ನಾಯಿ ಛೂ ಬಿಟ್ಟು ಹಲ್ಲೆ ಮಾಡಿದರು: ನಿವೃತ್ತ ಪೊಲೀಸ್ ಅಧಿಕಾರಿ ವಿರುದ್ಧ ಯುವತಿಯ ಆರೋಪ
ಉಟ್ಟಿದ್ದ ಬಟ್ಟೆಯನ್ನು ಹರಿದು ಹಾಕಿ ಅರೆನಗ್ನಳನ್ನಾಗಿ ಮಾಡಿ ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ, ನಾವು ಬಡವರು ಎಂಬ ಕಾರಣಕ್ಕೆ ನಮಗೆ ರಕ್ಷಣೆ ನೀಡುತ್ತಿಲ್ಲ...

ಶಿವಮೊಗ್ಗ: ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದವರೊಬ್ಬರು ಈಗ ಹೆಣ್ಣು ಮಗಳ ಮೇಲೆ ಹಲ್ಲೆ ಮಾಡಿ ಆರೋಪಿಯ ಸ್ಥಾನದಲ್ಲಿ ನಿಂತಿರುವ ಘಟನೆ ವರದಿಯಾಗಿದೆ.
ಹೊಸನಗರ ತಾಲ್ಲೂಕಿನ ಗುಡ್ಡೇಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿನ ಭೂಮಿಕಾ ಹೊಳೆಯಪ್ಪ ಎಂಬುವವರ ಜಮೀನಿಗೆ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ ಅಕ್ರಮವಾಗಿ ಪ್ರವೇಶಿಸಿ ದರ್ಪ ತೋರುತ್ತಿದ್ದಾರೆ. ಭೂಮಿಕಾ ಅವರಿಗೆ ಸೇರಿದ ಆಸ್ತಿಯನ್ನು ಲೂಟಿ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ವಾರ ನಮಗೆ ಗೊತ್ತಿಲ್ಲದಂತೆ ನಮ್ಮ ಜಮೀನಿನಲ್ಲಿ ಜೆಸಿಬಿ ಯಂತ್ರದಿಂದ ಕೆಲಸ ಮಾಡಿಸಿದ್ದಾರೆ. ಅದನ್ನು ಪ್ರಶ್ನಿಸಿದಾಗ ತಮ್ಮ ನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದಾರೆ. ನಂತರ ನಾನು ಹೆದರಿ ಕೂಗಿಕೊಂಡಾಗ ಮಾನವೀಯತೆಯನ್ನೂ ತೋರದೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಸ್ಥಳೀಯ ಪೊಲೀಸರು ನಮ್ಮ ರಕ್ಷಣೆಗೆ ಬಂದಿಲ್ಲ ಎಂದು ಭೂಮಿಕಾ ಆರೋಪಿಸಿದ್ದಾರೆ.
ಹೆಣ್ಣು ಮಗಳೊಬ್ಬಳ ಮೇಲೆ ಹಲ್ಲೆ ಮಾಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರನ್ನು ಪದೇ ಪದೇ ಹೇಳಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ನಮ್ಮ ಕುಟುಂಬದವರನ್ನು ಕೊಲೆ ಮಾಡಿ ಆಸ್ತಿ ಕಬಳಿಸುವ ಸಂಚು ನಡೆದಿದೆ. ಮಧು, ಪದ್ಮನಾಯ್ಕ, ಲೋಕೇಶ್, ಸಿಂಚನ, ಸುವರ್ಣ ಎನ್ನುವವರು ನಾನು ಉಟ್ಟಿದ್ದ ಬಟ್ಟೆಯನ್ನು ಹರಿದು ಹಾಕಿ ಅರೆನಗ್ನಳನ್ನಾಗಿ ಮಾಡಿ ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ, ನಾವು ಬಡವರು ಎಂಬ ಕಾರಣಕ್ಕೆ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಭೂಮಿಕಾ ಆರೋಪಿಸುತ್ತಿದ್ದಾರೆ.
ನನಗೆ ಹಾಗೂ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ ಅವರಿಂದ ನಮಗೆ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾಗಿ ಭೂಮಿಕಾ ತಿಳಿಸಿದ್ದಾರೆ. ಯುವತಿ ಮೇಲೆ ಹಲ್ಲೆ ಮಾಡಿರುವ ವೀಡಿಯೋ ವೈರಲ್ ಆಗಿದೆ.
-ಬಸವರಾಜ್ ಯರಗಣವಿ



