‘Jallikattu’ Enters Oscar Awards ಮಲಯಾಳಂನ ‘ಜಲ್ಲಿಕಟ್ಟು’ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ
ಎಪ್ರಿಲ್ 25, 2021ರಲ್ಲಿ 93ನೇ ಅಕಾಡೆಮಿ ಅವಾರ್ಡ್ಸ್ ನಡೆಯಲಿದೆ. ಅವಾರ್ಡ್ ಕಾರ್ಯಕ್ರಮದ ಒಂದು ತಿಂಗಳ ಮುಂಚೆ ಅಂದರೆ ಫೆಬ್ರವರಿಯ ನಾಮಿನೇಷನ್ ಪಕ್ರಿಯೆಯಲ್ಲಿ ಜಲ್ಲಿಕಟ್ಟು ಚಿತ್ರ ಜಯಗಳಿಸುತ್ತಾ.. ಕಾದು ನೋಡಬೇಕಿದೆ.
ಭಾರತದಲ್ಲಿ ನೋಡುಗರ ಮನಗೆದ್ದಿದ್ದ ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂನ ‘ಜಲ್ಲಿಕಟ್ಟು’ ಚಿತ್ರ ಈಗ ಅಂತರಾಷ್ಟ್ರೀಯ ಮಟ್ಟಕ್ಕೆ ಕಾಲಿಡಲು ಸಿದ್ಧವಾಗಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಜಲ್ಲಿಕಟ್ಟು ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (FFI) ಇಂದು ಅಧಿಕೃತ ಮಾಹಿತಿ ನೀಡಿದ್ದು ಹಿಂದಿ, ಮರಾಠಿ ಮತ್ತು ಇತರ ಭಾಷೆಗಳ ಒಟ್ಟು 27 ಚಲನಚಿತ್ರಗಳ ಪೈಕಿ ಜಲ್ಲಿಕಟ್ಟು ಸರ್ವಾನುಮತದಿಂದ ಆಯ್ಕೆಯಾಗಿರುವುದು ಖಚಿತವಾಗಿದೆ.
‘ದಿ ಡಿಸಿಪ್ಲಿನ್‘, ‘ಶಕುಂತಲಾ ದೇವಿ’, ‘ಶಿಕಾರ’, ‘ಛಾಪಕ್’, ‘ಭೋಂಸ್ಲೆ’, ‘ಚೆಕ್ ಪೋಸ್ಟ್’ ಹೀಗೆ ಅನೇಕ ಸಿನಿಮಾಗಳ ಮಧ್ಯೆ ಜಲ್ಲಿಕಟ್ಟು ಆಯ್ಕೆಯಾಗಿದೆ. ಎಪ್ರಿಲ್ 25, 2021ರಲ್ಲಿ 93ನೇ ಅಕಾಡೆಮಿ ಅವಾರ್ಡ್ಸ್ ನಡೆಯಲಿದೆ. ಅವಾರ್ಡ್ ಕಾರ್ಯಕ್ರಮದ ಒಂದು ತಿಂಗಳ ಮುಂಚೆ ಅಂದರೆ ಫೆಬ್ರವರಿಯ ನಾಮಿನೇಷನ್ ಪಕ್ರಿಯೆಯಲ್ಲಿ ಈ ಚಿತ್ರ ಜಯಗಳಿಸುತ್ತಾ ಎಂದು ಕಾದು ನೋಡಬೇಕಿದೆ.
ಕೊರೊನಾ ಮಹಾಮಾರಿಯಿಂದಾಗಿ ಚಿತ್ರಮಂದಿರಗಳೆಲ್ಲ ಮುಚ್ಚಿದ್ದವು. ಆ ಕಾರಣದಿಂದಾಗಿ ಈ ಕಾರ್ಯಕ್ರಮ ಸ್ವಲ್ಪ ತಡವಾಗಿದೆ.
ಗುಡ್ಡಗಾಡು ಪ್ರದೇಶದ ದೂರದ ಹಳ್ಳಿಯೊಂದರ ಕಸಾಯಿಖಾನೆಯಿಂದ ತಪ್ಪಿಸಿಕೊಳ್ಳುವ ಕೋಣ ಊರಿನಲ್ಲಿ ಸೃಷ್ಟಿಸುವ ಅವಾಂತರ ಹಾಗೂ ಅದನ್ನು ಹಿಡಿಯಲೆಂದು ಹೊರಟ ಮನುಷ್ಯನ ಮೃಗೀಯ ವರ್ತನೆಯನ್ನು ತೋರುವ ಕಥಾಹಂದರ ಹೊಂದಿರುವ ಈ ಸಿನಿಮಾ ಹರೀಶ್ ಅವರ ಮಾವೋವಾದಿ ಎಂಬ ಸಣ್ಣ ಕಥೆಯನ್ನು ಆಧರಿಸಿದೆ. ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮೊನ್ ಅಬ್ದುಸಮದ್ ಮತ್ತು ಸಂತಿ ಬಾಲಚಂದ್ರನ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಸೆಪ್ಟೆಂಬರ್ 6, 2019 ರಂದು ಟೊರೊಂಟೊ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡ ಜಲ್ಲಿಕಟ್ಟು ಅಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದಿತ್ತು. ಕಳೆದ ವರ್ಷ ಏರ್ಪಡಿಸಲಾಗಿದ್ದ ಭಾರತದ 50ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪೆಲ್ಲಿಸ್ಸೆರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಹಿಂದೆ 2019ರಲ್ಲಿ ಜೋಯಾ ಅಖ್ತರ್ ನಿರ್ದೇಶನದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ‘ಗಲ್ಲಿಬಾಯ್’ ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Published On - 5:46 pm, Wed, 25 November 20