AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮೂರಿನ ರಾಮನ ಗುಡಿಗೆ ಹಣ ಕೊಟ್ಟಿದ್ದೇನೆ; ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ -ಸ್ಪೀಕರ್​ ದೇಣಿಗೆ ಪ್ರಶ್ನೆಗೆ ಸಿದ್ದು ಜಬರ್​ದಸ್ತ್​ ಕೌಂಟರ್

ಸಿದ್ದರಾಮಯ್ಯಗೆ ಪ್ರಶ್ನಿಸಿದ ಸ್ಪೀಕರ್ ಕಾಗೇರಿ ನೀವು ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೀರಾ? ಎಂದು ಕಿಚಾಯಿಸಲು ಮುಂದಾದರು. ಅದಕ್ಕೆ, ನಮ್ಮೂರಿನ ರಾಮನ ಗುಡಿಗೆ ನಾನು ಹಣವನ್ನು ಕೊಟ್ಟಿದ್ದೇನೆ. ಆದರೆ, ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿಲ್ಲ. ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ ಎಂದು ಸಿದ್ದರಾಮಯ್ಯ ಸ್ಪೀಕರ್​ ಕಾಗೇರಿಗೆ ಜಬರ್​ದಸ್ತ್​ ಆಗಿ ಕೌಂಟರ್​ ಕೊಟ್ಟರು.

ನಮ್ಮೂರಿನ ರಾಮನ ಗುಡಿಗೆ ಹಣ ಕೊಟ್ಟಿದ್ದೇನೆ; ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ -ಸ್ಪೀಕರ್​ ದೇಣಿಗೆ ಪ್ರಶ್ನೆಗೆ ಸಿದ್ದು ಜಬರ್​ದಸ್ತ್​ ಕೌಂಟರ್
ವಿಶ್ವೇಶ್ವರ ಹೆಗಡೆ ಕಾಗೇರಿ (ಎಡ); ಸಿದ್ದರಾಮಯ್ಯ (ಬಲ)
KUSHAL V
|

Updated on:Mar 09, 2021 | 7:02 PM

Share

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ನಡೆದ ಕಲಾಪದಲ್ಲಿ ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಮನ ಭಾರತದಲ್ಲಿ ಲೀಟರ್‌ ಪೆಟ್ರೋಲ್ ಬೆಲೆ 93 ರೂ.; ಸೀತೆಯ ನೇಪಾಳದಲ್ಲಿ ಲೀಟರ್​ ಪೆಟ್ರೋಲ್ ದರ 51 ರೂ.; ರಾವಣನ ಶ್ರೀಲಂಕಾದಲ್ಲಿ ಲೀಟರ್​​ ಪೆಟ್ರೋಲ್ ದರ 53ರೂ. ಎಂದು ಹೇಳಿದರು. ಈ ವೇಳೆ, ಭಾರತ್ ಮಾತಾ ಕೀ ಜೈ ಎಂದು ‘ಕೈ’ ಸದಸ್ಯರು ಜೋರಾಗಿ ಘೋಷಣೆ ಮಾಡಿದರು.

‘ರಾಮನನ್ನು ನೀವೇನಾದ್ರು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ?’ ಆಗ, ನಿಮ್ಮ ಬಾಯಲ್ಲಿ ಜೈಶ್ರೀರಾಮ್ ಎಂದು ಕೇಳುವುದು ಚೆಂದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟಾಂಗ್​ ಕೊಟ್ಟರು. ಇದಕ್ಕೆ, ರಾಮನನ್ನು ನೀವೇನಾದ್ರು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ? ನನ್ನ ಹೆಸರಿನಲ್ಲಿಯೂ ರಾಮ ಇದೆ ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

‘ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ’ ಇದೇ ವೇಳೆ ಸಿದ್ದರಾಮಯ್ಯಗೆ ಪ್ರಶ್ನಿಸಿದ ಸ್ಪೀಕರ್ ಕಾಗೇರಿ ನೀವು ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೀರಾ? ಎಂದು ಕಿಚಾಯಿಸಲು ಮುಂದಾದರು. ಅದಕ್ಕೆ, ನಮ್ಮೂರಿನ ರಾಮನ ಗುಡಿಗೆ ನಾನು ಹಣವನ್ನು ಕೊಟ್ಟಿದ್ದೇನೆ. ಆದರೆ, ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿಲ್ಲ. ಎಲ್ಲಿ ಕೊಟ್ಟರೇನು, ರಾಮನಿಗೇ ಕೊಟ್ಟೆ ಎಂದು ಸಿದ್ದರಾಮಯ್ಯ ಸ್ಪೀಕರ್​ ಕಾಗೇರಿಗೆ ಜಬರ್​ದಸ್ತ್​ ಆಗಿ ಕೌಂಟರ್​ ಕೊಟ್ಟರು. ಆದ, ಇದಕ್ಕೆ ನಕ್ಕ ಸ್ಪೀಕರ್​ ಕಾಗೇರಿ ಅದು ಸರಿ‌ ಬಿಡಿ ಎಂದು ಹೇಳಿ ಸುಮ್ಮನಾದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ಯತ್ನಾಳ್ ನೀವು ಬೈಯ್ಯುವುದಾದರೆ ರಾಜ್ಯ ಸರ್ಕಾರವನ್ನು ಬೈಯಿರಿ. ಈ ಸಭೆ ಮೋದಿ, ಕೇಂದ್ರ ಸರ್ಕಾರ ಬಯ್ಯುವುದಕ್ಕೆ ಅಲ್ಲ. ಆದರೆ ನೀವು ಮೋದಿಯನ್ನೇ ಬೈಯ್ಯುತ್ತೀರಾ ಎಂದು ಸಿದ್ದರಾಮಯ್ಯರಿಗೆ ಟಾಂಗ್​ ಕೊಟ್ರು. ಅದಕ್ಕೆ, ರಾಜ್ಯ ಸರ್ಕಾರವನ್ನು ಬೈಯ್ಯುವುದಕ್ಕೆ ನೀವೇ ಇದ್ದೀರಲ್ಲ ಯತ್ನಾಳ್ ಎಂದು ಸಿದ್ದರಾಮಯ್ಯ ಬಿಜೆಪಿ ಶಾಸಕರ ಕಾಲೆಳೆದರು.

‘ಹಾಗಾದರೆ ಜನಸಾಮಾನ್ಯರ ವಿಚಾರ ಚರ್ಚೆ ಬೇಡವಾ?’ ಪೆಟ್ರೋಲ್, ಡೀಸೆಲ್, ಗ್ಯಾಸ್, ಆಹಾರ ಉತ್ಪನ್ನಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಬಂಧ ನಿಲುವಳಿ ಪ್ರಸ್ತಾಪ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಯಮ 60ರಡಿ ಚರ್ಚೆ ಆರಂಭಿಸಿದರು. ಅಚ್ಛೇದಿನ್ ಬರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈ ದೇಶದಲ್ಲಿ ಇನ್ನೂ ಅಚ್ಛೇದಿನ್ ಬರಲೇ ಇಲ್ಲ. ರಾಜ್ಯದಲ್ಲೂ ಬೆಲೆ ಏರಿಕೆಯಿಂದ ಬಡವರು ಕಂಗೆಟ್ಟಿದ್ದಾರೆ. ಬಡವರು ಈಗ ದಿನ ದೂಡುವುದು ಕೂಡ ಕಷ್ಟವಾಗುತ್ತಿದೆ. ಸಾಮಾನ್ಯ ಜನರು ಗೋಳಾಡುತ್ತಿದ್ದಾರೆ. ಬೆಲೆ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಈ ವೇಳೆ, ಸಿದ್ದರಾಮಯ್ಯ ಮಾತಿಗೆ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಮೇಲೆ ಚರ್ಚೆ ಮಾಡಿ ಎಂದು ಬೊಮ್ಮಾಯಿ ಮನವಿ ಮಾಡಿದರು. ಜೊತೆಗೆ, ಸಮಯ ವ್ಯರ್ಥವಾಗುತ್ತೆಂದು ಸಚಿವರು ಹೇಳಿದ್ದಾರೆಂದ ಸ್ಪೀಕರ್ ಸಹ ಹೇಳಿದರು.

ಸ್ಪೀಕರ್ ಮಾತಿಗೆ ಸಿಟ್ಟಾದ ಸಿದ್ದರಾಮಯ್ಯ ನೀವು ವಿಧಾನಸಭೆಯಲ್ಲಿ ಸಮಯ ಹೋಗುತ್ತದೆಂದು ಹೇಳ್ತೀರಿ. ಹಾಗಾದರೆ ಜನಸಾಮಾನ್ಯರ ವಿಚಾರ ಚರ್ಚೆ ಬೇಡವಾ? ಬೆಲೆ ಏರಿಕೆಯ ಬಗ್ಗೆ ಇಲ್ಲಿ ಚರ್ಚೆ ಮಾಡೋದೇ ಬೇಡ್ವಾ?ನನ್ನ ಮಾತಿಗೆ ಬಸವರಾಜ ಬೊಮ್ಮಾಯಿ ಆಕ್ಷೇಪ ಸರಿಯಲ್ಲ. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಬಳಿಕ ತಮ್ಮ ಮಾತು ಮುಂದುವರಿಸಿದ ಸಿದ್ದರಾಮಯ್ಯ ಕೊವಿಡ್‌ನಿಂದ ಇದೀಗ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಕೊವಿಡ್ ಸಂಕಷ್ಟದ ನಡುವೆಯೂ ಬೆಲೆ ಏರಿಕೆ ಆಗಿದೆ. ತೆರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. 2019ರಲ್ಲಿ ಲೀ. ಡೀಸೆಲ್ ದರ 15.83 ರೂ. ಏರಿಕೆ ಮಾಡಿದ್ದಾರೆ. ಲೀಟರ್ ಪೆಟ್ರೋಲ್ ದರ 19.98 ರೂ. ಏರಿಕೆ ಮಾಡಿದ್ದಾರೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಹಾಕುತ್ತಿದ್ದಾರೆ. ಕೇಂದ್ರಕ್ಕೆ 32.92 ರೂ. ಹೆಚ್ಚುವರಿ ಅಬಕಾರಿ ಸುಂಕ ಹೋಗುತ್ತದೆ. ಪೆಟ್ರೋಲ್‌ನಲ್ಲಿ 32.92 ರೂ. ಹೆಚ್ಚುವರಿ ಅಬಕಾರಿ ಸುಂಕ. ಡೀಸೆಲ್‌ ಮೇಲೆ 31.83 ರೂಪಾಯಿ ಹೋಗುತ್ತದೆ. ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ ಶೇ.35 ಸೇಲ್ಸ್ ಟ್ಯಾಕ್ಸ್ ವಿಧಿಸಿದೆ. ಡೀಸೆಲ್ ಮೇಲೆ ಶೇ.24ರಷ್ಟು ಸೇಲ್ಸ್ ಟ್ಯಾಕ್ಸ್ ಹಾಕುತ್ತಿದೆ ಎಂದು ಹೇಳಿದರು.

‘ಪ್ರತಿಭಟನೆ ಬಗ್ಗೆ ಮಾತನಾಡುವವರು ಸದನಕ್ಕೆ ಏಕೆ ಬರುತ್ತೀರಿ?’ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸುವ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್​​ ಅವಧಿಯಲ್ಲಿನ ಬಿಜೆಪಿ ಪ್ರತಿಭಟನೆಗಳ ಬಗ್ಗೆ ಪ್ರಸ್ತಾಪಿಸಿದರು.

ಅದಕ್ಕೆ, ಪ್ರಿಯಾಂಕ್ ಖರ್ಗೆ ವಿರುದ್ಧ ಬಸವರಾಜ್ ಬೊಮ್ಮಾಯಿ ಗರಂ ಆದರು. ಪ್ರತಿಭಟನೆ ಬಗ್ಗೆ ಮಾತನಾಡುವವರು ಸದನಕ್ಕೆ ಏಕೆ ಬರುತ್ತೀರಿ? ಮಕ್ಕಳ ರೀತಿ ಮಾತಾಡಬೇಡಿ ಎಂದ ಬಸವರಾಜ ಬೊಮ್ಮಾಯಿ ಎಂದು ಸಿಟ್ಟಾದರು.

‘ಮತ ಗಳಿಕೆಗಾಗಿ ತಮಿಳುನಾಡಿಗೆ ಲಾಭ ಮಾಡಲಾಗಿದೆ’ ಬಳಿಕ ಮಾತನಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಾವೇರಿ ಕೊಳ್ಳದಲ್ಲಿ ನೀರಾವರಿ ಯೋಜನೆ ಜಾರಿ ವಿಚಾರವಾಗಿ ತಮಿಳುನಾಡಿನ ನೀರಾವರಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು. ಚುನಾವಣೆ ಹಿನ್ನೆಲೆ ನೀರಾವರಿ ಯೋಜನೆಗೆ ಅನುಮತಿ ನೀಡಲಾಗಿದೆ. 10,345 ಕೋಟಿ ರೂ. ಯೋಜನೆಯನ್ನು ತರಲಾಗುತ್ತಿದೆ. 1,054 ಕೆರೆಗಳನ್ನು ತುಂಬಿಸುವ ಯೋಜನೆ ಮಾಡ್ತಿದ್ದಾರೆ. ಮತ ಗಳಿಕೆಗಾಗಿ ತಮಿಳುನಾಡಿಗೆ ಲಾಭ ಮಾಡಲಾಗಿದೆ. ಇದರಿಂದ ನಮ್ಮ ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ. ಈ ಬಗ್ಗೆ ಚರ್ಚೆ ಆಗಲೇಬೇಕೆಂದು H.D.ರೇವಣ್ಣ ಆಗ್ರಹಿಸಿದರು. ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ H.D.ರೇವಣ್ಣ ಆಗ್ರಹಿಸಿದರು.

HD REVANNA 1

ಹೆಚ್​.ಡಿ.ರೇವಣ್ಣ

ಇದನ್ನೂ ಓದಿ:ಸಿಎಂ BSYಗೆ ಪಾಪ ಒಂದು ಕಿವಿ ಕೇಳ್ತಿಲ್ಲ; ಅವರಿಗೆ ತೊಂದರೆ ಕೊಡೋಕೆ ಇಷ್ಟವಿಲ್ಲ -ಜಯಮೃತ್ಯುಂಜಯ ಸ್ವಾಮೀಜಿ 

Published On - 5:15 pm, Tue, 9 March 21