ಬೇಸಿಗೆಗೆ ಮುನ್ನವೇ ಕಪ್ಪತಗುಡ್ಡಕ್ಕೆ ಬೆಂಕಿ: ಕಾಡು ಕೊತ್ತಂಬರಿ ಸೇರಿದಂತೆ ಅರಣ್ಯದ ನಾನಾ ಬಗೆಯ ಮರಗಿಡಗಳಿಗೆ ಕುತ್ತು
ಕಾಲಕಾಲಕ್ಕೆ ಇಲಾಖೆಯ ಸಿಬ್ಬಂದಿಗಳು ನಿಗಾವಹಿಸಿ ಬೆಟ್ಟದ ತಪ್ಪಲಿನಲ್ಲಿ ಕಾವಲು ಕಾಯುವ ಮೂಲಕ ಇದನ್ನು ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಆದರೆ, ಕೆಲವರು ಅನಾಗರಿಕತೆಯಿಂದ ಅರಣ್ಯಕ್ಕೆ ಬೆಂಕಿ ಹಚ್ಚುವ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ.
ಗದಗ: ಒಂದು ಕಡೆ ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಾ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿದೆ. ಆದರೆ ಮತ್ತೊಂದೆಡೆ ಕಿಡಿಗೇಡಿಗಳು ಅವೈಜ್ಞಾನಿಕವಾಗಿ ಬೆಟ್ಟದ ತಪ್ಪಲಿನಲ್ಲಿ ಬೆಳೆದಿರುವ ಗಿಡಗಳಿಗೆ ಬೆಂಕಿ ಇಡುವ ಪ್ರವೃತ್ತಿ ಮುಂದುವರೆಸುತ್ತಿದ್ದಾರೆ. ಇದರಿಂದ ಅರಣ್ಯದ ನಾನಾ ಬಗೆಯ ಮರಗಿಡಗಳು ಹಾನಿಯಾಗುತ್ತಿದೆ.
ನಿಜ ಭೂಮಿಯ ಮೇಲಿನ ಮನುಕುಲಕ್ಕೆ ಅರಣ್ಯ ಸಂರಕ್ಷಣೆ ಅತ್ಯಂತ ಮಹತ್ವವಾಗಿದೆ. ಎಲ್ಲೆಡೆ ಅಧಿಕಾರಿಗಳು, ಸ್ವಯಂಸೇವಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಜನರಲ್ಲಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ. ಆದರೆ, ಬೇಸಿಗೆಗೆ ಮುನ್ನವೇ 33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿರುವ ಕಪ್ಪತಗುಡ್ಡದಲ್ಲಿ ಕಿಡಿಗೇಡಿಗಳು ಬೆಟ್ಟದ ತಪ್ಪಲಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು, ಅಧಿಕಾರಿಗಳಿಗೆ ತಲೆನೋವು ಉಂಟುಮಾಡಿದೆ.
ಕಪ್ಪತಗುಡ್ಡ ಸೆರಗಂಚಿನ ಡೋಣಿ-ಡಂಬಳದಲ್ಲಿ ಬೆಂಕಿ: ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಹೇರಳವಾಗಿ ಶ್ರೀಗಂಧ, ಹೊಳೆಮತ್ತಿ, ಕಮರಾ, ದಿಂಡಗ, ಕಾಚು, ಮರಾಲೆ, ಪಚಾಲಿ, ಜಾನೆ, ಹೊನ್ನೆ, ನಗರಿ, ಬೆಟ್ಟದ ತಾವರೆಯಂತಹ ಗಿಡಮರಗಳಿವೆ. ಆಯುರ್ವೇದಕ್ಕೆ ಬಳಸುವ ಬೆಟ್ಟದ ನೆಲ್ಲಿ, ಕಾಡು ಕೊತ್ತಂಬರಿ, ಮಧುನಾಶಿನಿ, ಮೆಕ್ಕೆಗಿಡ (ಹೃದಯ ರೋಗಿಗಳಿಗೆ ದಿವ್ಯೌಷಧಿ), ಕಾಡು ಈರಳ್ಳಿ (ಪಶು ಚಿಕಿತ್ಸೆಗೆ ಬಳಸುತ್ತಾರೆ), ಆಲಿಕಾ-ಉಳ್ಳಿಕಾ, ತೊಟ್ಲುಕಾಯಿ, ಅಳಿಲು ಕಾಯಿ, ಧೂಪದಂತಹ ಔಷಧಿ ಸಸ್ಯಗಳು ಇವೆ.
ಇನ್ನೂ ಕೇರಳದ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಿಸುವ “ಲೆಮನ್ ಗ್ರಾಸ್” ನಂತಹ ಔಷಧಿ ಸಸ್ಯ ಬೆಳೆದಿದೆ. ಕೃಷ್ಣಮೃಗ, ಚಿರತೆ, ಕರಡಿ, ಕೊಂಡುಕುರಿ, ನಕ್ಷತ್ರ ಆಮೆ, ತೋಳ, ಕತ್ತೆ ಕಿರುಬ, ಕಾಡುಬೆಕ್ಕು, ಚಿಪ್ಪು ಹಂದಿ ಉಡ, ನವಿಲು ಇದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುವ “ದರವಾಯಿನ” ಎಂಬ ಹಕ್ಕಿ ಇಲ್ಲಿನ ಅರಣ್ಯ ವಲಯದಲ್ಲಿದೆ. ಆದರೆ ಕಪ್ಪತಗುಡ್ಡ ಸೆರಗಂಚಿನ ಡೋಣಿ, ಚಿಕ್ಕವಡ್ಡಟ್ಟಿ, ಡಂಬಳ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಸುಟ್ಟ ಕರಕಲಾಗಿರುವುದು ವಿಪರ್ಯಾಸ.
ಮೂಢನಂಬಿಕೆ ಪ್ರಭಾವ : ಪ್ರತಿ ಮುಂಗಾರು ಆರಂಭದಲ್ಲಿ ಅರಣ್ಯ ಇಲಾಖೆಯು ವಿವಿಧ ಯೋಜನೆಗಳ ಮೂಲಕ ಸರ್ಕಾರಿ ಭೂಮಿ, ಗೋಮಾಳ, ಶಾಲಾ ಆವರಣ, ಬೆಟ್ಟದ ತಪ್ಪಲು, ಮೀಸಲು ಅರಣ್ಯ ಪ್ರದೇಶ ಸೇರಿದಂತೆ ಇತರೆಡೆಗಳಲ್ಲಿ ಗಿಡಗಳನ್ನು ನೆಟ್ಟು ಕಾಲಕಾಲಕ್ಕೆ ನೀರುಣಿಸಿ ಪೋಷಿಸುವ ಕಾರ್ಯ ಮಾಡುತ್ತಿದೆ. ಆದರೆ, ಅದರ ಸಂರಕ್ಷಣೆಯ ಬಗ್ಗೆ ವೈಜ್ಞಾನಿಕ ಪರಿಕಲ್ಪನೆ ಇಲ್ಲದ ಜನತೆ ಅನಾಗರಿಕತೆಯಿಂದ ತಮ್ಮ ಗ್ರಾಮಗಳ ಸಮೀಪವಿರುವ ಬೆಟ್ಟದ ತಪ್ಪಲಿಗೆ ಬೆಂಕಿ ಹಚ್ಚುವ ಮೂಲಕ ಅಧಿಕಾರಿಗಳ ಶ್ರಮವನ್ನು ನೀರಿನಲ್ಲಿ ಹೋಮ ಮಾಡುತ್ತಿದ್ದಾರೆ. ಅಲ್ಲದೆ ಸುತ್ತಲಿನ ಪರಿಸರ ಮತ್ತು ಗಾಳಿ ಮಲಿನವಾಗಿ ಜನರಿಗೆ ಆರೋಗ್ಯದ ಸಮಸ್ಯೆಗಳು ಎದುರಾಗುವ ಸಂಭವ ಹೆಚ್ಚಾಗಿದೆ.
ಈ ವಿಚಾರವಾಗಿ ಗದಗ ಅರಣ್ಯ ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ್ ಅವರನ್ನು ಕೇಳಿದರೆ, ಇಲಾಖೆಯು ಮುಂಗಾರು ಆರಂಭದಿಂದಲೂ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡಿಕೊಂಡು ಬಂದಿರುತ್ತದೆ. ಆದರೆ, ಜನವರಿ ತಿಂಗಳಿನಲ್ಲಿ ತಾಪಮಾನ ಹೆಚ್ಚಾದ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ಕುರಿ, ಮೇಕೆ ಸೇರಿದಂತೆ ಇನ್ನಿತರ ಜಾನುವಾರುಗಳ ಪೋಷಣೆಗೆಂದು ಬೆಟ್ಟಗಳಿಗೆ ತೆರಳುವ ಹಳ್ಳಿಗರು ಸಂಜೆ ಊರ ಕಡೆಗೆ ಬರುವ ವೇಳೆ ಅನಾವಶ್ಯಕವಾಗಿ ಬೆಟ್ಟದ ತಪ್ಪಲಿನಲ್ಲಿನ ಹುಲ್ಲಿಗೆ ಬೆಂಕಿ ಹಚ್ಚುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದಾರೆ.
ಇದರಿಂದ ತಾಪಮಾನದ ಪ್ರಮಾಣ ಹೆಚ್ಚಾಗಿ ಬೆಂಕಿಯು ಇಡೀ ಬೆಟ್ಟಕ್ಕೆ ಆವರಿಸಿ ಅಲ್ಲಿನ ಗಿಡ ಮರಗಳು ಹಾಗೂ ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗುತ್ತಿವೆ. ಜನರಲ್ಲಿನ ಮೌಢ್ಯದಿಂದ ಪ್ರತಿವರ್ಷ ಈ ಸಮಸ್ಯೆಗಳನ್ನು ಇಲಾಖೆ ಎದುರಿಸುವಂತಾಗಿದೆ ಎಂದು ಹೇಳಿದರು.
ಕಾಲಕಾಲಕ್ಕೆ ಇಲಾಖೆಯ ಸಿಬ್ಬಂದಿಗಳು ನಿಗಾವಹಿಸಿ ಬೆಟ್ಟದ ತಪ್ಪಲಿನಲ್ಲಿ ಕಾವಲು ಕಾಯುವ ಮೂಲಕ ಇದನ್ನು ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಆದರೆ, ಕೆಲವರು ಅನಾಗರಿಕತೆಯಿಂದ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಬೆಟ್ಟಕ್ಕೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅದನ್ನು ನಂದಿಸಲು ಮುಂದಾಗುತ್ತಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ್ ಹೇಳಿದ್ದಾರೆ.
ಪ್ರತಿವರ್ಷ ಬೇಸಿಗೆ ಆರಂಭಕ್ಕೂ ಮುನ್ನ ಕಪ್ಪತಗುಡ್ಡದಲ್ಲಿನ ಒಣ ಹುಲ್ಲು ಹೋಗಿ ಹೊಸ ಚಿಗುರು ಬರಲಿ ಎಂದು ಗ್ರಾಮಾಂತರ ಪ್ರದೇಶದ ಜನತೆ ಈ ರೀತಿ ಬೆಟ್ಟಕ್ಕೆ ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗುತ್ತಾರೆ. ಇವರ ಮೌಢ್ಯತೆ ನಿವಾರಣೆಗಾಗಿ ಅಧಿಕಾರಿಗಳು ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಬೆಟ್ಟಕ್ಕೆ ಬೆಂಕಿ ಹಚ್ಚುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಡಂಬಳ ನಿವಾಸಿ ವಿನಾಯಕ ತಿಳಿಸಿದ್ದಾರೆ.
ಎಲ್ಲೇ ಬೆಂಕಿ ಬಿದ್ರೂ ಮೊಬೈಲ್ಗೆ ಮೆಸೇಜ್: ಕಾಡ್ಗಿಚ್ಚು ನಿಯಂತ್ರಣಕ್ಕೆ ಹೊಸ ಪ್ಲಾನ್!