಿಂದೇಟು ಹಾಕ್ತಿದ್ದರು. ಈ ನಡುವೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಹೊಸ ಠಾಣೆ ಉದ್ಘಾಟನೆ ಆಗದೆ ಪಾಳು ಬಿದ್ದಿತ್ತು. ಆದ್ರೆ ಟಿವಿ9 ವರದಿ ನಂತರ ಎಚ್ಚೆತ್ತ ಗೃಹ ಇಲಾಖೆ ಹೊಸ ಪೊಲೀಸ್ ಠಾಣೆಗೆ ಮುಕ್ತಿ ಕರುಣಿಸಿದೆ.
ಸಿಂಧನೂರು ಠಾಣೆಗೆ ಉದ್ಘಾಟನೆ ಭಾಗ್ಯ ಕಲ್ಪಿಸಿದ ಟಿವಿ9..
6 ತಿಂಗಳ ಹಿಂದೆಯೇ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತ್ತು. ಆದರೂ ಠಾಣೆಗೆ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ನಿನ್ನೆ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಪೊಲೀಸ್ ಠಾಣೆಯನ್ನ ಲೋಕಾರ್ಪಣೆ ಮಾಡಿದ್ದಾರೆ.
ಕರ್ನಾಟಕ ಪೊಲೀಸ್ ಹೌಸಿಂಗ್ ಬೋರ್ಡ್ ಸುಮಾರು 97 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಠಾಣೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿತ್ತು. ಅತ್ಯಂತ ಸುಸಜ್ಜಿತವಾದ ಈ ಕಟ್ಟಡದಲ್ಲಿ ನೆಲಮಹಡಿಯಲ್ಲಿ ಪೊಲೀಸ್ ಠಾಣೆ ಮತ್ತು ಮೊದಲ ಮಹಡಿಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಕಚೇರಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಹೊಸ ಠಾಣೆ ನಿರ್ಮಾಣ ಕಾರ್ಯ ಪೂರ್ಣವಾಗಿದ್ದರೂ ಸಿಂಧನೂರು ಪೊಲೀಸ್ ಠಾಣೆ ಸಿಬ್ಬಂದಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮಿನಲ್ಲಿ ಕೆಲಸ ಮಾಡ್ತಿದ್ರು. ನಗರ ಪ್ರದೇಶದಿಂದ ಹೊರ ಭಾಗದ ಕುಷ್ಟಗಿ ರಸ್ತೆಯಲ್ಲಿರುವ ಎಪಿಎಂಸಿ ಸಮುದಾಯ ಭವನದಲ್ಲಿ ನಗರ ಠಾಣೆ ನಡೆಸಲಾಗುತ್ತಿತ್ತು.
ಪ್ರತಿ ತಿಂಗಳು 20,000 ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿತ್ತು.. ಕಳೆದ 3 ವರ್ಷದಿಂದಲೂ ನಗರ ಠಾಣೆ ಎಪಿಎಂಸಿ ಸಮುದಾಯ ಭವನದಲ್ಲೆ ನಡೀತಿತ್ತು. ಪ್ರತಿ ತಿಂಗಳು 20,000 ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿತ್ತು. ಈ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ವರದಿಯಿಂದ ಎಚ್ಚೆತ್ತ ಗೃಹ ಇಲಾಖೆ ಕೊನೆಗೂ ಸಿಂಧನೂರು ನಗರ ಠಾಣೆಯನ್ನ ಲೋಕಾರ್ಪಣೆ ಮಾಡಿದ್ದು ಸಂತಸ ಮೂಡಿಸಿದೆ. ಇನ್ನು ಠಾಣೆ ಉದ್ಘಾಟನೆ ವಿಳಂಬಕ್ಕೆ ಕಾರಣವೇನು ಅಂತಾ ಕೇಳಿದ್ರೆ ಗೃಹಸಚಿವರು ಕೊರೊನಾ ಸಬೂಬು ಹೇಳಿದರು.
ಒಟ್ನಲ್ಲಿ ಸುಸಜ್ಜಿತವಾದ ಠಾಣೆ ಕಟ್ಟಡ ನಿರ್ಮಾಣಗೊಂಡರೂ ಕೆಲಸ ಮಾಡಲಿಕ್ಕಾಗದೆ ಎಪಿಎಂಸಿ ಗೋದಾಮಿನಲ್ಲೆ ಸೇವೆ ಸಲ್ಲಿಸ್ತಿದ್ದ ಪೊಲೀಸ್ ಸಿಬ್ಬಂದಿಗೆ ಸದ್ಯ ಮುಕ್ತಿ ಸಿಕ್ಕಂತಾಗಿದೆ. ಜನರಿಗೂ ಇದರಿಂದ ಅನುಕೂಲವಾಗಲಿದೆ. -ಸಿದ್ದು ಬಿರಾದಾರ್
Published On - 11:43 am, Sun, 29 November 20