ರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ಕ್ಷಯ ರೋಗ ತಗುಲಿದ ಬಾಲಕಿಗೆ ದೊಡ್ಡಪ್ಪನೇ ಶತ್ರುವಾದ, ಅರಿವು ಮೂಡಿಸಲು ಮುಂದಾದ NGO..!
ಬಾಲಕಿಯ ಮನೆ ಕಸಿದುಕೊಂಡ ದೊಡ್ಡಪ್ಪ ಈಕೆ ಹಾಗೂ ತಾಯಿಯನ್ನು ಹೊರಗೆ ಹಾಕಿದ್ದಾನೆ. ಈ ಬಾಲಕಿ ಬಳಿ ಚಿಕ್ಕ ಮಕ್ಕಳು ಹೋಗದಂತೆ ಮಾಡಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾನೆ..
ಬಾಗಲಕೋಟೆ: ಕ್ಷಯರೋಗ ಎಂಬುದು ಮಾರಣಾಂತಿಕ ಕಾಯಿಲೆ ಅಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಸರಳವಾಗಿ ವಾಸಿಯಾಗುತ್ತದೆ. ಆದರೆ ಜಿಲ್ಲೆಯಲ್ಲಿ ಈ ಕಾಯಿಲೆಗೆ ಒಳಗಾದ ಕೆಲವು ಬಾಲಕಿಯರು ನರಕಯಾತನೆ ಪಡುತ್ತಿದ್ದಾರೆ. ಕಾಯಿಲೆಯ ನೋವಿಗಿಂತಲೂ, ಸಮಾಜದವರು ತಮ್ಮನ್ನು ನಡೆಸಿಕೊಳ್ಳುವ ರೀತಿಯನ್ನು ಸಹಿಸಲಾಗದೆ ಕಂಗೆಟ್ಟಿದ್ದಾರೆ.
ಬಾಗಲಕೋಟೆಯ ಕೆಲವು ಗ್ರಾಮಗಳಲ್ಲಿ ಹಲವು ಬಾಲಕಿಯರಿಗೆ ತಂದೆ-ತಾಯಿಯಿಂದಲೋ, ಇತರೆ ಯಾವುದೋ ಕಾರಣದಿಂದಲೋ ಕ್ಷಯರೋಗ ಅಂಟಿಕೊಂಡಿದೆ. ಚಿಕ್ಕ ವಯಸ್ಸಿನಲ್ಲಿಯೇ ಕ್ಷಯ ಇವರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಚಿಕಿತ್ಸೆ ಪಡೆದು ಬಹುತೇಕರು ಶೇ.90ರಷ್ಟು ಗುಣಮುಖರಾಗಿದ್ದಾರೆ. ಆದರೆ ಕ್ಷಯ ರೋಗದಿಂದ ತಾವು ಪಟ್ಟ ಕಷ್ಟ, ಅಕ್ಕಪ್ಪಕ್ಕದವರಿಂದ ಅನುಭವಿಸಿದ ನೋವು, ಮುಜುಗರವನ್ನು, ರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾದ ಇಂದು ಎನ್ಜಿಒ ಒಂದರ ಎದುರು ಅಳುತ್ತಲೇ ಹೊರಹಾಕಿದ್ದಾರೆ.
ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ..
ಹಾಗೆ ನೋವು ಹೇಳಿಕೊಂಡ ಬಾದಾಮಿ ತಾಲೂಕಿನ ಹಳ್ಳಿಯೊಂದರ ಬಾಲಕಿಯ ಕತೆ ನಿಜಕ್ಕೂ ಮನಕಲಕುವಂತಿದೆ. ಈಕೆ ತನ್ನ ದೊಡ್ಡಪ್ಪನಿಂದಲೇ ಮಾನಸಿಕ ಹಿಂಸೆಗೆ ಒಳಗಾದವಳು. ಬಾಲಕಿಯ ಮನೆ ಕಸಿದುಕೊಂಡ ದೊಡ್ಡಪ್ಪ, ಈಕೆ ಹಾಗೂ ತಾಯಿಯನ್ನು ಹೊರಗೆ ಹಾಕಿದ್ದಾನೆ. ಈ ಬಾಲಕಿ ಬಳಿ ಚಿಕ್ಕ ಮಕ್ಕಳು ಹೋಗದಂತೆ ಮಾಡಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ನೆರೆಹೊರೆಯವರು ಇವರ ಹತ್ತಿರ ಸುಳಿಯದಂತೆ ನೋಡಿಕೊಂಡು ಸಾಕಷ್ಟು ಅಪಮಾನ ಮಾಡಿದ್ದಾರೆ ಎಂದು ಬಾಲಕಿ ಕಣ್ಣೀರು ಹಾಕಿದ್ದಾಳೆ.
ಜಾಗೃತಿಗೆ ಮುಂದಾದ ಎನ್ಜಿಒ
ಬಾಗಲಕೋಟೆಯ ವಿವಿಧ ಗ್ರಾಮಗಳಲ್ಲಿ ಹಲವು ಬಡ ಬಾಲಕಿಯರು ಕ್ಷಯ ರೋಗಕ್ಕೆ ತುತ್ತಾಗಿದ್ದಾರೆ. ಅದರಲ್ಲೂ 10-17ವರ್ಷಗಳವರೆಗಿನ ಬಾಲಕಿಯರಲ್ಲೇ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತವರಿಗೆ ಸಾಂತ್ವನ ಹೇಳಿ, ಅವರಲ್ಲಿ ಅರಿವು ಮೂಡಿಸಲು ಕರ್ನಾಟಕ ಹೆಲ್ತ್ ಪ್ರೊಮೊಷನ್ ಟ್ರಸ್ಟ್ NGO ಮುಂದಾಗಿದೆ. ಇಂದು ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾಗಿದ್ದು, ಕ್ಷಯದಿಂದ ಬಳಲುತ್ತ, ನೆರೆಹೊರೆಯವರಿಂದ ಅವಮಾನಕ್ಕೆ ಒಳಗಾಗಿರುವ ಬಾಲಕಿಯರಿಗೆ ಎನ್ಜಿಒ ಸಿಬ್ಬಂದಿ ಸಾಂತ್ವನ ಹೇಳಿದ್ದಾರೆ. ಹಾಗೇ, ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಿದ್ದಾರೆ. ಕ್ಷಯ ಬಂದಿದೆ ಎಂಬ ಮಾತ್ರಕ್ಕೆ ಕೆಲವೆಡೆ ಬಹಿಷ್ಕಾರದಂತ ಶಿಕ್ಷೆಯನ್ನೂ ನೀಡಲಾಗುತ್ತಿದೆ. ಇದು ಸರಿಯಲ್ಲ. ಕ್ಷಯ ರೋಗಿಗಳಿಗೆ ಧೈರ್ಯ ಹೇಳುವ ಕಾರ್ಯ ಆಗಬೇಕು ಎಂದು ಎನ್ಜಿಒ ಹೇಳಿದೆ.
Photos ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಿದ ಕೋನಸಾಗರದ ಯುವಪಡೆ.. ನೀವೂ ಕಣ್ತುಂಬಿಕೊಳ್ಳಿ!