ಬೆಂಗಳೂರು: ಖಾಸಗಿ ಅಂತಲೇ ಅಲ್ಲ; ಸರ್ಕಾರಿ ಬ್ಯಾಂಕ್ಗಳಲ್ಲಿ ನಮ್ಮ ಕರ್ನಾಟಕದ ಬಿಟ್ಟು ಇತರೆ ರಾಜ್ಯದವರೇ ಎದ್ದು ಕಾಣಿಸುತ್ತಾರೆ, ಕನ್ನಡದ ಅವಗಣನೆ ನಡೆದೇ ಇದೆ ಎಂಬ ಆರೋಪಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ಈಚೆಗೆ ಪ್ರಕಟವಾಗಿರುವ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯಲ್ಲಿ ಇಂಥ ಆರೋಪಗಳಿಗೆ ಎಸ್ಬಿಐ (SBI-State Bank of India) ಸದ್ದಿಲ್ಲದೆ ಉತ್ತರಿಸಿದೆ.
ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ 8,500 ಅಪ್ರೆಂಟಿಸ್ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಪೈಕಿ ಕರ್ನಾಟಕದಲ್ಲಿ 600 ಮಂದಿಗೆ ಅವಕಾಶವಿದೆ. ಈ ಹುದ್ದೆಗಳನ್ನೂ ಜಿಲ್ಲಾವಾರು ಹಂಚಿಕೆ ಮಾಡಿ, ಪ್ರಾದೇಶಿಕವಾಗಿಯೂ ಈ ಹುದ್ದೆಗಳನ್ನು ಅರ್ಹರು ದಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಅಷ್ಟರಮಟ್ಟಿಗೆ ಕನ್ನಡಿಗರು ಸಮಾಧಾನಪಟ್ಟಿಕೊಳ್ಳಬಹುದು.
ಬೀದರ್ಗೆ 27, ಚಾಮರಾಜನಗರಕ್ಕೆ 24, ಕಲಬುರ್ಗಿಗೆ 26, ದಾವಣಗೆರೆಗೆ 21, ಮಂಡ್ಯಕ್ಕೆ 34, ಯಾದಗಿರಿಗೆ 18… ಹೀಗೆ ರಾಜ್ಯದ ಬಹುತೇಕ ಹಿಂದುಳಿದ ಜಿಲ್ಲೆಗಳಿಗೆ ಆದ್ಯತೆಯ ಮೇರೆಗೆ ಹುದ್ದೆಗಳನ್ನು ಮೀಸಲಿರಿಸಿರುವುದು ಈ ನೇಮಕಾತಿ ಜಾಹೀರಾತಿನಲ್ಲಿ ಎದ್ದು ಕಾಣುತ್ತದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳ ನೇಮಕಾತಿ ಪರೀಕ್ಷೆ ತೆಗೆದುಕೊಳ್ಳುವವರಿಗೆ ಈ ಅವಕಾಶ ಒಂದು ಚಿಮ್ಮುಹಲಗೆ ಎಂದೇ ಪರಿಗಣಿಸಲಾಗುತ್ತದೆ.
ಜನವರಿಯಲ್ಲಿ ಆನ್ಲೈನ್ ಪರೀಕ್ಷೆಗಳು..ಅರ್ಜಿ ಸಲ್ಲಿಸುವುದು ಹೇಗೆ? ಎಸ್ಬಿಐ ವೆಬ್ಸೈಟ್ನಲ್ಲಿಯೇ ಅರ್ಜಿಗಳನ್ನು ಭರ್ತಿ ಮಾಡಿ, ಡಿಸೆಂಬರ್ 10ರ ಒಳಗೆ ಸಬ್ಮಿಟ್ ಮಾಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 2021ರಲ್ಲಿ ಆನ್ಲೈನ್ ಪರೀಕ್ಷೆಗಳು ನಡೆಯಲಿವೆ.
ಅಕ್ಟೋಬರ್ 31, 2020ಕ್ಕೆ ಕನಿಷ್ಠ 20 ವರ್ಷ, ಗರಿಷ್ಠ 28 ವಯೋಮಿತಿಯೊಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ‘ವಯೋಮಿತಿಯ ನಿಯಮಗಳು ಸಾಮಾನ್ಯ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ. ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ನಿಯಮಾವಳಿಗಳ ಅನ್ವಯ ವಯೋಮಿತಿ ರಿಯಾಯ್ತಿ ಸಿಗಲಿದೆ’ ಎಂದು ಅಧಿಸೂಚನೆಯಲ್ಲಿ ಎಸ್ಬಿಐ ತಿಳಿಸಿದೆ.
ಅಪ್ರೆಂಟಿಸ್ ತರಬೇತಿ ಅವಧಿ 3 ವರ್ಷಗಳು. ಭಾರತೀಯ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಸಂಸ್ಥೆ (IIBF -Indian Institute of Banking and Finance) ನಡೆಸುವ ವಿವಿಧ ಪರೀಕ್ಷೆಗಳಿಗೆ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಳ್ಳುವ ಆಸಕ್ತಿ ಹೊಂದಿರಬೇಕು ಎಂದು ಅಧಿಸೂಚನೆ ಹೇಳಿದೆ.
ಅಪ್ರೆಂಟಿಸ್ಗಳಿಗೆ ಮೊದಲ ವರ್ಷದಲ್ಲಿ ತಿಂಗಳಿಗೆ ₹ 15,000, 2ನೇ ವರ್ಷದಲ್ಲಿ ₹ 16,500 ಮತ್ತು 3ನೇ ವರ್ಷದಲ್ಲಿ ₹ 19,000 ಸ್ಟೇಫಂಡ್ ಸಿಗಲಿದೆ. ಇತರ ಯಾವುದೇ ಭತ್ಯೆ ಅಥವಾ ಸೌಲಭ್ಯಗಳು ಅಪ್ರೆಂಟಿಸ್ಗಳಿಗೆ ಸಿಗುವುದಿಲ್ಲ.
ಹುದ್ದೆಯ ಹೆಸರು: ಅಪ್ರೆಂಟಿಸ್ ಖಾಲಿ ಇರುವ ಒಟ್ಟಾರೆ ಹುದ್ದೆಗಳು: 8,500 (ಕರ್ನಾಟಕದಲ್ಲಿ 600) ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ₹300. ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ. ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 10 ಪರೀಕ್ಷೆ ಎಂದು ನಡೆಯುತ್ತೆ: 2021ರ ಜನವರಿ ಪ್ರವೇಶ ಪತ್ರ ವಿತರಣೆ: 2020ರ ಡಿಸೆಂಬರ್ ಕೊನೆಯ ವಾರ ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ
ಎಸ್ಬಿಐ ಅಪ್ರೆಂಟಿಸ್ ತರಬೇತಿ ಕುರಿತು ಹೆಚ್ಚಿನ ಮಾಹಿತಿಗೆ https://bank.sbi/web/careers/current-openings ಲಿಂಕ್ ನೋಡಬಹುದು.