
ಭಾರತದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳೂ ಒಂದಲ್ಲ ಒಂದು ಬಗೆಯಲ್ಲಿ ವಿಶಿಷ್ಟವೇ. ಹಬ್ಬಗಳಂದು ಸೇವಿಸುವ ಆಹಾರ ವೈವಿಧ್ಯತೆ ಮತ್ತೆಲ್ಲೂ ಸಿಗದು. ಚೌತಿಗೆ ಚಕ್ಕುಲಿ, ದೀಪಾವಳಿಗೆ ಹೋಳಿಗೆ, ಕಡುಬು, ಕಜ್ಜಾಯಗಳ ಸುರಿಮಳೆ. ಆದರೆ ಇಂದು ದೇಶಾದ್ಯಂತ ಆಚರಿಸಲ್ಪಡುತ್ತಿರುವ ಶಿವರಾತ್ರಿಯಂದು ಸೇವಿಸುವ ಆಹಾರ ಎಲ್ಲಕ್ಕಿಂತ ಭಿನ್ನ. ಬಾಯಿ ಸಿಹಿ ಮಾಡಿಕೋಳ್ಳುವುದಕ್ಕಿಂತ ಇಂದು ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಮಾನಸಿಕವಾಗಿ ಸ್ಥಿರತೆ ಹೊಂದಲು ಉಪವಾಸ ಮಾಡುವ ಸಂಪ್ರದಾಯ ನಮ್ಮ ಹಿರೀಕರಿಂದ ಬೆಳೆದುಬಂದಿದೆ.
ದೇಹಕ್ಕೆ ಉಪವಾಸದ ಅಗತ್ಯದ ಬಗ್ಗೆ ಹಬ್ಬಗಳನ್ನು ಸೃಷ್ಟಿಸಿದ ಪುರಾತನ ಭಾರತೀಯರಿಗೆ ಅರಿವಿತ್ತು. ಅದೇ ಕಾರಣಕ್ಕೆ ಶಿವರಾತ್ರಿ ಜಾಗರಣೆ, ಉಪವಾಸ ಎಲ್ಲವು ಜಾರಿಗೆ ಬಂತು. ಆದಷ್ಟು ಆಹಾರ ಸೇವಿಸದೇ ಕಳೆವ ದಿನ ಶಿವರಾತ್ರಿ. ತೀರಾ ಅಗತ್ಯ ಎನಿಸಿದಾಗಲೂ ಫಲಾಹಾರ, ಹಾಲು ಸೇವಿಸಿಯೇ ಉಳಿವ ಪದ್ಧತಿಗಳು ನಮ್ಮಲ್ಲಿ ರೂಢಿಯಲ್ಲಿವೆ.
ಶಿವರಾತ್ರಿಯಂದು ನಿರಾಹಾರ ಕಲ್ಪನೆಯ ಜತೆಗೆ ಕೆಲ ಪ್ರದೇಶಗಳಲ್ಲಿ ನಿರ್ಜಲ ಕಲ್ಪನೆಯು ಆಚರಣೆಯಲ್ಲಿದೆ. ನೀರನ್ನೂ ಕುಡಿಯದೇ ದಿನವಿಡೀ ಶಿವನ ಜಪದಲ್ಲೇ ತೃಷೆ ಇಂಗಿಸಿಕೊಳ್ಳುವ ಭಕ್ತರು ನಮ್ಮಲ್ಲಿದ್ದಾರೆ. ಹೀಗಾಗಿ, ಶಿವರಾತ್ರಿ ತಾಳ್ಮೆ ಪರೀಕ್ಷಿಸುವ ಹಬ್ಬ ಎಂದು ಕರೆಯಲ್ಪಡುತ್ತದೆ. ಎಷ್ಟೇ ಹಸಿವಾದರೂ ಘನಾಹಾರ ಸೇವನೆ ಮಾಡದ, ಕೇವಲ ಫಲಾಹಾರವನ್ನೇ ಸಣ್ಣ ಪ್ರಮಾಣದಲ್ಲಿ ತಿಂದು ಶಿವಧ್ಯಾನ ಮಾಡುವುದು ಜೀರ್ಣಕ್ರಿಯೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ,
1) ಇಂದು ಮಸಾಲೆ ಆಹಾರ ಸೇವನೇ ಬೇಡವೇ ಬೇಡ. ಅನಿವಾರ್ಯದವಿದ್ದಲ್ಲಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ.
2) ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೇ ಬೇಡ. ಅನ್ಯಜೀವಿಯ ಹಿಂಸೆಯನ್ನು ಶಿವರಾತ್ರಿಯಂದು ಮಾಡದಿರೋಣ.
3) ಅನ್ನದಂತಹ ಘನಾಹಾರದ ಸೇವನೆಯೂ ಬೇಡ.
4) ಬೆಳ್ಳುಳ್ಳಿ, ಈರುಳ್ಳಿ ಅತವಾ ಪ್ರಚೋದನೆ ನೀಡುವಂತಹ ಆಹಾರಗಳನ್ನು ಇಂದು ಒಂದು ದಿನದ ಮಟ್ಟಿಗಾದರೂ ದೂರವಿಡೋಣ.
5) ಗರ್ಭಿಣಿ, ಬಾಣಂತಿ ಮತ್ತು ಚಿಕ್ಕ ಮಕ್ಕಳು, ವೃದ್ಧರನ್ನು ಹೊರತುಪಡಿಸಿ ಇತರರು ನಿರಾಹಾರಿಗಳಾಗಿಯೇ ದಿನ ಕಳೆಯಲು ಪ್ರಯತ್ನಿಸೋಣ.
ಒಂದೇ ಒಂದು ದಿನವಾದರೂ ಇತರ ದಿನಗಳಿಗಿಂತ ವಿಭಿನ್ನವಾಗಿರಲಿ. ಇದು ನಮ್ಮ ಆರೋಗ್ಯದ ಮೇಲೆ ಖಂಡಿತ ಸತ್ಪರಿಣಾಮಗಳನ್ನು ಬೀರುತ್ತದೆ. ಶಿವರಾತ್ರಿಯಂದು ಮಾಡುವ ಉಪವಾಸ ಆರೋಗ್ಯವನ್ನು ವರ್ಷಪೂರ್ತಿ ಕಾಪಾಡಲು ನಾವು ಕೈಗೊಳ್ಳಲುವ ಒಂದು ಹೆಜ್ಜೆ. ಇಂತಹುದೇ ನೂರಾರು ಹೆಜ್ಜೆಗಳನ್ನು ಮುಂದಿಡಲು ಶಿವರಾತ್ರಿ ಉಪವಾಸ ನಮಗೆ ಸ್ಫೂರ್ತಿ ನೀಡಬೇಕಿದೆ.
ಉಪವಾಸದ ವಿಧಾನ
ಹೆಚ್ಚಿನ ಜನರು ಕಟ್ಟುನಿಟ್ಟಾಗಿ ಇಡೀ ದಿನ ಉಪವಾಸ ಮಾಡುತ್ತಾರೆ. ಆದರೆ 24 ಗಂಟೆಗಳ ಕಾಲ ಉಪವಾಸವಿರಲು ಸಾಧ್ಯವಾಗದಿದ್ದರೆ, ನೀರು ಮತ್ತು ಹಣ್ಣುಗಳನ್ನು ಸ್ವೀಕರಿಸಿ ದಿನವಿಡೀ ಶಿವನ ಆರಾಧನೆ ಹಾಗೂ ಧ್ಯಾನವನ್ನು ಮಾಡಬಹುದು. ಶಿವರಾತ್ರಿಯಂದು ಭಕ್ತರು ನಿರಾಹಾರ ವ್ರತ ಕೈಗೊಳ್ಳುತ್ತಾರೆ. ಕೆಲವರು ಅಕ್ಕಿ, ಗೋಧಿ ಅಥವಾ ಯಾವುದೇ ಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸುವುದಿಲ್ಲ ಎಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ನಿರಾಹಾರ ವ್ರತ ಆಚರಿಸುತ್ತಿಲ್ಲ ಎಂದಾದರೆ ಹಾಲು, ಹಣ್ಣು ಮಾತ್ರ ಸೇವಿಸಿ ಶಿವನ ಧ್ಯಾನ ಮಾಡುವುದು ಪದ್ಧತಿ. ಮುಖ್ಯವಾಗಿ ಮನಸ್ಸು ಏಕಾಗ್ರತೆ ಹೊಂದಬೇಕಾದರೆ ಖಾಲಿ ಹೊಟ್ಟೆಯಿಂದಿರಬೇಕು ಎಂಬುವುದು ಇದರ ಸಿದ್ಧಾಂತವಾಗಿದೆ.
ಶಿವನ ನಾಮ ಜಪ ಮಾಡಿ ಉಪವಾಸ ಮತ್ತು ಜಾಗರಣೆ ಮಾಡಿದ ನಂತರ ಮರುದಿನ ಅನ್ನ ಮತ್ತು ಮೇಲೋಗರಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ದೇವರ ನೈವೇದ್ಯಕ್ಕೆ ಇಡುತ್ತಾರೆ. ಈ ಅರ್ಪಣೆಯ ನಂತರವೇ ಕುಟುಂಬದ ಸದಸ್ಯರು ಆಹಾರವನ್ನು ಸ್ವೀಕರಿಸುವರು. ಈ ರೀತಿಯ ಪೂಜಾ ವಿಧಿ ಹಾಗೂ ಆಚರಣೆಯನ್ನು ಭಾರತೀಯರು ಸಾಮಾನ್ಯವಾಗಿ ಆಚರಿಸುತ್ತಾರೆ.
ಉಪವಾಸದ ಹಿಂದಿರುವ ವೈಜ್ಞಾನಿಕ ಕಾರಣ
ಧ್ಯಾನ ಹಾಗೂ ಬಾಹ್ಯ ಪೂಜೆಗಳಿಗೆ ಪೂರಕವಾಗಿ ನಿರಾಹಾರದಿಂದ ಇರುವುದೇ ಉಪವಾಸ. ಇದಕ್ಕೆ ಪೌರಾಣಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳೂ ಇವೆ. ಲೋಕ ಕಲ್ಯಾಣಕ್ಕಾಗಿ ಶಿವನು ನಂಜನ್ನು (ವಿಷ) ಉಂಡು ನಂಜುಂಡನಾದ ಪೌರಾಣಿಕ ಘಟನೆಗೂ ಶಿವರಾತ್ರಿಯಂದು ಆಚರಿಸುವ ಜಾಗರಣೆ ಹಾಗೂ ಉಪವಾಸಕ್ಕೂ ಪರಸ್ಪರ ಸಂಬಂಧವಿದೆ. ಯಾವುದೇ ಕಾರಣದಿಂದ ವಿಷವು ಮನುಷ್ಯನ ದೇಹದೊಳಗೆ ಪ್ರವೇಶಿಸಿದರೆ ಅದು ಶರೀರದ ಎಲ್ಲೆಡೆ ವ್ಯಾಪಿಸದಂತೆ ತಡೆಯುವುದಕ್ಕಾಗಿ ನಿದ್ರಿಸಲು ಬಿಡಬಾರದು ಎಂದು ವೈದ್ಯರು ಹೇಳುತ್ತಾರೆ. ಅಲ್ಲದೆ ವಿಷದ ತೀವ್ರತೆ ಕುಗ್ಗಿಸಲು ಎಳನೀರು, ಪಾನಕ ಹಾಗೂ ಹಣ್ಣುಗಳನ್ನಷ್ಟೇ ಸೇವಿಸಬೇಕು ಎಂದು ವೈದ್ಯ ವಿಜ್ಞಾನ ಹೇಳುತ್ತದೆ.
Pashupatinath Temple: ನೇಪಾಳದ ಪಶುಪತಿನಾಥ ದೇವಾಲಯ ಮಹಾಶಿವರಾತ್ರಿ ವಿಶೇಷ ಚಿತ್ರಗಳು