ಕುಟುಂಬದವರು ತಿರುಪತಿಗೆ ಹೋಗಿದ್ದಾಗ ಸೆಕ್ಯುರಿಟಿಯಿಂದಲೇ ಮನೆಗಳ್ಳತನ.. Liveನಲ್ಲಿ ಕೃತ್ಯ ನೋಡಿದ ಮನೆ ಮಾಲೀಕ!
ದೀಪಕ್ ಮತ್ತು ಕುಟುಂಬ ತಿರುಪತಿಗೆ ಹೋಗಿದ್ದ ಸಮಯ ನೋಡಿ ಸೆಕ್ಯುರಿಟಿ ತನ್ನ ಮಿತ್ರರೊಡನೆ ಕಳ್ಳತನ ಮಾಡಿದ್ದಾನೆ. ಬರೋಬ್ಬರಿ 46 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು: ನಗರದ ಕೆ.ಜಿ. ಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯುರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಎಂಬಾತ ಮನೆಯ ಮಾಲೀಕ ದೀಪಕ್ ಎಂಬುವವರ ಮನೆಯಲ್ಲಿ ಕಳ್ಳತನ ಎಸಗಿದ್ದಾನೆ. ದೀಪಕ್ ಮತ್ತು ಕುಟುಂಬ ತಿರುಪತಿಗೆ ಹೋಗಿದ್ದ ಸಮಯ ನೋಡಿ ಸೆಕ್ಯುರಿಟಿಯವ ತನ್ನ ಮಿತ್ರರೊಡನೆ ಸೇರಿಕೊಂಡು ಕಳ್ಳತನ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದೀಪಕ್ ಕುಟುಂಬ ಸಮೇತರಾಗಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜ. 1ರಂದು ತಿರುಪತಿಗೆ ತೆರಳಿದ್ದರು. ಮನೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಸೆಕ್ಯುರಿಟಿ ಸಂಜಯ್ಗೆ ತಿಳಿಸಿದ್ದರು. ಈ ಸಮಯದಲ್ಲಿ ಸಂಜಯ್ ತನ್ನ ಮಿತ್ರರೊಡನೆ ಸುಮಾರು ₹49 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾನೆ.
ತಂತ್ರಜ್ಞಾನದ ಪ್ರಯೋಜನ ಪಡೆದ ಮನೆ ಮಾಲೀಕ ಮಾಲೀಕ ದೀಪಕ್ ತಮ್ಮ ಮನೆಗೆ ಸಿಸಿ ಕ್ಯಾಮರಾ ಅಳವಡಿಸಿದ್ದರು. ಕ್ಯಾಮರಾವನ್ನು ಮೊಬೈಲ್ಗೆ ಲಿಂಕ್ ಮಾಡಲಾಗಿತ್ತು. ಹೀಗಾಗಿ ಮಾಲೀಕ ದೀಪಕ್ ಅವರು ತನ್ನ ಮನೆಯಲ್ಲಿ ನಡೆಯುತ್ತಿರುವ ಕಳ್ಳತನವನ್ನು ಲೈವ್ನಲ್ಲಿ ನೋಡಿ, ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಕಳ್ಳತನ ಮಾಡುತ್ತಿರುವ ದೃಶ್ಯ ನೋಡುತ್ತಿದ್ದ ದೀಪಕ್ ತಕ್ಷಣ ವಿಜಯನಗರದಲ್ಲಿ ವಾಸವಾಗಿರುವ ತನ್ನ ತಂದೆಯವರಿಗೆ ವಿಷಯ ತಿಳಿಸಿದ್ದಾರೆ. ತಂದೆ ಮನೆಗೆ ಬರುವಷ್ಟರಲ್ಲಿ ಸೆಕ್ಯುರಿಟಿ ಪರಾರಿಯಾಗಿದ್ದಾನೆ. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ.