ಮೆಲ್ಬರ್ನ್: ಅತಿದೊಡ್ಡ ಸಾಮಾಜಿಕ ಜಾಲತಾಣವೆನಿಸಿಕೊಂಡಿರುವ ಫೇಸ್ಬುಕ್ ಮಂಗಳವಾರ (ಫೆ.23) ಹೇಳಿಕೆ ಬಿಡುಗಡೆ ಮಾಡಿದೆ. ತಾಂತ್ರಿಕ ಸಂಸ್ಥೆಗಳು ಸುದ್ದಿ ಬಿತ್ತರಿಸಲು ಹಣ ತೆರುವ ಕುರಿತು ಆಸ್ಟ್ರೇಲಿಯಾದ ಸರ್ಕಾರದೊಂದಿಗೆ ತಾನೊಂದು ಪರಿಷ್ಕೃತ ಕರಾರು ಮಾಡಿಕೊಂಡಿದ್ದು ಆ ದೇಶದಲ್ಲಿ ತನ್ನ ಸೇವೆಯನ್ನು ಪುನರ್ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದೆ. ಪತ್ರಿಕೋದ್ಯಮ ಕಂಟೆಂಟ್ ನೀಡಲು ಸುದ್ದಿಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ ಕಂಪನಿಗಳು ಹಣ ಪಾವತಿಸಬೇಕೆಂಬ ವಿಷಯವು ಕಳೆದ ವಾರ ಚರ್ಚೆಗೆ ಬಂದಿತ್ತು. ಪ್ರಮಾದವಶಾತ್, ಕೊವಿಡ್-19ಕ್ಕೆ ಸಂಬಂಧಿಸಿದ ಎಚ್ಚರಿಕೆಗಳೂ ಸೇರಿದಂತೆ ಸರ್ಕಾರದ ಕೆಲವು ಸುದ್ದಿ ಮತ್ತು ಪ್ರಕಟಣೆಗಳು ನಿರ್ಬಂಧಕ್ಕೊಳಗಾಗಿ ಕೋಲಾಹಲ ಉಂಟಾಗಿತ್ತು.
ಆಸ್ಟ್ರೇಲಿಯಾ ಸರ್ಕಾರದ ಮೈಲಿಗಲ್ಲು ಎನಿಸಿರುವ, ‘ದಿ ಕೋಡ್’ ಅಂತಲೂ ಕರೆಸಿಕೊಳ್ಳುವ ಮಾಧ್ಯಮ ಚೌಕಾಶಿ ಕಾನೂನುಗಳು, ಆ ದೇಶದ ಸಂಸತ್ತಿನಲ್ಲಿ ಇನ್ನೂ ಪಾಸಾಗಬೇಕಿದೆ.
ಆಸ್ಟ್ರೇಲಿಯಾ ಸರ್ಕಾರದ ಕೋಶಾಧಿಕಾರಿಯಾಗಿರುವ ಜೊಷ್ ಫ್ರೈಡೆನ್ಬರ್ಗ್ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ ನಂತರ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತಾಡುತ್ತಾ, ‘ಫೇಸ್ಬುಕ್ ಸಂಸ್ಥೆಯು ಆಸ್ಟ್ರೇಲಿಯಾದೊಂದಿಗೆ ಪುನಃ ಬಾಂಧವ್ಯ ಬೆಳೆಸಿದೆ. ಫೇಸ್ಬುಕ್ ಪ್ಲಾಟ್ಫಾರ್ಮ್ನಲ್ಲಿ ಆಸ್ಟ್ರೇಲಿಯಾದ ಸುದ್ದಿಗಳನ್ನು ಪುನರ್ಸ್ಥಾಪಿಸಲಾಗುವುದು. ಹಾಗೆಯೇ, ಫೇಸ್ಬುಕ್ ಅಸ್ಟ್ರೇಲಿಯಾದ ಸುದ್ದಿಸಂಸ್ಥೆಗಳೊಂದಿಗೆ ಸೌಹಾರ್ದಯುತ ವಿಚಾರ-ವಿಮರ್ಶೆಗಳನ್ನು ನಡೆಸಲು ಮತ್ತು ಸುದ್ದಿ ವಿಷಯಗಳಿಗೆ ಹಣ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರಾರುಗಳನ್ನು ಮಾಡಿಕೊಳ್ಳಲು ಬದ್ಧವಾಗಿದೆ’ ಎಂದು ಹೇಳಿದರು.
ಜುಕರ್ಬರ್ಗ್ ಈ ಕುರಿತು ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿ ಫ್ರೈಡೆನಬರ್ಗ್, ‘ಫೇಸ್ಬುಕ್ ಸುದ್ದಿ ಸಂಸ್ಥೆಗಳೊಂದಿಗೆ ಪ್ರತ್ಯೇಕವಾಗಿ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ’ ಎಂದು ಹೇಳಿದರು.
ಫೇಸ್ಬುಕ್ನಂತೆ, ಇಂಟರ್ನೆಟ್ ದೈತ್ಯ ಗೂಗಲ್ ಸಹ ಮಾಧ್ಯಮ ಚೌಕಾಶಿ ಕಾನೂನಿಗೆ ಬದ್ಧತೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಫೇಸ್ಬುಕ್ ಮತ್ತು ಗೂಗಲ್ ಸರ್ಕಾರದ ಸುಪರ್ದಿಯಿಂದಾಚೆ ಸುದ್ದಿಸಂಸ್ಥೆಗಳೊಂದಿಗೆ ವಹಿವಾಟಿಗೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರವನ್ನು ಸಂತೃಪ್ತಿಗೊಳಿಸಬಹುದಾಗಿದೆ.
‘ಇದು ಬಹಳ ಕಷ್ಟಕರವಾದ ಪ್ರಕ್ರಿಯೆ ಅಗಲಿದೆ, ಆದರೆ ಅವು ಬಹಳ ಮುಖ್ಯವಾದ ವಿಷಯಗಳಾಗಿರುವುದರಿಂದ ಕಡೆಗಣಿಸವಂತೆಯೂ ಇಲ್ಲ. ಫೇಸ್ಬುಕ್ ವಾಣಿಜ್ಯ ಸಂಸ್ಥೆಗಳೊಂದಿಗೆ ವಿಶ್ವಾಸಾರ್ಹ ಮಾತುಕತೆಗಳನ್ನು ಆರಂಭಿಸಿದೆ’ ಎಂದು ಫ್ರೈಡೆನ್ಬರ್ಗ್ ಹೇಳಿದರು. ಫೇಸ್ಬುಕ್ ಸಂಸ್ಥೆಯು ತಾನು ಹೊರಡಿಸಿರುವ ಹೇಳಿಕೆಯಲ್ಲಿ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಒಪ್ಪೊಂದವೊಂದಕ್ಕೆ ಸಹಿ ಹಾಕಿರರುವುದು ‘ತುಂಬಾ ಸಂತೋಷದಾಯಕ’ ಎಂದು ಹೇಳಿದೆ.
‘ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಾವು ನಡೆಸಿದ ಮಾತುಕತೆ ತುಂಬಾ ಖುಷಿ ನೀಡಿದೆ. ಸುದ್ದಿಸಂಸ್ಥೆಗಳಿಗೆ ನಮ್ಮ ಪ್ಲಾಟ್ಪಾರ್ಮ್ ನೀಡುವ ಮತ್ತು ನಾವು ಅವರಿಂದ ಪಡೆಯುವ ಕಂಟೆಂಟ್ಗೆ ಸಂಬಂಧಿಸಿದಂತೆ ನಮಗಿದ್ದ ಆತಂಕಗಳು ದೂರವಾಗಿವೆ. ನಮ್ಮ ಹಿತಾಸಕ್ತಿ ಕಾಪಾಡುವ ಭರವಸೆಯನ್ನು ಸರ್ಕಾರ ನೀಡಿದೆ’ ಎಂದು ಫೇಸ್ಬುಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಈ ಬದಲಾವಣೆಗಳ ಫಲಶ್ರುತಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮದಲ್ಲಿ ನಮ್ಮ ಬಂಡವಾಳವನ್ನು ಹೆಚ್ಚಿಸಿ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯನ್ನರಿಗೆ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಸುದ್ದಿಯನ್ನು ಪುನರ್ಸ್ಥಾಪಿಸುತ್ತೇವೆ’ ಎಂದು ಫೇಸ್ಬುಕ್ ಹೇಳಿದೆ.
ಇದನ್ನೂ ಓದಿ: ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್ಬುಕ್ ಆದಾಯ ಹಂಚಿಕೆ ವಿವಾದ?
Published On - 9:45 pm, Tue, 23 February 21