SSLC ಪರೀಕ್ಷೆ: 119 ವಿದ್ಯಾರ್ಥಿಗಳಲ್ಲಿ ಕೇವಲ 30 ಪಾಸ್.. ಶಾಲೆ ವಿರುದ್ಧ ಸಿಡಿದೆದ್ದ ಸ್ಥಳೀಯರು
ಮೈಸೂರು: ಈ ಬಾರಿಯ SSLC ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಬಂದ ಸರ್ಕಾರಿ ಶಾಲೆಯ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. SSLC ಯಲ್ಲಿ ಹಿಂದೆಂದೂ ಕಾಣದ ಕಳಪೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ನಂಜನಗೂಡಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಶೇಕಡಾ 25ರಷ್ಟು ಫಲಿತಾಂಶ ಮಾತ್ರ ಬಂದಿದೆ. ಅಂದರೆ, ಪರೀಕ್ಷೆ ಎದುರಿಸಿದ್ದ 119 ವಿದ್ಯಾರ್ಥಿಗಳಲ್ಲಿ ಪಾಸ್ ಆಗಿದ್ದು ಕೇವಲ 30 […]

ಮೈಸೂರು: ಈ ಬಾರಿಯ SSLC ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಬಂದ ಸರ್ಕಾರಿ ಶಾಲೆಯ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

SSLC ಯಲ್ಲಿ ಹಿಂದೆಂದೂ ಕಾಣದ ಕಳಪೆ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ನಂಜನಗೂಡಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಶೇಕಡಾ 25ರಷ್ಟು ಫಲಿತಾಂಶ ಮಾತ್ರ ಬಂದಿದೆ. ಅಂದರೆ, ಪರೀಕ್ಷೆ ಎದುರಿಸಿದ್ದ 119 ವಿದ್ಯಾರ್ಥಿಗಳಲ್ಲಿ ಪಾಸ್ ಆಗಿದ್ದು ಕೇವಲ 30 ವಿದ್ಯಾರ್ಥಿಗಳು ಮಾತ್ರ. ಹೀಗಾಗಿ, ಶಿಕ್ಷಕರು ಉತ್ತಮ ಫಲಿತಾಂಶ ತಂದುಕೊಡಲು ಕಸರತ್ತು ನಡೆಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ, ಎಲ್ಲಾ ಶಿಕ್ಷಕರನ್ನ ಸಾಮೂಹಿಕವಾಗಿ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವ ಕಾಲದ ಸರ್ಕಾರಿ ಪ್ರೌಢಶಾಲೆಯಾಗಿರುವ ಇದು ದಶಕಗಳಿಂದ ಉತ್ತಮ ಫಲಿತಾಂಶ ನೀಡುತ್ತಾ ಮಾದರಿ ಶಾಲೆಯಾಗಿತ್ತಂತೆ. ಹಾಗಾಗಿ, ಖಾಸಗಿ ಶಾಲೆಗಳ ಆರ್ಭಟದ ನಡುವೆಯೂ ಈ ಸರ್ಕಾರಿ ಶಾಲೆ ತನ್ನ ಅಸ್ತಿತ್ವವನ್ನ ಉಳಿಸಿಕೊಂಡು ಬಂದಿದೆ. ಜೊತೆಗೆ, ಇನ್ನೆರಡು ವರ್ಷಗಳಲ್ಲಿ ಈ ಶಾಲೆಯು ತನ್ನ ಶತಮಾನೋತ್ಸವ ಸಹ ಆಚರಿಸಿಕೊಳ್ಳಲಿದೆಯಂತೆ.
ಆದರೆ, ಶಿಕ್ಷಕರ ಬೇಜವಾಬ್ದಾರಿತನದಿಂದ ಶಾಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶಿಕ್ಷಕರ ನಿರ್ಲಕ್ಷ್ಯ ಮತ್ತು ಕಾರ್ಯವೈಖರಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಹೀಗಾಗಿ, ಪ್ರಸಕ್ತ ಸಾಲಿನಲ್ಲಿ ಹೀನಾಯ ಫಲಿತಾಂಶ ಎದುರಾಗಿದ್ದು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸಂಸ್ಥೆಯು ಕೊನೆ ಸ್ಥಾನ ಪಡೆದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



