ಮಂಡಗದ್ದೆ ಪಕ್ಷಿಧಾಮ: ಬೆಳ್ಳಕ್ಕಿಗಳ ವಯ್ಯಾರಕ್ಕೆ ಪ್ರವಾಸಿಗರು ಫುಲ್ ದಿಲ್ ಖುಷ್

ಮಂಡಗದ್ದೆ ಪಕ್ಷಿಧಾಮ: ಬೆಳ್ಳಕ್ಕಿಗಳ ವಯ್ಯಾರಕ್ಕೆ ಪ್ರವಾಸಿಗರು ಫುಲ್ ದಿಲ್ ಖುಷ್

ಶಿವಮೊಗ್ಗ: ಸುಂದರ ಪರಿಸರದ ನಡುವೆ ತುಂಬಿ ಹರಿಯುತ್ತಿರುವ ತುಂಗೆ. ಹಚ್ಚ ಹಸಿರಿನ ಕಾನನದಲ್ಲಿ ಬಿಳಿ ಚುಕ್ಕಿ ಇಟ್ಟಂತೆ ಭಾಸವಾಗ್ತಿರೋ ಬೆಳ್ಳಕ್ಕಿಗಳ ನೋಟ. ಮರಗಳಲ್ಲಿ ಸಾಲು ಸಾಲಾಗಿ ಕುಳಿತ ಬೆಳ್ಳಕ್ಕಿ ಹಿಂಡನ್ನ ನೋಡ್ತಾ ಇದ್ರೆ ಮನಸ್ಸಿಗೆ ಅದೇನೋ ಖುಷಿ, ಉಲ್ಲಾಸ.

ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಗೆ ಹೊರಟರೆ ಪ್ರವಾಸಿಗರಿಗೆ ಹಬ್ಬವೋ ಹಬ್ಬ. ಮೊದಲು ತುಂಗಾ ಡ್ಯಾಂ. ಬಳಿಕ ಸಕ್ರೆ ಬೈಲು ಆನೆ ಬಿಡಾರ. ಇದನ್ನು ನೋಡಿ ಮುಂದೆ ಸಾಗಿದ್ರೆ ಈ ಮಂಡಗದ್ದೆ ಪಕ್ಷಿಧಾಮ ಸಿಗುತ್ತೆ. ಈ ಧಾಮಕ್ಕೆ ಮಳೆಗಾಲದಲ್ಲಿ ದೇಶ ವಿದೇಶದಿಂದ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಅದರಲ್ಲೂ ಹೆಚ್ಚಾಗಿ ಇಲ್ಲಿ ಬೆಳ್ಳಕ್ಕಿಗಳು ಕಾಣ ಸಿಗುತ್ತೆ. ಅದರಲ್ಲೂ ತುಂಗಾ ನದಿ ದಡದಲ್ಲಿ ಕಾಣವ ಈ ಪಕ್ಷಿಗಳ ಹಿಂಡು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತೆ.

ಪ್ರತಿ ವರ್ಷವೂ ಮಂಡಗದ್ದೆ ಪಕ್ಷಿಧಾಮಕ್ಕೆ ವಿದೇಶಿ ಪಕ್ಷಿಗಳು ಆಗಮಿಸುತ್ತವೆ. ಇಲ್ಲಿ ಮೂರು ನಾಲ್ಕು ತಿಂಗಳು ವಾಸವಿದ್ದು, ಗೂಡು ಕಟ್ಟಿಕೊಂಡು, ಮೊಟ್ಟೆಯಿಟ್ಟು ಮರಿ ಮಾಡಿಕೊಂಡ ಬಳಿಕ ವಾಪಸ್‌ ತಾಯ್ನಾಡಿಗೆ ತೆರಳುತ್ತವೆ. ಮಳೆಗಾಲದ ಸಮಯ ಮೂರು ನಾಲ್ಕು ತಿಂಗಳು ಈ ವಿದೇಶಿ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಅದರಲ್ಲೂ ಇಲ್ಲಿ ಹೆಚ್ಚಾಗಿ ಕಾಣುವ ಕೊಕ್ಕರೆಗಳು ಹಸಿರ ಪರಿಸರಕ್ಕೆ ಬೆಳ್ಳಿಯ ಚುಕ್ಕೆಗಳನ್ನ ಇಟ್ಟಂತೆ ಭಾಸವಾಗುತ್ತೆ. ಇನ್ನು ಇಲ್ಲಿಗೆ ಬರೋ ಪ್ರವಾಸಿಗರು ಹಕ್ಕಿಗಳ ಆಟವನ್ನ ನೋಡುತ್ತಾ, ಅವುಗಳನ್ನ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾರೆ.

ಒಟ್ಟಾರೆ ಮಲೆನಾಡಿನ ಮರಗಳ ಮೇಲೆ ಒಟ್ಟೊಟ್ಟಿಗೆ ಆಡುತ್ತಾ, ಒಣಗಿದ ಮರಗಳ ಕೊಂಬೆಗಳ ಮೇಲೆ ಕುಳಿತು ಪಕ್ಷಿಗಳು ರಿಲ್ಯಾಕ್ಸ್ ಮಾಡೋ ಪರಿ ನಿಜಕ್ಕೂ ಕಣ್ಣಿಗೆ ಹಬ್ಬ. ಬೆಳ್ಳಕ್ಕಿಗಳ  ವಯ್ಯಾರ ಇಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದ್ದು, ಇದನ್ನ ನೋಡಿದ್ರೆ ಪ್ರಕೃತಿ ಮಾತೆಗೆ ನಿಜಕ್ಕೂ ನಾವು ಕೈ ಮುಗಿಯಲೇ ಬೇಕು.

Click on your DTH Provider to Add TV9 Kannada