ರಾಮನಗರ: ಇಲ್ಲೊಂದು ಗ್ರಾಮವಿದೆ. ಈ ಗ್ರಾಮದಲ್ಲಿ ಪ್ರತಿ ಮೂರ್ನಾಲ್ಕು ಮನೆಗಳಿಗೆ ಒಬ್ಬರಾದರೂ ಶಿಕ್ಷಕರು ಇದ್ದಾರೆ. ಅತೀ ಹೆಚ್ಚು ಶಿಕ್ಷಕರಿರುವ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಶಿಕ್ಷಕರ ಗ್ರಾಮ ಎಂದು ಸಹ ಕರೆಯುತ್ತಾರೆ. ಅಷ್ಟೇ ಅಲ್ಲದೇ ಅತೀ ಹೆಚ್ಚು ಅಕ್ಷರಸ್ಥರಿರುವ ಈ ಗ್ರಾಮವು ಇಬ್ಬರು ಕುಲಪತಿಗಳನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ
ಕೊಡುಗೆಯಾಗಿ ನೀಡಿದೆ. ಇದ್ಯಾವ ಗ್ರಾಮ ಅಂತೀರಾ ನೀವೇ ನೋಡಿ.
ಅಂದ ಹಾಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಇಂತಹದೊಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಗ್ರಾಮದಲ್ಲಿ ಹುಟ್ಟಿದ ಅನೇಕರು ಶಿಕ್ಷಕರಾಗಿ, ಅಧ್ಯಾಪಕರಾಗಿ, ಪ್ರೊಫೆಸರ್‌ಗಳಾಗಿ ರಾಜ್ಯ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಾಗಿ ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾಗಿ ಕರುನಾಡಿನಲ್ಲಿ ಮೆರೆದಿದ್ದಾರೆ. ಸ್ವಾತಂತ್ರ ಪೂರ್ವದಿಂದಲೂ ಶಿಕ್ಷಕರ ವೃತ್ತಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಈ ಗ್ರಾಮಸ್ಥರ ಪೈಕಿ ಶೇ 30ರಷ್ಟು ಮಂದಿ ಮಾತ್ರವೇ ಇನ್ನಿತರ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.
ಚಕ್ಕೆರೆ ಗ್ರಾಮದವರೇ ಆಗಿರುವ ದಿವಂಗತ ದೇ. ಜವರೇಗೌಡರು ಹಾಗೂ ಅವರ ಮಗ ಶಶಿಧರ್ ಪ್ರಸಾದ್ ಇಬ್ಬರು ಸಹ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅದಲ್ಲದೇ ಪ್ರಸ್ತುತ ಈ ಗ್ರಾಮದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು ಸೇರಿದಂತೆ ಅನೇಕರು ಇಂದಿಗೂ
ಕರುನಾಡಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇಡೀ ಗ್ರಾಮದ ಶೇ. 90ರಷ್ಟು ಮಂದಿಯು ಶಿಕ್ಷಕರೇ ಆಗಿದ್ದರು. ಆದರೀಗ ಶೇ. 70ಕ್ಕೆ ಇದು ಕುಸಿದಿದೆ ಎಂಬುವುದು ಬದಲಾದ ಕಾಲಘಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಚಕ್ಕೆರೆ ಗ್ರಾಮದಲ್ಲಿ ಇದೀಗ 25 ಮಂದಿ ಶಿಕ್ಷಕರಿದ್ದಾರೆ. ಅಲ್ಲದೇ ರಾಜ್ಯದ ವಿವಿಧೆಡೆಯಲ್ಲೂ ಕೂಡ ಹಲವು ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿಗೂ ಚೆಕ್ಕರೆ ಮೇಸ್ಟ್ರು ಎಂದರೆ ಏನೋ ಸಂತಸ. ನಮ್ಮೂರಿನ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿಯಿಂದ ನಾವು ಸಹ ರಾಷ್ಟ್ರ ಕಟ್ಟುವಂತಹ ಮಹತ್ವ ಹೊಣೆಗಾರಿಕೆ ಇರುವ ಶಿಕ್ಷಕ ಕ್ಷೇತ್ರಕ್ಕೆ ಬಂದಿದ್ದೇವೆ ಎಂಬುವುದು ಸಂತಸ ತಂದಿದ್ದು, ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದು ಇದೇ ಗ್ರಾಮದಲ್ಲಿ ಶಿಕ್ಷಕರಾಗಿರುವುದು ತುಂಬ ಸಂತೋಷವಾಗಿದೆ ಎನ್ನುತ್ತಾರೆ ಇಲ್ಲಿಯ ಶಿಕ್ಷಕರುಗಳು.
ಇನ್ನು ಬಿಜೆಪಿ ಮಾಜಿ ಎಂಎಲ್ಸಿ ಸಚಿವ, ಸಿ.ಪಿ.ಯೋಗೇಶ್ವರ್ ಸಹಾ ಇದೇ ಊರಿನವರಾಗಿದ್ದು, ಅವರ ತಂದೆ ಸಹಾ ಶಿಕ್ಷಕರಾಗಿದ್ದರು. ಕೇವಲ ಶಿಕ್ಷಕರಷ್ಟೇ ಅಲ್ಲದೇ ಸಾಕಷ್ಟು ಜನ ವಿದ್ವಾಂಸರು, ನಾಟಕರಾರರು ಈ ಗ್ರಾಮದಲ್ಲಿ ಇದ್ದು, ಇದು ಗ್ರಾಮದವರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಹಿಂದಿನಿಂದಲೂ ಶಿಕ್ಷಕ, ಶಿಕ್ಷಣ ಕ್ಷೇತ್ರದಲ್ಲಿ ಚಕ್ಕೆರೆ ಗ್ರಾಮ ಬಹಳಷ್ಟು ಸಾಧನೆ ಮಾಡಿ, ಗುರುತರ ಹೆಜ್ಜೆ ಮೂಡಿಸಿಕೊಂಡು ಬರುತ್ತಿದೆ. ನಾನು ಕೂಡ ಈ ಗ್ರಾಮದ ಶಿಕ್ಷಕನಾಗಿರುವುದು ಹೆಮ್ಮೆಯ ವಿಚಾರ ಎಂದು ಗ್ರಾಮದ ಶಿಕ್ಷಕ ಯೋಗೇಶ್ ಹೇಳಿದ್ದಾರೆ.
ನನ್ನ ಗ್ರಾಮದ ಬಗ್ಗೆ, ನನಗೆ ಸಾಕಷ್ಟು ಹೆಮ್ಮೆ ಎನಿಸುತ್ತದೆ. ನಮ್ಮ ಗ್ರಾಮದ ಬಹುತೇಕರು ಶಿಕ್ಷಕರಾಗಿದ್ದು, ಕೇವಲ ಶಿಕ್ಷಕರಷ್ಟೆ ಅಲ್ಲ ಬೇರೆ ಬೇರೆ ಕ್ಷೇತ್ರಕ್ಕೂ ಗ್ರಾಮ ಕೊಡುಗೆ ಕೊಟ್ಟಿದೆ. ಈ ಗ್ರಾಮದಲ್ಲಿ ಹುಟ್ಟಿರುವುದೇ ನನ್ನ ಪುಣ್ಯ ಎಂದು ಸ್ಥಳೀಯ ರಾಜಶೇಖರ್ ಹೇಳಿದ್ದಾರೆ.
ಒಟ್ಟಾರೆ ಇಡೀ ಗ್ರಾಮವೇ ಶಿಕ್ಷಕರಿಂದ ತುಂಬಿರುವುದರಿಂದ ಇಲ್ಲಿನ ಮಕ್ಕಳು ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ತೇರ್ಗಡೆ ಹೊಂದಿದ್ದಾರೆ. ಇನ್ನು ಗ್ರಾಮದಲ್ಲಿ ಅವಿದ್ಯಾವಂತರನ್ನು ಹುಡುಕುವುದು ಕಷ್ಟ. ಒಟ್ಟಿನಲ್ಲಿ ಅಕ್ಷರ ಕಲಿಸುವ ಗುರುಗಳಿಗೆ ವಿಶೇಷ ಆದ್ಯತೆ ನೀಡಿರುವ ಈ ಗ್ರಾಮದಲ್ಲಿ ಇನ್ನಷ್ಟು ಗುರುಗಳು ಜನಿಸಲಿ ಎಂಬುದು ಟಿವಿ9 ಆಶಯ.
ಕೊಲೆ, ಸುಲಿಗೆ, ಅಕ್ರಮ ಚಟುವಟಿಕೆಗಳೇ ತುಂಬಿದ್ದ ಗ್ರಾಮದಲ್ಲಿ ಈಗ ಶಿಕ್ಷಣ ಕ್ರಾಂತಿ! ಯಾವೂರದು?