Kangana Ranaut: ಜಯಲಲಿತಾ ಪಾತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ! ಬದಲಾವಣೆ ಕಂಡು ಫ್ಯಾನ್ಸ್​​ ಫಿದಾ

Jayalalithaa Biopic: ಸದಾ ಕಾಲ ಕಿರಿಕ್​ಗಳಿಂದಲೇ ಸೌಂಡು ಮಾಡುವ ಕಂಗನಾ ರಣಾವತ್​ ಅವರು ಈಗ ‘ತಲೈವಿ’ ಸಿನಿಮಾ ವಿಷಯಕ್ಕೆ ಮತ್ತೆ ಸುದ್ದಿ ಆಗಿದ್ದಾರೆ. ಅವರ ಟ್ರಾನ್ಸ್​ಫಾರ್ಮೇಷನ್​ ಕಂಡು ಫ್ಯಾನ್ಸ್​ ಅಚ್ಚರಿಪಟ್ಟಿದ್ದಾರೆ.

Kangana Ranaut: ಜಯಲಲಿತಾ ಪಾತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ! ಬದಲಾವಣೆ ಕಂಡು ಫ್ಯಾನ್ಸ್​​ ಫಿದಾ
ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​
Follow us
ಮದನ್​ ಕುಮಾರ್​
|

Updated on:Mar 22, 2021 | 11:17 AM

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಸಿನಿಮಾ ಮಾಡುವುದಕ್ಕಿಂತಲೂ ವಿವಾದ ಮಾಡಿಕೊಳ್ಳುವುದೇ ಹೆಚ್ಚು ಎಂಬಂತಹ ವಾತಾವರಣ ನಿರ್ಮಾಣ ಆಗಿದೆ. ಹಾಗಂತ ಅವರು ಸಿನಿಮಾವನ್ನು ನಿರ್ಲಕ್ಷಿಸಿಲ್ಲ. ತಾವು ನಿಭಾಯಿಸುವ ಪಾತ್ರಕ್ಕಾಗಿ ಸೂಕ್ತ ತಯಾರಿ ಮಾಡಿಕೊಳ್ಳುತ್ತಾರೆ. ಅಗತ್ಯವಾದ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಳ್ಳಲು ಕೂಡ ಅವರು ಸಿದ್ಧರಿರುತ್ತಾರೆ. ಈ ಮಾತಿಗೆ ಈಗ ಒಂದು ಲೇಟೆಸ್ಟ್​ ಉದಾಹರಣೆ ಸಿಕ್ಕಿದೆ. ‘ತಲೈವಿ’ ಸಿನಿಮಾದಲ್ಲಿನ ಅವರ ಬದಲಾವಣೆ ಕಂಡು ಎಲ್ಲರೂ ಬೆರಗಾಗಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ‘ತಲೈವಿ’ ಸಿನಿಮಾದಲ್ಲಿ ಕಂಗನಾ ಅವರು ಜಯಲಲಿತಾ ಪಾತ್ರವನ್ನು ಮಾಡುತ್ತಿದ್ದಾರೆ. ಈ ಬಯೋಪಿಕ್​ ಮೇಲೆ ಅವರಿಗೆ ಸಿಕ್ಕಾಪಟ್ಟೆ ಭರವಸೆ ಇದೆ. ಈ ಹಿಂದೆ ಬಿಡುಗಡೆಯಾದ ಒಂದು ಪೋಸ್ಟರ್​ನಲ್ಲಿ ಕಂಗನಾ ಅವರು ಪಕ್ಕಾ ಜಯಲಲಿತಾ ರೀತಿ ಕಾಣಿಸಿಕೊಂಡಿದ್ದರು. ಇನ್ನೊಂದೆರಡು ಹೊಸ ಪೋಸ್ಟರ್​ಗಳನ್ನು ಕಂಗನಾ ಹಂಚಿಕೊಂಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಾಜಕೀಯಕ್ಕೆ ಕಾಲಿಡುವುದಕ್ಕೂ ಮುನ್ನ ಜಯಲಲಿತಾ ಸಿನಿಮಾ ನಟಿಯಾಗಿ ಜನಪ್ರಿಯರಾಗಿದ್ದರು. ಒಬ್ಬ ರಾಜಕಾರಣಿಯಾಗಿ, ಸಿನಿಮಾ ನಟಿಯಾಗಿ ಅವರ ಎರಡೂ ಗೆಟಪ್​ಗಳನ್ನು ‘ತಲೈವಿ’ ಚಿತ್ರದಲ್ಲಿ ತೋರಿಸಲಾಗಿದೆ. ಅದಕ್ಕೆ ತಕ್ಕಂತೆ ಕಂಗನಾ ತಮ್ಮ ದೇಹದ ತೂಕದಲ್ಲಿ ಏರಿಳಿತ ಮಾಡಿಕೊಂಡಿದ್ದಾರೆ. ಒಂದು ಗೆಟಪ್​ಗಾಗಿ 20 ಕೆಜಿ ದೇಹ ತೂಕ ಹೆಚ್ಚಿಸಿಕೊಂಡಿದ್ದ ಅವರು ನಂತರ ಮತ್ತೆ ಸ್ಲಿಮ್​ ಆದರು. ಅದಕ್ಕೆ ಸಾಕ್ಷಿ ಎಂಬಂತೆ ಈ ಫೋಟೋಗಳನ್ನು ಕಂಗನಾ ಶೇರ್​ ಮಾಡಿಕೊಂಡಿದ್ದಾರೆ.

‘ತಲೈವಿ ಟ್ರೇಲರ್​ ಬಿಡುಗಡೆ ಆಗಲು ಇನ್ನೊಂದು ದಿನವಷ್ಟೇ ಬಾಕಿ. ಕೆಲವೇ ತಿಂಗಳುಗಳಲ್ಲಿ 20 ಕೆಜಿ ಹೆಚ್ಚಿಸಿಕೊಳ್ಳುವುದು ಹಾಗೂ ಮತ್ತೆ ಸ್ಲಿಮ್​ ಆಗುವುದು ಸವಾಲಾಗಿತ್ತು. ಇನ್ನು ಕೆಲವೇ ಗಂಟೆಗಳಲ್ಲಿ ಜಯಾ ಪಾತ್ರ ನಿಮ್ಮದಾಗಲಿದೆ’ ಎಂದು ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದಾರೆ. ಜಯಲಲಿತಾ ಸಿನಿಮಾ ನಟಿಯಾಗಿದ್ದಾಗ ಹೇಗಿದ್ದರು ಹಾಗೂ ರಾಜಕೀಯಕ್ಕೆ ಕಾಲಿಟ್ಟ ನಂತರ ಯಾವ ರೀತಿ ಬದಲಾದರು ಎಂಬುದನ್ನು ತೋರಿಸುವಂತಹ ಮೂರು ಪೋಸ್ಟರ್​ಗಳನ್ನು ಕಂಗನಾ ಹಂಚಿಕೊಂಡಿದ್ದಾರೆ. ಕಾಮೆಂಟ್​ ಮೂಲಕ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಮಾ.23ರಂದು ತಲೈವಿ ಟ್ರೇಲರ್​ ಲಾಂಚ್​ ಆಗಲಿದೆ. ಮುಂಬೈ ಮತ್ತು ಚೆನ್ನೈನಲ್ಲಿ ಏಕಕಾಲಕ್ಕೆ ಟ್ರೇಲರ್​ ಬಿಡುಗಡೆ ಆಗಲಿದೆ. ಭಾರತದ ರಾಜಕಾರಣದಲ್ಲಿ ಜಯಲಲಿತಾ ಓರ್ವ ಪ್ರಭಾವಿ ಮಹಿಳೆ ಆಗಿದ್ದರು. ತಮಿಳುನಾಡಿನಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ರಾಜಕೀಯ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಿದ್ದರು. ಅಂಥ ಪ್ರಭಾವಿ ಮಹಿಳೆಯ ಜೀವನದ ಘಟನೆಗಳನ್ನು ಈ ಸಿನಿಮಾದಲ್ಲಿ ಹೇಗೆ ತೋರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಎಲ್ಲರ ಮನದಲ್ಲಿ ಮೂಡಿದೆ.

‘ತಲೈವಿ’ ಪಾತ್ರಕ್ಕಾಗಿ ಕಂಗನಾ ತಮಿಳು ಕಲಿತಿದ್ದಾರೆ. ಭರತನಾಟ್ಯ ಕೂಡ ಅಭ್ಯಾಸ ಮಾಡಿದ್ದಾರೆ. ಈ ಚಿತ್ರಕ್ಕೆ ಎ.ಎಲ್​. ವಿಜಯ್​ ನಿರ್ದೇಶನ ಮಾಡಿದ್ದು, ಏ.23ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಅವಹೇಳನಕಾರಿ ಟ್ವೀಟ್ ಪ್ರಕರಣ​: ಕಂಗನಾ ರಣಾವತ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆ!

ಜಯಲಲಿತಾ ಅಂದ್ರೆ ನನಗೆ ತುಂಬಾ ಇಷ್ಟ ಅಂದಿದ್ರು ಮೋಹಕತಾರೆ ಶ್ರೀದೇವಿ

Published On - 10:57 am, Mon, 22 March 21