ಕೌನ್ ಬನೇಗಾ ಕರೋಡ್ಪತಿ ತಜ್ಞರ ಸೀಟಲ್ಲಿ ಕೂರಲಿದ್ದಾರೆ ‘ಸೂಪರ್ 30’ ಸಂಸ್ಥಾಪಕ ಆನಂದ ಕುಮಾರ್
'ಸೂಪರ್ 30' ಸಂಸ್ಥಾಪಕ ಮತ್ತು ಖ್ಯಾತ ಗಣಿತಜ್ಞ ಆನಂದ ಕುಮಾರ್ ಸೋಮವಾರ ಪ್ರಸಾರವಾಗಲಿರುವ ಜನಪ್ರಿಯ ಕ್ವಿಜ್ ಶೋ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ತಜ್ಞರ ಸೀಟಲ್ಲಿ ಕುಳಿತುಕೊಳ್ಳಲಿದ್ದಾರೆ.

ಪಟನಾ: ‘ಸೂಪರ್ 30’ ಸಂಸ್ಥಾಪಕ ಮತ್ತು ಖ್ಯಾತ ಗಣಿತಜ್ಞ ಆನಂದ ಕುಮಾರ್ ಸೋಮವಾರ ಪ್ರಸಾರವಾಗಲಿರುವ ಜನಪ್ರಿಯ ಕ್ವಿಜ್ ಶೋ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ತಜ್ಞರ ಸೀಟಲ್ಲಿ ಕುಳಿತುಕೊಳ್ಳಲಿದ್ದಾರೆ. ಆನಂದ ಕುಮಾರ್ ಅವರು ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ 12ನೇ ಆವೃತ್ತಿಯ 51, 61ಮತ್ತು 62ನೇ ಕಂತಿನ ತಜ್ಞರಾಗಿರಲಿದ್ದಾರೆ ಎಂದು ಸೂಪರ್ 30 ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
2017ರಲ್ಲಿ ಆನಂದ ಕುಮಾರ್ ಕೆಬಿಸಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ₹25 ಲಕ್ಷ ಗೆದ್ದಿದ್ದರು. ‘ಆರಕ್ಷಣ್’ ಚಿತ್ರದಲ್ಲಿ ಶಿಕ್ಷಕನ ಪಾತ್ರ ನಿರ್ವಹಿಸಲು ಅಮಿತಾಬ್ ಬಚ್ಚನ್ ಅವರಿಗೆ ಸಹಾಯ ಮಾಡಿದ್ದರು ಕುಮಾರ್. ಬಚ್ಚನ್ ಜತೆ ಕೆಲಸ ಮಾಡುವುದು ಖುಷಿಕೊಡುತ್ತದೆ ಅಂತಾರೆ ಅವರು.
2002ರಲ್ಲಿ ಆರಂಭವಾದ ಸೂಪರ್ 30 ಸಂಸ್ಥೆಯು ರಿಕ್ಷಾ ಚಾಲಕರ, ರೈತರ, ಮನೆಗೆಲಸದವರ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ಪೂರೈಸಿ ಐಐಟಿ ಪರೀಕ್ಷೆಗೆ ಸಿದ್ಧಪಡಿಸುತ್ತದೆ.
ಆನಂದ ಕುಮಾರ್ ಅವರ ಜೀವನಾಧಾರಿತ ಸೂಪರ್ 30 ಎಂಬ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಹೃತಿಕ್ ರೋಷನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.
Published On - 4:19 pm, Sat, 5 December 20



