ಮಹಾಮಾರಿ ಕೊರೊನಾದಿಂದ ಶ್ರಾವಣದ ಸಂಭ್ರಮಕ್ಕೆ ಕರಿನೆರಳು
ಕಲಬುರಗಿ: ಹಿಂದೂಗಳಿಗೆ ಪವಿತ್ರ ಮತ್ತು ಪ್ರಮುಖವಾದ ಮಾಸವೆಂದ್ರೆ ಅದು ಶ್ರಾವಣ ಮಾಸ. ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ, ಬಂತು ಶ್ರಾವಣ ಅಂತ ವರಕವಿ ಬೇಂದ್ರೆ ಶ್ರಾವಣದ ಚೆಲುವನ್ನು ಬಣ್ಣಿಸಿದ್ದಾರೆ. ಶ್ರಾವಣ ಮಾಸ ಬಂದಾಗ ಆನಂದ ತಂದಾಗ ಅಂತ ಚಿತ್ರಗೀತೆ ಕೂಡಾ ಇದೆ. ಅಷ್ಟರಮಟ್ಟಿಗೆ ಶ್ರಾವಣ ಪ್ರಮುಖ ಮಾಸವಾಗಿದೆ. ಆದ್ರೆ ಪ್ರತಿವರ್ಷದ ಶ್ರಾವಣದ ಸಂಭ್ರಮ ಮಾತ್ರ ಮಾಯವಾಗಿದೆ. ಅದಕ್ಕೆ ಕಾರಣ ಕೊರೊನಾ ಅನ್ನೋ ಹೆಮ್ಮಾರಿ. ಹೌದು ಇದೀಗ ಎಲ್ಲೆಡೆ ಕೊರೊನಾ ವ್ಯಾಪಿಸಿಕೊಂಡಿದೆ. ಕಿಲ್ಲರ್ ಕೊರೊನಾ […]
ಕಲಬುರಗಿ: ಹಿಂದೂಗಳಿಗೆ ಪವಿತ್ರ ಮತ್ತು ಪ್ರಮುಖವಾದ ಮಾಸವೆಂದ್ರೆ ಅದು ಶ್ರಾವಣ ಮಾಸ. ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ, ಬಂತು ಶ್ರಾವಣ ಅಂತ ವರಕವಿ ಬೇಂದ್ರೆ ಶ್ರಾವಣದ ಚೆಲುವನ್ನು ಬಣ್ಣಿಸಿದ್ದಾರೆ. ಶ್ರಾವಣ ಮಾಸ ಬಂದಾಗ ಆನಂದ ತಂದಾಗ ಅಂತ ಚಿತ್ರಗೀತೆ ಕೂಡಾ ಇದೆ. ಅಷ್ಟರಮಟ್ಟಿಗೆ ಶ್ರಾವಣ ಪ್ರಮುಖ ಮಾಸವಾಗಿದೆ. ಆದ್ರೆ ಪ್ರತಿವರ್ಷದ ಶ್ರಾವಣದ ಸಂಭ್ರಮ ಮಾತ್ರ ಮಾಯವಾಗಿದೆ. ಅದಕ್ಕೆ ಕಾರಣ ಕೊರೊನಾ ಅನ್ನೋ ಹೆಮ್ಮಾರಿ.
ಹೌದು ಇದೀಗ ಎಲ್ಲೆಡೆ ಕೊರೊನಾ ವ್ಯಾಪಿಸಿಕೊಂಡಿದೆ. ಕಿಲ್ಲರ್ ಕೊರೊನಾ ಜನರನ್ನು ಬಿಟ್ಟೂ ಬಿಡದೇ ಕಾಡ್ತಿದೆ. ಇಂತಹ ಸಂದರ್ಭದಲ್ಲಿಯೇ ಕೊರೊನಾ ಬಂದಿದ್ದು ಶ್ರಾವಣದ ಚೆಲುವಿಗೆ ಮಬ್ಬು ಬಡಿದಿದೆ. ಆಷಾಢ ಮಾಸದ ಬಳಿಕ ಶ್ರಾವಣ ಮಾಸ ಆರಂಭವಾಗುವುದು. ಆಷಾಢದಲ್ಲಿ ಬಿಟ್ಟು ಬಿಡದೇ ಕಾಡಿರೋ ಕೊರೊನಾ ಶ್ರಾವಣದಲ್ಲಿ ಕೂಡಾ ತನ್ನ ಪ್ರತಾಪವನ್ನು ಮುಂದುವರಿಸಿದೆ. ಹೀಗಾಗಿ ಶಿವನ ಆರಾಧಕರಿಗೆ ಈ ಬಾರಿ ಕೊರೊನಾ ಶಾಕ್ ನೀಡಿದೆ.
ಶಿವ ಪ್ರಿಯ ಶ್ರಾವಣಕ್ಕೆ ಕೊರೊನಾ ಕಾಟ: ಶಿವ ಪುರಾಣದ ಪ್ರಕಾರ ಶಿವನಿಗೆ ಶ್ರಾವಣ ಮಾಸ ತುಂಬಾ ಪ್ರಿಯವಾದ ಮಾಸ. ಹೀಗಾಗಿ ಶ್ರಾವಣದ ಸಂದರ್ಭದಲ್ಲಿ ಶಿವನ ಆರಾಧನೆ ನಡೆಯುತ್ತದೆ. ಶ್ರಾವಣದಲ್ಲಿ ಶಿವನ ಆರಾಧನೆ ಮಾಡಿದ್ರೆ ಸಂಕಷ್ಟಗಳು ದೂರಾಗುತ್ತವೆ ಅನ್ನೋ ನಂಬಿಕೆ ಇದೆ. ಶ್ರಾವಣದ ಸಮಯದಲ್ಲಿ ಶಿವ ದೇವಾಲಯಗಳು ಭಕ್ತರಿಂದ ತುಂಬಿರುತ್ತಿದ್ದವು. ಅನೇಕರು ಶ್ರಾವಣದಲ್ಲಿ ಉಪವಾಸ ಮಾಡ್ತಾರೆ.
ಒಂದು ತಿಂಗಳ ಕಾಲ ವ್ರತವನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಶ್ರಾವಣದ ತಿಂಗಳಲ್ಲಿ ಅನೇಕರು ಹೇರ್ ಕಟ್ ಮಾಡಿಸಿಕೊಳ್ಳೋದಿಲ್ಲಾ. ಚಪ್ಪಲಿ ಹಾಕೋದಿಲ್ಲಾ. ಪ್ರತಿದಿನ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ದರ್ಶನ ಮಾಡ್ತಾರೆ. ಆದ್ರೆ ಇದೀಗ ಶ್ರಾವಣದ ಆಚರಣೆಗೆ ಅಡ್ಡಿ ಇಲ್ಲದಿದ್ದರೂ ಕೂಡಾ ದೇವಸ್ಥಾನಗಳಿಗೆ ಹೋಗುವ ಅವಕಾಶ ಇಲ್ಲದಂತಾಗಿದೆ.
ಇನ್ನು ಶ್ರಾವಣದ ಸಂದರ್ಭದಲ್ಲಿ ಕಲಬುರಗಿ ನಗರದ ಸುಪ್ರಸಿದ್ಧ ಶರಣ ಬಸವೇಶ್ವರ ದೇವಸ್ಥಾನ ಭಕ್ತರಿಂದ ತುಂಬಿರುತ್ತಿತ್ತು. ಅದರಲ್ಲೂ ಪ್ರತಿ ಸೋಮವಾರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರ್ತಿದ್ದರು. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ಜುಲೈ 27 ರವರಗೆ ಲಾಕ್ಡೌನ್ ಇರೋ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಭಕ್ತರು ಶ್ರಾವಣದ ಪವಿತ್ರ ಸೋಮವಾರದ ದಿನ ಶರಣಬಸವೇಶ್ವರರ ದರ್ಶನ ಸಿಗದಂತಾಗಿದೆ.
ಆದ್ರು ಕೂಡಾ ಇಂದು ಅನೇಕರು ದೇವಸ್ಥಾನದ ಗೇಟ್ ವರಗೆ ಬಂದು ಗೇಟ್ ಮುಂಭಾಗದಲ್ಲಿಯೇ ನಿಂತು ನಮಸ್ಕಾರ ಮಾಡಿ, ವಾಪಸಾಗುತ್ತಿದ್ದಾರೆ. ಕೊರೊನಾ ಯಾವಾಗ ಮುಗಿಯುತ್ತೋ ಗೊತ್ತಿಲ್ಲಾ. ಆದ್ರೆ ಕೊರೊನಾದಿಂದ ಶ್ರಾವಣದ ಸಂಭ್ರಮಕ್ಕೆ ಮಾತ್ರ ಕರಿನೆರಳು ಬಿದ್ದಿದೆ.
Published On - 3:12 pm, Mon, 20 July 20