
ಚಿಕ್ಕಮಗಳೂರು: ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ವಿರೋಧಿಸಿ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗ್ತಿದೆ. ಸದ್ಯ ಮಲೆನಾಡಿನ ಜನರ ನಿದ್ದೆಗೆಡಿಸಿರುವ ಈ ಯೋಜನೆ ವಿರುದ್ಧ ರೈತರು ತಿರುಗಿಬಿದ್ದಿದ್ದು, ಯಾವುದೇ ಕಾರಣಕ್ಕೂ ಇಂತಹ ಯೋಜನೆಗಳು ಜಾರಿಯಾಗಬಾರದು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ಯೋಜನೆ ಕೈಬಿಡಿ, ನಮ್ಮನ್ನು ಬದುಕಲು ಬಿಡಿ.. ರಕ್ತವನ್ನು ಕೊಡುವೆವು, ನೆಲವನ್ನ ಬಿಡೆವು.. ಕಸ್ತೂರಿ ರಂಗನ್ ವರದಿ, ಮಲೆನಾಡಿಗರ ಸಮಾಧಿ ಅಂತಾ ಘೋಷಣೆ ಕೂಗಿ ಸಾವಿರಾರು ಮಂದಿ ರೈತರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಸರ್ಕಾರದ ವಿರುದ್ಧ ಮಲೆನಾಡಿಗರ ರೋಷ:
ಈಗಾಗಲೇ ಅರಣ್ಯ ಇಲಾಖೆ ಒಂದು ಸುತ್ತಿನ ಸರ್ವೇ ನಡೆಸಿ ಮಲೆನಾಡು ತಾಲೂಕುಗಳಾದ ಚಿಕ್ಕಮಗಳೂರು, ಎನ್.ಆರ್ ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕಿನ ಅನೇಕ ಹಳ್ಳಿಗಳನ್ನ ಹುಲಿ ಯೋಜನೆ ಅಡಿಯಲ್ಲಿ ಗುರುತು ಮಾಡಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದ್ರೆ ಲಕ್ಷಾಂತರ ಮಂದಿ ಮಲೆನಾಡಿಗರ ಭವಿಷ್ಯಕ್ಕೆ ಕುತ್ತು ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇದರ ಸೂಕ್ಷ್ಮವನ್ನ ಅರಿತಿರುವ ಜನರು ಇದೀಗ ಸರ್ಕಾರಗಳ ವಿರುದ್ಧ ಬೀದಿಗೆ ಬಂದಿದ್ದು ಯಾವುದೇ ಕಾರಣಕ್ಕೂ ಮಾನವವಿರೋಧಿ ಯೋಜನೆಗಳು ಜಾರಿಯಾಗಬಾರದು ಅಂತಾ ಪಟ್ಟು ಹಿಡಿದಿದ್ದಾರೆ. ಸದ್ಯ ನಾವು ತಲೆತಲಾಂತರಗಳಿಂದ ಕೃಷಿ ಮಾಡಿ, ಸಾಗುವಳಿ ಮಾಡ್ಕೊಂಡು ಬೆವರು ಸುರಿಸಿ ಜೀವನವನ್ನ ಕಟ್ಟಿಕೊಂಡಿದ್ದೇವೆ.
ಕಷ್ಟಪಟ್ಟು ಬದುಕು ಕಟ್ಟಿಕೊಂಡಿರೋ ನಮಗೆ ಬೇಡದ ಯೋಜನೆಗಳನ್ನ ತಂದು ನೆಮ್ಮದಿ ಹಾಳುಮಾಡಬೇಡಿ ಅಂತಾ ಪ್ರತಿಭಟನೆಯಲ್ಲಿ ಭಾಗಿಯಾಗಿರೋ ರೈತರು ಎಚ್ಚರಿಕೆ ನೀಡಿದ್ರು. ಈ ಬೃಹತ್ ಪ್ರತಿಭಟನೆ ಱಲಿಯಲ್ಲಿ ಶಾಸಕರುಗಳಾದ ಟಿ.ಡಿ ರಾಜೇಗೌಡ, ಎಂ.ಕೆ ಪ್ರಾಣೇಶ್, ಮಾಜಿ ಸಚಿವ ಡಿ.ಎನ್ ಜೀವರಾಜ್, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ರು. ಸಾವಿರಾರು ಮಂದಿ ರೈತರು, ಈ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಮಲೆನಾಡನ್ನ ಅತಿ ಸೂಕ್ಷ್ಮವಲಯವನ್ನ ಮಾಡಲು ಹೊರಟಿರುವವರ ವಿರುದ್ಧ ಆಕ್ರೋಶ ಹೊರಹಾಕಿದ್ರು. ಖಾಂಡ್ಯ ನಾಗರೀಕ ರಕ್ಷಣಾ ವೇದಿಕೆ ಈ ಬೃಹತ್ ಪ್ರತಿಭಟನಗೆ ಕರೆ ನೀಡಿತ್ತು.
ಇದನ್ನೂ ಓದಿ: ತಾಳ್ಮೆ ಪರೀಕ್ಷಿಸದೇ ಮೊದಲು ಆಸ್ಪತ್ರೆ ನಿರ್ಮಿಸಿಕೊಡಿ: ಇದು ಬ್ಯಾನರ್ ಚಳವಳಿ! ಎಲ್ಲಿ?