ಹಸಿ ತ್ಯಾಜ್ಯದಿಂದ ಗೊಬ್ಬರ! ಕೊನೆಗೂ ಶುರುವಾಯಿತು ಅವಳಿ ನಗರದಲ್ಲಿ ಹಸಿ ಕಸದ ನಿರ್ವಹಣೆ
ಹಸಿ ಕಸವನ್ನು ಘಟಕದಲ್ಲಿ ಸಂಗ್ರಹಿಸದ 28 ದಿನಗಳ ನಂತರ ಈ ಕಸಕ್ಕೆ ಸಿನ ಬಿಟ್ಟು ದಿನ ಮೈಕ್ರೋಸ್ ಸಿಂಪಡಿಸಿ ಕೊಳೆಯುವಂತೆ ಮಾಡಲಾಗುತ್ತದೆ. ರಿಫ್ಯೂಸ್ ಡಿರೈವ್ಡ್ ಇಂಧನವನ್ನು (ಆರ್‌ಡಿಎಫ್) ತೆಗೆದು, ಇದಕ್ಕೆ ಬ್ಯಾಕ್ ಫಿಲ್ಟರ್ ಮತ್ತು ಏರ್ ಬ್ಯಾಕ್ ಫಿಲ್ಟರ್ ಹಾಯಿಸಿ ಸಾವಯವ ಗೊಬ್ಬರ ಪಡೆಯಲಾಗುತ್ತದೆ.
ಧಾರವಾಡ: ಅವಳಿ ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲು ಸಾಕಷ್ಟು ಕಷ್ಟ ಪಡುತ್ತಿದ್ದ ಮಹಾನಗರ ಪಾಲಿಕೆ ಕೊನೆಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಿದೆ. ಸ್ವಚ್ಛ ಭಾರತ್ ಮಿಷನ್ ನೆರವಿನಿಂದ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆ ಯೋಜನೆಯಡಿ ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಕಾಂಪೋಸ್ಟ್ ಘಟಕ ಸ್ಥಾಪನೆ ಮಾಡುವ ಮೂಲಕ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಚಾಲನೆ ನೀಡಿದೆ.
ದಿನಕ್ಕೆ 40 ಟನ್ ಹಸಿ ತ್ಯಾಜ್ಯ ಸಂಸ್ಕರಣೆ: ಹಲವಾರು ವರ್ಷಗಳಿಂದ ಈ ಘಟಕ ಸ್ಥಾಪನೆ ಕೆಲಸ ನಡೆದಿತ್ತು. ಈ ಕುರಿತು ಧಾರವಾಡ ಅಧಿಕಾರಿಗಳನ್ನಾಗಲಿ, ಜನಪ್ರತಿನಿಧಿಗಳನ್ನಾಗಲಿ ಕೇಳಿದರೆ ಇಂದು, ನಾಳೆ ಎನ್ನುತ್ತಲೇ ನಡೆದಿದ್ದರು. ಇದೀಗ ರಾಜ್ಯ ಸರ್ಕಾರದ ಅನುದಾನದ ಅಡಿ ಲಕಮನಹಳ್ಳಿ ಬಡಾವಣೆ ಬಳಿ 12.63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕದ ಕಾರ್ಯಾರಂಭ ಮಾಡಿದೆ.
ನಿತ್ಯವೂ ಧಾರವಾಡ ನಗರದ 22 ವಾರ್ಡ್ಗಳಿಂದ ಒಟ್ಟು 120 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದರಲ್ಲಿ ಸುಮಾರು 40 ಟನ್ ಹಸಿ ತ್ಯಾಜ್ಯವೇ ಇರುತ್ತದೆ. ಇಲ್ಲಿಯವರೆಗೆ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದ ಪರಿಣಾಮ ಡಂಪಿಂಗ್ ಯಾರ್ಡ್ನ ಸುತ್ತಲಿನ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದರೆ ಇದೀಗ ಈ ಘಟಕ ಆರಂಭವಾಗಿ ಸುತ್ತಮುತ್ತಲಿನ ಜನರಿಗೆ ಕೊಂಚ ನೆಮ್ಮದಿ ಉಂಟಾಗಿದೆ.
ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ:
ನಗರದ ಮನೆ ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಸುಮಾರು 60 ದಿನಗಳ ಕಾಲಾವಧಿ ಬೇಕು. ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಘಟಕದಲ್ಲಿ 28 ದಿನಗಳ ಕಾಲ ಶೇಖರಿಸಲಾಗುತ್ತದೆ. ಈ ಕಸಕ್ಕೆ ದಿನ ಬಿಟ್ಟು ದಿನ ಮೈಕ್ರೋಸ್ ಸಿಂಪಡಿಸಿ ಕೊಳೆಯುವಂತೆ ಮಾಡಲಾಗುತ್ತದೆ.
ಬಳಿಕ ಅದನ್ನು ಯಂತ್ರಗಳಲ್ಲಿ ಹಾಕಿದ ನಂತರ ಇದರಿಂದ ರಿಫ್ಯೂಸ್ ಡಿರೈವ್ಡ್ ಇಂಧನವನ್ನು (ಆರ್‌ಡಿಎಫ್) ತೆಗೆದು ಸಾವಯವ ಗೊಬ್ಬರ ತಯಾರಿಕೆ ವಸ್ತುಗಳನ್ನು ಪಡೆಯಲಾಗುತ್ತದೆ. ಈ ವಸ್ತುಗಳಿಗೆ ಮತ್ತೆ ಮೈಕ್ರೋಸ್ ಸಿಂಪಡಿಸಿ 28 ದಿನಗಳ ಕಾಲ ಕೊಳೆಯಲು ಬಿಡಲಾಗುತ್ತದೆ. ಕೊನೆಗೆ ಇದಕ್ಕೆ ಬ್ಯಾಕ್ ಫಿಲ್ಟರ್ ಮತ್ತು ಏರ್ ಬ್ಯಾಕ್ ಫಿಲ್ಟರ್ ಮೂಲಕ ಹಾಯಿಸಿ ಸಾವಯವ ಗೊಬ್ಬರ ಪಡೆಯಲಾಗುತ್ತದೆ.
ಈಗಾಗಲೇ ಇಲ್ಲಿ ಸಿದ್ಧವಾಗಿರುವ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಇದು ಬಳಕೆಗೆ ಯೋಗ್ಯವೇ? ಎಂಬ ಪ್ರಶ್ನೆಗೆ ಉತ್ತರವಾಗಿ ಗೊಬ್ಬರ ಪರೀಕ್ಷೆ ನಡೆಸಿರುವ ಧಾರವಾಡ ಎಸ್‌ಎಲ್‌ಎ ಬಯೋಟೆಕ್ ಪ್ರಯೋಗಾಲಯ, ಈ ಗೊಬ್ಬರ ಬಳಕೆಗೆ ಯೋಗ್ಯವಾಗಿದೆ ಎಂಬ ಪ್ರಮಾಣಪತ್ರವನ್ನು ನೀಡಿದೆ. ಹೀಗಾಗಿ ಗೊಬ್ಬರವನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ಕಳುಹಿಸಲು ಪಾಲಿಕೆ ಸಿದ್ಧತೆ ನಡೆಸಿದೆ.
ಇಂತಹದ್ದೊಂದು ಘಟಕ ಸ್ಥಾಪಿಸುವಂತೆ ನಿರಂತರವಾಗಿ ಸಾರ್ವಜನಿಕರಿಂದ ಪಾಲಿಕೆ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ ಅಧಿಕಾರಿಗಳ ಹಾಗೂ ಜನ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ ಕೊನೆಗೂ ಘಟಕ ಆರಂಭವಾಗಿದ್ದು, ಸುತ್ತಮುತ್ತಲಿನ ಜನರ ಪಾಲಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
–ನರಸಿಂಹಮೂರ್ತಿ ಪ್ಯಾಟಿ
ವಿದ್ಯಾಕಾಶಿಯಲ್ಲಿ ರಾಶಿ ರಾಶಿ ತ್ಯಾಜ್ಯ.. ಕಸಕ್ಕೆ ಇಟ್ಟ ಬೆಂಕಿ ಕಾಳ್ಗಿಚ್ಚು ಆಗಿ ಧಗಧಗಿಸುತ್ತಿದೆ ಪ್ರಜ್ಞಾವಂತರ ನಾಡು!