Budget Explainer | ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ ಎಂದರೇನು? ಸರ್ಕಾರಗಳ ಪಾಲಿಗೆ ಇದೇಕೆ ಹಗ್ಗದ ಮೇಲಿನ ನಡಿಗೆ?
ಸರ್ಕಾರವು ಬಜೆಟ್ನಲ್ಲಿ ಖರ್ಚು ಕಡಿಮೆ ಮಾಡಿದರೆ ಸಾಮಾಜಿಕ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ. ತೆರಿಗೆ ಹೆಚ್ಚಿಸಿದರೆ ಉತ್ಪಾದನಾ ವಲಯದಲ್ಲಿ ಮಂಕು ಆವರಿಸುತ್ತದೆ. ಈ ಎರಡರ ನಡುವೆ ಸಮಕೂತ ಸಾಧಿಸುವುದು ವಿತ್ತೀಯ ಕೊರತೆ ನಿರ್ವಹಣೆಯ ಜಾಣತನ. ಇದು ನಿಜಕ್ಕೂ ಒಂದು ರೀತಿಯಲ್ಲಿ ಹಗ್ಗದ ಮೇಲಿನ ನಡಿಗೆ.

ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (fiscal deficit) ಅಂದರೆ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಖರ್ಚು ಮತ್ತು ಆದಾಯದ ನಡುವಿನ ವ್ಯತ್ಯಾಸ. ಸರ್ಕಾರದ ಒಟ್ಟು ಖರ್ಚು ಆ ವರ್ಷದ ಆದಾಯಕ್ಕಿಂತ ಹೆಚ್ಚಾದರೆ ಅದೇ ವಿತ್ತೀಯ ಕೊರತೆ. ಇದು ಒಟ್ಟು ದೇಶೀಯ ಅಂತರಿಕ ಉತ್ಪನ್ನವನ್ನು (ಜಿಡಿಪಿ) ಆಧಾರವಾಗಿಸಿಕೊಂಡ ಶೇಕಡವಾರು ಲೆಕ್ಕವಾಗಿದೆ.
ಒಂದು ದೇಶದ ವಿತ್ತೀಯ ಕೊರತೆಯನ್ನು ಅದರ ಜಿಡಿಪಿಯ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ ಅಥವಾ ಸರ್ಕಾರವು ತನ್ನ ಆದಾಯಕ್ಕಿಂತ ಎಷ್ಟು ಹಣ ಹೆಚ್ಚಿಗೆ ಖರ್ಚು ಮಾಡಿದೆ ಎಂಬುದರ ಮೇಲೆ ಲೆಕ್ಕ ಹಾಕಲಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ, ಆದಾಯದ ಅಂಕಿ ಅಂಶವು ಕೇವಲ ತೆರಿಗೆಗಳು ಮತ್ತು ಇತರ ಆದಾಯಗಳನ್ನು ಒಳಗೊಂಡಿರುತ್ತದೆ. ಇದು ಸಾಲಪಡೆದಿರುವ ಹಣವನ್ನು ಒಳಗೊಂಡಿರುವುದಿಲ್ಲ.
ಕಳೆದ ವರ್ಷ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2019-20ನೇ ಸಾಲಿನ ಸರ್ಕಾರದ ವಿತ್ತೀಯ ಕೊರತೆಯನ್ನು ತಹಬದಿಯಲ್ಲಿಡಲು ಜಿಡಿಪಿಯ ಒಟ್ಟು ಗಾತ್ರದ ಶೇ 3.3ರಿಂದ ಶೇ 3.5ಕ್ಕೆ ಪರಿಷ್ಕರಿಸಿದರು. ಇದು ಹಿಂದಿನ ಹಣಕಾಸು ವರ್ಷದ ಗುರಿಗಿಂತ 10 ಮೂಲಾಂಶಗಳು ಕಡಿಮೆಯಾದಂತೆ ಆಗಿದೆ. ಸರ್ಕಾರದ ಆದಾಯ-ವೆಚ್ಚದ ನಡುವೆ ಇರಬೇಕಾದ ಶಿಸ್ತು (ವಿತ್ತೀಯ ಶಿಸ್ತು) ಪರಿಕಲ್ಪನೆಯೂ ಇದರಿಂದ ಬದಲಾದಂತೆ ಆಗಿದೆ.
ಈ ವರ್ಷದ ಬಜೆಟ್ ಮತ್ತು ವಿತ್ತೀಯ ಕೊರತೆ ಪ್ರಸ್ತುತ ಭಾರತ ಸರ್ಕಾರದ ವಿತ್ತೀಯ ಕೊರತೆಯು ಕಳೆದ ಬಜೆಟ್ನ ಅಂದಾಜನ್ನು ಮೀರಿ ಹಿಗ್ಗಿದೆ. ಕಳೆದ ವರ್ಷ ಅಂದರೆ ಫೆ.1, 2020ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹ 7.96 ಲಕ್ಷ ಕೋಟಿ ವಿತ್ತೀಯ ಕೊರತೆಯ ಬಜೆಟ್ ಮಂಡಿಸಿದ್ದರು. ಇದು ಜಿಡಿಪಿಯ ಶೇ 3.5ರಷ್ಟು ಇತ್ತು. ಲಾಕ್ಡೌನ್ ನಂತರದ ಆರ್ಥಿಕ ಕಳಾಹೀನ ಸ್ಥಿತಿಯು ಕೇಂದ್ರದ ಆದಾಯ ಮೂಲಗಳನ್ನೇ ಬತ್ತಿಸಿತ್ತು. ಆಗಸ್ಟ್ ಅಂತ್ಯದ ವೇಳೆಗೆ ವಿತ್ತೀಯ ಕೊರತೆಯ ಪ್ರಮಾಣ 8.7 ಲಕ್ಷ ಕೋಟಿಗೆ ಮುಟ್ಟಿತ್ತು.
ಆರ್ಥಿಕ ವರ್ಷದ ಕೊನೆಕೊನೆಯಲ್ಲಿ ತೆರಿಗೆ ಸಂಗ್ರಹ ಸುಧಾರಿಸಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಆದರೆ ಒಟ್ಟಾರೆ ಆದಾಯದ ನಿಖರ ಅಂದಾಜು ಮತ್ತು ವಿತ್ತೀಯ ಕೊರತೆಯ ಹೊಸ ಪ್ರಮಾಣವನ್ನು ಸರ್ಕಾರ ಎಷ್ಟು ಎಂದು ನಿಗದಿಪಡಿಸಿದೆ ಎಂಬುದು ಬಜೆಟ್ ಮಂಡನೆಯ ನಂತರವೇ ಸ್ಪಷ್ಟವಾಗುತ್ತದೆ.
ಈ ಬಾರಿಯ ಬಜೆಟ್ ಗಾತ್ರದ ಮೇಲೆ ಹಾಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯದಂಥ ಕ್ಷೇತ್ರಗಳಿಗೆ ಸರ್ಕಾರವು ಮಾಡುವ ವೆಚ್ಚದ ಮೇಲೆ ವಿತ್ತೀಯ ಕೊರತೆ ನಿಚ್ಚಳ ಪರಿಣಾಮ ಬೀರಲಿದೆ. ಆರ್ಥಿಕ ಪುನಶ್ಚೇನಕ್ಕಾಗಿ ಹೊಸಹೊಸ ಕ್ರಮಗಳನ್ನು ಎದುರು ನೋಡುತ್ತಿರುವ ಜನರ ಆಕಾಂಕ್ಷೆಗಳನ್ನು ಸರ್ಕಾರ ಎಷ್ಟರಮಟ್ಟಿಗೆ ಈಡೇರಿಸಬಲ್ಲದು ಎಂಬುದು ಬಜೆಟ್ ಮಂಡನೆಯ ನಂತರ ಅರಿವಾಗಲಿದೆ.
ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತೀಯ ಕೊರತೆಯ ಲೆಕ್ಕಾಚಾರ ಹೇಗೆ? ಗಣಿತ ಪರಿಭಾಷೆಯಲ್ಲಿ ಹೇಳುವುದಾದರೆ ಒಟ್ಟು ಆದಾಯದಿಂದ ಒಟ್ಟು ಖರ್ಚಿನ ವ್ಯವಕಲನ. ಇಲ್ಲಿ ಒಟ್ಟು ಆದಾಯ (receipts) ಎನ್ನುವ ಪರಿಕಲ್ಪನೆಯಲ್ಲಿ ಕೇಂದ್ರ ಸರ್ಕಾರವು ಮಾಡುವ ಸಾಲ ವಸೂಲಿ, ಉದ್ಯಮಗಳಿಂದ ಗಳಿಸುವ ಲಾಭ, ಕಂದಾಯ, ತೆರಿಗೆ ಮತ್ತು ಇತರ ಆದಾಯಗಳು ಸೇರುತ್ತವೆ.
ವಿಶ್ವದ ಹಲವು ದೇಶಗಳಲ್ಲಿ ಸಾಮಾನ್ಯವಾಗಿ ಮಂಡನೆಯಾಗುವುದು ಕೊರತೆ ಬಜೆಟ್. ಅಂದರೆ ಲಾಭಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ಇಂಥ ಕೊರತೆ ಒಂದು ಮಿತಿಯಲ್ಲಿರುವುದು ಆರ್ಥಿಕ ಆರೋಗ್ಯದ ಅನಿವಾರ್ಯತೆ. ವಿತ್ತೀಯ ಕೊರತೆಗೆ ವಿಧಿಸಿರುವ ಮಿತಿ ಈ ಆರ್ಥಿಕ ಆರೋಗ್ಯವನ್ನು ಕಾಪಾಡುತ್ತದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಹೆಚ್ಚುವರಿ ಉಳಿಕೆ (surplus). ಇಂಥ ಆರ್ಥಿಕ ಸ್ಥಿತಿಯಲ್ಲಿ ಸರ್ಕಾರವೊಂದು ತಾನು ಮಾಡಬೇಕಾದ ಒಟ್ಟು ಖರ್ಚಿಗಿಂತ ಹೆಚ್ಚು ಆದಾಯವನ್ನು ಗಳಿಸುವ ಪರಿಸ್ಥಿತಿಯಿದು.
ಹೆದ್ದಾರಿ, ಬಂದರು, ರಸ್ತೆಗಳು, ವಿಮಾನ ನಿಲ್ದಾಣ ನಿರ್ಮಾಣಗಳಂಥ ಉತ್ಪಾದಕ ವೆಚ್ಚಕ್ಕಾಗಿ ಸರ್ಕಾರಗಳು ಹೆಚ್ಚು ಹಣ ಖರ್ಚು ಮಾಡುತ್ತವೆ. ಇದರಿಂದ ಬಜೆಟ್ನಲ್ಲಿ ಕೊರತೆ ಕಾಣಿಸಿಕೊಳ್ಳಬಹುದು. ಆದರೆ ಕಾಲಕ್ರಮೇಣ ಇವುಗಳಿಂದ ಸರ್ಕಾರದ ಆದಾಯ ಹೆಚ್ಚಾಗಲು ಈ ಕ್ರಮಗಳು ನೆರವಾಗುತ್ತವೆ. ಹೀಗಾಗಿ ಕೊರತೆ ಬಜೆಟ್ ಮಂಡನೆಯಿಂದ ಅನಾನುಕೂಲವೇ ಹೆಚ್ಚು ಎನ್ನಲು ಆಗುವುದಿಲ್ಲ.
ವಿತ್ತೀಯ ಕೊರತೆ ಲೆಕ್ಕಾಚಾರ ಯಾವುದನ್ನು ಆಧರಿಸಿರುತ್ತದೆ? ವಿತ್ತೀಯ ಕೊರತೆಯು ಮುಖ್ಯವಾಗಿ ಆದಾಯ ಮತ್ತು ಖರ್ಚನ್ನು ಆಧರಿಸಿರುತ್ತದೆ.
ಆದಾಯ: ಕೇಂದ್ರ ಸರ್ಕಾರದ ಆದಾಯವನ್ನು ಎರಡು ವಿಧವಾಗಿ ವಿಂಗಡಿಸಲಾಗುತ್ತದೆ. ತೆರಿಗೆಯಿಂದ ಬರುವ ಆದಾಯ ಮತ್ತು ತೆರಿಗೆಯಲ್ಲದ ಮೂಲಗಳಿಂದ ಬರುವ ಆದಾಯ. ತೆರಿಗೆಯ ಆದಾಯವು ನಿಗಮ ತೆರಿಗೆ, ಆದಾಯ ತೆರಿಗೆ, ಸೀಮಾ (ಕಸ್ಟಮ್ಸ್) ಸುಂಕ, ಅಬಕಾರಿ ಸುಂಕ, ಜಿಎಸ್ಟಿ ಮುಂತಾದವುಗಳಿಂದ ಜಮೆಯಾಗುವ ಮೊತ್ತವನ್ನು ಒಳಗೊಂಡಿರುತ್ತದೆ. ತೆರಿಗೆ ವಿಧಿಸಲಾಗದ ಆದಾಯವು ಬಾಹ್ಯ ಅನುದಾನಗಳು, ಬಡ್ಡಿ, ಲಾಭಾಂಶ (ಡಿವಿಡೆಂಡ್) ಮತ್ತು ಲಾಭ, ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಆದಾಯ ಮತ್ತು ಇತರ ಮೂಲಗಳಿಂದ ಬಂದಿರುತ್ತದೆ.
ಖರ್ಚು: ಸಂಬಳ, ಪಿಂಚಣಿ, ವೇತನ, ಸ್ವತ್ತುಗಳ ರಚನೆ, ಮೂಲಸೌಕರ್ಯ, ಅಭಿವೃದ್ಧಿ, ಆರೋಗ್ಯ ಮತ್ತು ಇತರ ವಲಯಕ್ಕಿರುವ ಖರ್ಚು ಸೇರಿದಂತೆ ಹಲವಾರು ಕಾರ್ಯಗಳಿಗೆ ಸರ್ಕಾರ ಬಜೆಟ್ ಅನುದಾನವನ್ನು ಹಂಚಿಕೆ ಮಾಡುತ್ತದೆ.
ಇದನ್ನೂ ಓದಿ: Explainer | ನೂತನ ಕೃಷಿ ಕಾನೂನು 2020 ಹೇಳುವುದೇನು? ವಿವಾದವೇಕೆ? ರೈತರಲ್ಲಿ ಏಕಿಷ್ಟು ಆತಂಕ?

ಸಾಂದರ್ಭಿಕ ಚಿತ್ರ
ವಿತ್ತೀಯ ಕೊರತೆಯನ್ನು ಸಮತೂಗಿಸುವುದು ಹೇಗೆ? ಹೆಚ್ಚುತ್ತಿರುವ ಹಣಕಾಸು ಕೊರತೆಯು ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ಒಂದು ಸವಾಲಾಗಿದ್ದರೂ, ಅದನ್ನು ಅಲ್ಪಾವಧಿಯ ಮೈಕ್ರೊ ಇಕಾನಮಿಕ್ಸ್ ಮೂಲಕ ಸಮತೋಲನ ಮಾಡಲಾಗುತ್ತದೆ. ಸರ್ಕಾರವು ಸಾಲಪತ್ರಗಳನ್ನು (ಬಾಂಡ್) ಮಾರಾಟ ಮಾಡುವ ಮುಕ್ತ ಮಾರುಕಟ್ಟೆಗಳಿಂದ ಸಾಲ ಪಡೆಯುತ್ತವೆ. ಬ್ಯಾಂಕುಗಳು ಈ ಬಾಂಡ್‌ಗಳನ್ನು ಕರೆನ್ಸಿ ಠೇವಣಿಗಳೊಂದಿಗೆ ಖರೀದಿಸಿ ನಂತರ ಹೂಡಿಕೆದಾರರಿಗೆ ಮಾರಾಟ ಮಾಡುತ್ತವೆ. ಸರ್ಕಾರಿ ಬಾಂಡ್‌ಗಳನ್ನು ಅತ್ಯಂತ ಸುರಕ್ಷಿತ ಹೂಡಿಕೆ ಸಾಧನವೆಂದು ಪರಿಗಣಿಸಲಾಗುತ್ತದೆ. ಈ ಸಾಲಪತ್ರಗಳಿಗೆ ಭಾರತ ಸರ್ಕಾರದ ಖಾತ್ರಿ ಇರುವುದರಿಂದ ಇದರ ಹೂಡಿಕೆಯಲ್ಲಿ ಅಪಾಯಗಳು ಇಲ್ಲ ಅಥವಾ ತೀರಾ ಕಡಿಮೆ ಎಂದೇ ವೈಯಕ್ತಿಕ ಹಣಕಾಸು ಹೂಡಿಕೆ ತಜ್ಞರು ವಿಶ್ಲೇಷಿಸುತ್ತಾರೆ.
ಹಣಕಾಸು ಸಚಿವರಿಗೆ ಇರುವ ಭವಿಷ್ಯದ ಆದಾಯ ಅಥವಾ ಅವಕಾಶಗಳ ಬಗೆಗಿನ ಆತ್ಮವಿಶ್ವಾಸವನ್ನೂ ವಿತ್ತೀಯ ಕೊರತೆ ಪ್ರತಿನಿಧಿಸುತ್ತದೆ. ಸರ್ಕಾರವು ಬಜೆಟ್ನಲ್ಲಿ ಖರ್ಚು ಕಡಿಮೆ ಮಾಡಿದರೆ ಸಾಮಾಜಿಕ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ. ಹಾಗೆಂದು ತೆರಿಗೆ ಹೆಚ್ಚಿಸಿದರೆ ಜನರ ಕೈಲಿ ಹಣ ಹೆಚ್ಚು ಓಡಾಡದೇ ಮಾರುಕಟ್ಟೆ ಕಳಾಹೀನವಾಗುತ್ತದೆ, ಉತ್ಪಾದನಾ ವಲಯದಲ್ಲಿ ಮಂಕು ಆವರಿಸುತ್ತದೆ. ಈ ಎರಡರ ನಡುವೆ ಸಮತೂಕ ಸಾಧಿಸುವುದು ವಿತ್ತೀಯ ಕೊರತೆ ನಿರ್ವಹಣೆಯ ಜಾಣತನ. ಇದು ನಿಜಕ್ಕೂ ಒಂದು ರೀತಿಯಲ್ಲಿ ಹಗ್ಗದ ಮೇಲಿನ ನಡಿಗೆ.
ಕೇಂದ್ರ ಬಜೆಟ್ 2021-22: ಚೇತರಿಸಿಕೊಳ್ಳುತ್ತಾ ಆರ್ಥಿಕತೆ? ದೇಶದ ಜನರ ನಿರೀಕ್ಷೆಗಳೇನು?
ಭಾರತ ಹಿಂದೆಂದೂ ಕಂಡರಿಯದ ಬಜೆಟ್ ನಿಮ್ಮ ಮುಂದಿರಲಿದೆ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೂಗ್ಲಿ!
Published On - 2:32 pm, Thu, 14 January 21



