Oscar Awards 2021: ಆಸ್ಕರ್ ಪ್ರಶಸ್ತಿ ಓಟದಿಂದ ಹೊರಗೆ ಬಿದ್ದ ಮಲಯಾಳಂ ‘ಜಲ್ಲಿಕಟ್ಟು’ ಸಿನಿಮಾ

| Updated By: ganapathi bhat

Updated on: Apr 06, 2022 | 8:03 PM

ಅಂತಿಮ ಸುತ್ತಿಗೆ ಮೊದಲು ಪರಿಷ್ಕರಣೆಗೊಂಡ 15 ಸಿನಿಮಾ ಪಟ್ಟಿಯಲ್ಲಿ ಮಲಯಾಳಂನ ಜಲ್ಲಿಕಟ್ಟು ಆಯ್ಕೆಯಾಗಿಲ್ಲ. ಇದರಿಂದ ಭಾರತೀಯ ಚಲನಚಿತ್ರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

Oscar Awards 2021: ಆಸ್ಕರ್ ಪ್ರಶಸ್ತಿ ಓಟದಿಂದ ಹೊರಗೆ ಬಿದ್ದ ಮಲಯಾಳಂ ‘ಜಲ್ಲಿಕಟ್ಟು’ ಸಿನಿಮಾ
ಲಿಜೋ ಜೋಸ್ ಪೆಲ್ಲಿಶ್ಶೆರಿ, ಜಲ್ಲಿಕಟ್ಟು ಸಿನಿಮಾ ಪೋಸ್ಟರ್
Follow us on

ದೆಹಲಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ, ಉತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಲಿಜೋ ಜೋಸ್ ಪೆಲ್ಲಿಶ್ಶೆರಿ ನಿರ್ದೇಶನದ ‘ಜಲ್ಲಿಕಟ್ಟು’ ಸಿನಿಮಾ ಅಂತಿಮ ಹಂತದಲ್ಲಿ ಆಸ್ಕರ್ ಓಟದಿಂದ ಹೊರಬಿದ್ದಿದೆ. ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಜಲ್ಲಿಕಟ್ಟು (Jallikattu) 93ನೇ ಅಕಾಡೆಮಿ ಅವಾರ್ಡ್ಸ್ ಸಾಲಿನಿಂದ ಹೊರಗುಳಿಯುವಂತಾಗಿದೆ.

ಅಂತಿಮ ಸುತ್ತಿಗೂ ಮೊದಲು ಪರಿಷ್ಕರಣೆಗೊಂಡ 15 ಸಿನಿಮಾಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾ ಜಲ್ಲಿಕಟ್ಟು ಆಯ್ಕೆಯಾಗಿಲ್ಲ. ಈ 15 ಸಿನಿಮಾಗಳಲ್ಲಿ ಬಳಿಕ, 5 ಚಲನಚಿತ್ರಗಳು ಅಂತಿಮ ಸುತ್ತಿನಲ್ಲಿ ಭಾಗವಹಿಸಲಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈಯನ್ಸಸ್ (AMPAS) ಬುಧವಾರ (ಫೆ.10) ಈ ಮಾಹಿತಿ ನೀಡಿದೆ.

ಥಾಮಸ್ ವಿಂಟರ್​ಬರ್ಗ್​ನ “Another Round”, ಅಂದ್ರೆಯ್ ಕೊಂಚಾಲ್ವೊಸ್ಕಿಯ ರಷ್ಯನ್ ಸಿನಿಮಾ “Dear Comrades!”, ಸೆಜ್ ರಿಪಬ್ಲಿಕ್​ನ “Charlatan” ಹಾಗೂ ಎರಡು ಸಾಕ್ಷ್ಯಚಿತ್ರಗಳು ಆಸ್ಕರ್ ಪ್ರಶಸ್ತಿ ಗೆಲ್ಲುವ ಓಟದಲ್ಲಿ ಮುಂಚೂಣಿಯಲ್ಲಿವೆ. ಜೊತೆಗೆ, ಇರಾನ್, ಮೆಕ್ಸಿಕೋ, ತೈವಾನ್ ಮುಂತಾದ ದೇಶಗಳ ಇನ್ನೂ ಹತ್ತು ಸಿನಿಮಾಗಳು ಈ ಸ್ಪರ್ಧೆಯಲ್ಲಿವೆ. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡಿರುವ ಅಂತಿಮ ಆಯ್ಕೆಗಳು ಮಾರ್ಚ್ 15ರಂದು ಘೋಷಣೆ ಆಗಲಿದೆ. ಏಪ್ರಿಲ್ 25ರಂದು ಅಕಾಡೆಮಿ ಅವಾರ್ಡ್ಸ್ ಸಮಾರಂಭ ನಡೆಯಲಿದೆ.

ಲಿಜೋ ಜೋಸ್ ಪೆಲ್ಲಿಶ್ಶೆರಿ ನಿರ್ದೇಶನದ ‘ಜಲ್ಲಿಕಟ್ಟು’ ಮಲಯಾಳಿ ಕಥೆಗಾರ ಹರೀಶ್​ರ ‘ಮಾವೊಯಿಸ್ಟ್’ ಕಥೆ ಆಧಾರಿತ ಸಿನಿಮಾವಾಗಿತ್ತು. ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮನ್ ಅಬ್ದುಸಮದ್, ಸಂತಿ ಬಾಲಚಂದ್ರನ್ ಚಿತ್ರದ ತಾರಾಗಣದಲ್ಲಿದ್ದರು.

ಸಪ್ಟೆಂಬರ್ 6, 2019ರಂದು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಜಲ್ಲಿಕಟ್ಟು’ ಭಾಗವಹಿಸಿತ್ತು. ಉತ್ತಮ ವಿಮರ್ಶೆ, ಅಭಿಪ್ರಾಯಗಳನ್ನು ಕೂಡ ಸಿನಿಮಾ ಪಡೆದಿತ್ತು. 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲಿಜೋ ಜೋಸ್ ಪೆಲ್ಲಿಶ್ಶೆರಿ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಭಾರತದ ಯಾವ ಚಲನಚಿತ್ರವೂ ಇದುವರೆಗೆ ಆಸ್ಕರ್ ಪ್ರಶಸ್ತಿ ಪಡೆದಿಲ್ಲ. 2001ರಲ್ಲಿ ‘ಲಗಾನ್’, 1958ರಲ್ಲಿ ‘ಮದರ್ ಇಂಡಿಯಾ’, 1989ರಲ್ಲಿ ‘ಸಲಾಮ್ ಬಾಂಬೆ’ ಚಿತ್ರಗಳು ಅಂತಿಮ 5 ಸಿನಿಮಾಗಳ ಪಟ್ಟಿಗೆ ಆಯ್ಕೆಯಾಗಿದ್ದವು. 2019ರಲ್ಲಿ ಜೋಯಾ ಅಖ್ತರ್​ರ ‘ಗಲ್ಲಿ ಬಾಯ್’ ಸಿನಿಮಾ ಭಾರತದಿಂದ ಆಸ್ಕರ್​ಗೆ ಪ್ರವೇಶ ಪಡೆದಿತ್ತು.

ಆಸ್ಕರ್​ ರೇಸ್​ನಲ್ಲಿ ಕನ್ನಡಿಗ ಗೋಪಿನಾಥ್​ ಜೀವನದ ಕಥೆ!

‘Jallikattu’ Enters Oscar Awards ಮಲಯಾಳಂನ ‘ಜಲ್ಲಿಕಟ್ಟು’ ಆಸ್ಕರ್ ಪ್ರಶಸ್ತಿ ಸ್ಪರ್ಧೆ​ಗೆ ಆಯ್ಕೆ

Published On - 12:21 pm, Wed, 10 February 21