ಗ್ರಾಮ ಪಂಚಾಯತಿ ಹೊಡೆದಾಟ..ರಾಜಕೀಯ ದ್ವೇಷ: ಯೋಧನ ಕುಟುಂಬಸ್ಥರ ಮೇಲೆ ಗ್ರಾಮಸ್ಥರಿಂದ ಹಲ್ಲೆ
ಯೋಧ ಜಗದೀಶ್ ತಾಯಿ ಲಕ್ಕವ್ವ ,ಸಹೋದರ ರಮೇಶ್ ಹಾಗೂ ತಂದೆ ರಂಗಪ್ಪನ ಮೇಲೆ ಆರೋಪಿಗಳು ಕಲ್ಲಿನಿಂದ ಹೊಡೆದಿದ್ದು, ದೈಹಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಯೋಧನ ಕುಟುಂಬಸ್ಥರ ಕೈ ಹಾಗೂ ತಲೆಗೆ ಗಾಯಗಳಾಗಿವೆ. ಲಕ್ಕವ್ವ ಜಗಳ ಬಿಡಿಸಲು ಬಂದಾಗ ಆಕೆಯನ್ನು ಎಳೆದಾಡಿ ನೂಕಾಡಿದ ಪರಿಣಾಮ ಕಾಲಿಗೆ ಒಳಪೆಟ್ಟಾಗಿದೆ ಎಂದು ದೂರಲಾಗಿದೆ.

ಬಾಗಲಕೋಟೆ: ಸದ್ಯ ಎಲ್ಲ ಕಡೆ ಗ್ರಾಮ ಪಂಚಾಯತಿ ಚುನಾವಣೆಯದ್ದೇ ಸುದ್ದಿ. ಹಳ್ಳಿ ಕಟ್ಟೆಗಳ ಮೇಲೆಲ್ಲಾ ರಾಜಕೀಯ ಚರ್ಚೆ. ಚುನಾವಣೆ ಹತ್ತಿರಾಗುತ್ತಿದ್ದಂತೆ ಗ್ರಾಮ ಗ್ರಾಮಗಳಲ್ಲಿ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ಹಳ್ಳಿ ಕದನ ಎಂದರೆ ಕೇಳಬೇಕೇ? ಕೆಲವು ಕಡೆಯಂತೂ ಪ್ರಚಾರದ ಕಾವಿನ ಜೊತೆಗೆ ಜಗಳ, ಹೊಡೆದಾಟಗಳ ಬಿಸಿಯೂ ಊರನ್ನು ತಲುಪುತ್ತಿವೆ.
ಬಾಗಲಕೋಟೆ ಜಿಲ್ಲೆಯ ಶಿರಗುಪ್ಪಿ ಗ್ರಾಮದಲ್ಲೂ ಚುನಾವಣೆಯ ಕಾವು ಜಗಳಕ್ಕೆ ನಾಂದಿ ಹಾಡಿದೆ. ಭಾರತೀಯ ಸೇನೆಯಲ್ಲಿ ಯೋಧನಾಗಿ ಛತ್ತೀಸ್ಗಢದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಗದೀಶ್ ಅವರ ಕುಟುಂಬದ ಮೇಲೆ ರಾಜಕೀಯ ಕಾರಣದಿಂದ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಯೋಧ ಜಗದೀಶ್ ಬರಗಾಲ ಅವರ ಕುಟುಂಬ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ.

ಕಾತರಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿ ಪರ ಜಗದೀಶ್ ಕುಟುಂಬದವರು ಪ್ರಚಾರ ಮಾಡಿದ್ದಕ್ಕೆ ಕೆರಳಿದ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸಣ್ಣಪ್ಪ ಗಡ್ಡಿ ಹಿಂಬಾಲಕರು ಹಲ್ಲೆ ಮಾಡಿದ್ದಾರೆ. ಲಕ್ಷ್ಮಣ ಜುಂಜೂರಿ, ಹೊಳ್ಳೆಪ್ಪ ಜುಂಜೂರಿ ಮತ್ತು ಸದಪ್ಪ ಜಿಂಜುರಿ ಎನ್ನುವವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಯೋಧನ ತಾಯಿ ಲಕ್ಕವ್ವ, ಸಹೋದರ ರಮೇಶ್ ಹಾಗೂ ತಂದೆ ರಂಗಪ್ಪನ ಮೇಲೆ ಆರೋಪಿಗಳು ಕಲ್ಲಿನಿಂದ ಹೊಡೆದಿದ್ದು, ದೈಹಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಯೋಧನ ಕುಟುಂಬಸ್ಥರ ಕೈ ಹಾಗೂ ತಲೆಗೆ ಗಾಯಗಳಾಗಿವೆ. ಲಕ್ಕವ್ವ ಜಗಳ ಬಿಡಿಸಲು ಬಂದಾಗ ಆಕೆಯನ್ನು ಎಳೆದಾಡಿ ನೂಕಾಡಿದ ಪರಿಣಾಮ ಕಾಲಿಗೆ ಒಳಪೆಟ್ಟಾಗಿದೆ ಎಂದು ದೂರಲಾಗಿದೆ.


ದೇಶ ಸೇವೆಯಲ್ಲಿ ನಿರತರಾಗಿರುವ ಯೋಧನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವುದನ್ನು ಹಲವರು ಖಂಡಿಸಿದ್ದಾರೆ. ಸದ್ಯ ಯೋಧನ ಕುಟುಂಬಸ್ಥರು ರಕ್ಷಣೆ ಕೋರಿ ಎಸ್ಪಿ ಕಚೇರಿಯ ಮೆಟ್ಟಿಲು ಹತ್ತಿ ಕಣ್ಣೀರಿಟ್ಟಿದ್ದಾರೆ. ಅವರ ನೋವಿಗೆ ಸ್ಪಂದಿಸಿರುವ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



