ಭಾರತಕ್ಕೆ ಜಿ20 ಅಧ್ಯಕ್ಷತೆ: 100 ಸ್ಮಾರಕಗಳಿಗೆ ಒಂದು ವಾರ ದೀಪಾಲಂಕಾರ, ಗೋಲಗುಂಬಜ್ , ಟಿಪ್ಪು ಸುಲ್ತಾನ್ ಪ್ಯಾಲೇಸ್ ಆಯ್ಕೆಗೆ ವಿರೋಧ
ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ. ಇದರಲ್ಲಿ ಕರ್ನಾಟದ ವಿಜಯಪುರದ ಗೋಲಗುಂಬಜ್ ಹಾಗೂ ಬೆಂಗಳೂರಿನ ಟಿಪ್ಪು ಸುಲ್ತಾನ್ ಪ್ಯಾಲೇಸ್ ಆಯ್ಕೆ ಮಾಡಿಕೊಂಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು: ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ(India to assume G20 presidency) ಸ್ಥಾನವನ್ನು ಡಿಸೆಂಬರ್ 1ರಿಂದ ಭಾರತ ಅಧಿಕೃತವಾಗಿ ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು (100 monuments) ಡಿ. 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ. ಇದರಲ್ಲಿ ಕರ್ನಾಟಕದಿಂದ ಟಿಪ್ಪು ಸುಲ್ತಾನನ ಪ್ಯಾಲೇಸ್ ಹಾಗೂ ವಿಜಯಪುರದ ಗೋಲಗುಂಬಜ್ ಆಯ್ಕೆ ಮಾಡಲಾಗಿದ್ದು, ಇದೀಗ ಇದಕ್ಕೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ ಗೌಡ, ಭಾರತವು G20 ಆದ್ಯಕ್ಷ ಸ್ಥಾನವನ್ನು ಅಲಂಕರಿಸುವ ನಿಮಿತ್ತ ಭಾರತದ 40 ಪ್ರಾಚೀನ ಸ್ಥಳಗಳನ್ನು ಡಿಸೆಂಬರ್ 1 ರಿಂದ 7 ರ ವರಗೆ ಅಲಂಕರಿಸುವ ಆಯೋಜನೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದಿಂದ ಮತಾಂದ ಕ್ರೂರಿ ಟಿಪ್ಪು ಸುಲ್ತಾನನ ಪ್ಯಾಲೇಸ್ , ಬಿಜಾಪುರದ ಗೊಲಗೊಂಬಜ್ ಮಾತ್ರ ಆಯ್ಕೆ ಮಾಡಿರುವುದು ಖಂಡನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತದ G20 ಅಧ್ಯಕ್ಷತೆ ಸಾರ್ವತ್ರಿಕ ಏಕತೆಯ ಭಾವನೆ ಉತ್ತೇಜಿಸಲು ಕೆಲಸ ಮಾಡುತ್ತದೆ: ಮೋದಿ
ಟಿಪ್ಪು ಸುಲ್ತಾನ ಪ್ಯಾಲೇಸ್ ಗಿಂತ ಮೈಸೂರು ಮಹಾರಾಜರ ಪ್ಯಾಲೇಸ್ ಅತ್ಯಂತ ಮಹತ್ವದಿದೆ. ವರ್ಷಕ್ಕೆ 40 ಲಕ್ಷ ಪ್ರವಾಸಿಗರು ಇಲ್ಲಿ ಬೇಟಿ ನೀಡುತ್ತಾರೆ & ಕೊಟ್ಯಾಂತರ ರೂಪಾಯಿ ಆದಾಯ ತರುತ್ತಿದೆ. ಅದನ್ನು ನಿರ್ಲಕ್ಷ್ಯ ಮಾಡಿ, ವರ್ಷಕ್ಕೆ 40,000 ಜನರು ಸಹ ಭೇಟಿ ನೀಡದ ಮತಾಂದ, ಕ್ರೂರಿಯಾದ ಟಿಪ್ಪು ಸುಲ್ತಾನ್ ಪ್ಯಾಲೇಸ್ ಆಯ್ಕೆ ಮಾಡಿರುವುದು ಖಂಡನೀಯವಾಗಿದೆ.
ಅದಕ್ಕಿಂತ ಮುಖ್ಯವಾಗಿ ಹಂಪಿಯನ್ನು ಯುನಸ್ಕೋ ವಿಶ್ವ ಪಾರಂಪರಿಕ ಸ್ಥಾನ ಎಂದು ಗುರುತಿಸಿದರೂ ಸಹ, ಅದನ್ನು ಆಯ್ಕೆ ಮಾಡದೇ ನಿರ್ಲಕ್ಯ್ಯ ಮಾಡಲಾಗಿದೆ. ಅದೇ ರೀತಿ ಬೇಲೂರು, ಹಳೇಬೀಡಿನ ಹೊಯ್ಸಳರ ಸರ್ವಶ್ರೇಷ್ಠ ಶಿಲ್ಪಕಲೆ ಇರುವ ಪ್ರಾಚೀನ ದೇವಾಲಯಗಳು, ಬಾದಾಮಿ ಚಾಲುಕ್ಯರ ದೇವಾಲಯ ದುರ್ಲಕ್ಷ್ಯ ಮಾಡಲಾಗಿದೆ. ಕರ್ನಾಟಕದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ ವಿಜಯಪುರ ಸುಲ್ತಾನ, ಟಿಪ್ಪು ಸಲ್ತಾನನ ಸ್ಥಳಗಳ ಆಯ್ಕೆ ಮಾಡಿರುವುದು ಖಂಡನೀಯ. ಕೇಂದ್ರ ಸರಕಾರವು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಬೇಕು ಎಂದು ಮೋಹನ್ ಗೌಡ ಆಗ್ರಹಿಸಿದ್ದಾರೆ.
100 ಸ್ಮಾರಕಗಳಿಗೆ ಒಂದು ವಾರ ದೀಪಾಲಂಕಾರ
ಯುನೆಸ್ಕೋದಲ್ಲಿನ ಸೈಟ್‌ಗಳ ಮೇಲೆ ವಿಶೇಷ ಗಮನವನ್ನು ಹೊಂದಿರುವ ASI ಸಂರಕ್ಷಿತ ಸ್ಮಾರಕಗಳು ಮತ್ತು ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ತಾಣಗಳಲ್ಲಿ G20 ನ ಬ್ರ್ಯಾಂಡ್ ಮತ್ತು ಪ್ರಚಾರ ಯೋಜನೆ ಭಾಗವಾಗಿ ನಮ್ಮ ಸ್ಮಾರಕಗಳನ್ನು ಹೈಲೈಟ್ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳಲು ಭಾರತ ಸರ್ಕಾರವು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದೇಶದ 100 ಸ್ಮಾರಕಗಳು ಜಿ20 ಲಾಂಛನದೊಂದಿಗೆ ಬೆಳಗಲಿವೆ.
ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಔಪಚಾರಿಕವಾಗಿ ವಹಿಸಿಕೊಳ್ಳುವ ಪ್ರಯುಕ್ತ ಡಿ.1 ರಿಂದ 7 ದೇಶದ 100 ಸ್ಮಾರಕಗಳು ಜಿ20 ಲಾಂಛನದೊಂದಿಗೆ ಬೆಳಗಲಿವೆ. ಜಿ20 ಲಾಂಛನ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಸ್ಫೂರ್ತಿ ಪಡೆದಿದೆ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಭಾರತದ ರಾಷ್ಟ್ರೀಯ ಪುಷ್ಪ ಕಮಲದೊಂದಿಗೆ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ. ಜಿ20 ಲೋಗೋದ ಕೆಳಗೆ ‘ಭಾರತ್’ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಭಾರತದ ಜಿ20 ಪ್ರೆಸಿಡೆನ್ಸಿಯ ಥೀಮ್ – ವಸುಧೈವ ಕುಟುಂಬಕಂ ಅಥವಾ ಒಂದು ಭೂಮಿ ಒಂದು ಕುಟುಂಬ, ಒಂದು ಭವಿಷ್ಯ. ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಭಾರತವು ದೇಶದಾದ್ಯಂತ 32 ವಲಯಗಳಲ್ಲಿ ಸುಮಾರು 200 ಸಭೆಗಳನ್ನು ನಡೆಸಲಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:33 pm, Thu, 1 December 22