ತುಪ್ಪರಿಹಳ್ಳ ಯೋಜನೆಗೆ ಸರ್ವೇ ಆರಂಭ.. ರೈತರ ಕನಸು ನನಸಿಗೆ ಕೂಡಿ ಬಂತು ಕಾಲ
ಧಾರವಾಡ ವಿಧಾನಸಭಾ ಕ್ಷೇತ್ರದ ಜನತೆಯ ಬಹು ದಿನಗಳ ಕನಸು ಈಗ ನನಸಾಗುವ ಕಾಲ ಬಂದಿದೆ. ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಈ ಸಂಬಂಧ ಸರ್ವೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹೌದು, ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆ ಹಾಗೂ ಅದರ ಜೀರ್ಣೋದ್ದಾರ ಕಾರ್ಯಕ್ಕೆ ಯೋಜನಾ ವರದಿ ಸಲ್ಲಿಸಲು ಸರ್ವೆ ಕಾರ್ಯ ಆರಂಭವಾಗಿದೆ. ಈ ಭಾಗದ ಜನರ ಬಹು ವರ್ಷಗಳ ಕನಸಾಗಿರುವ ಈ ಯೋಜನೆಯಿಂದ ರೈತರ ಜಮೀನಿಗೆ ಹನಿ ಹಾಗೂ […]
ಧಾರವಾಡ ವಿಧಾನಸಭಾ ಕ್ಷೇತ್ರದ ಜನತೆಯ ಬಹು ದಿನಗಳ ಕನಸು ಈಗ ನನಸಾಗುವ ಕಾಲ ಬಂದಿದೆ. ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಈ ಸಂಬಂಧ ಸರ್ವೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಹೌದು, ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆ ಹಾಗೂ ಅದರ ಜೀರ್ಣೋದ್ದಾರ ಕಾರ್ಯಕ್ಕೆ ಯೋಜನಾ ವರದಿ ಸಲ್ಲಿಸಲು ಸರ್ವೆ ಕಾರ್ಯ ಆರಂಭವಾಗಿದೆ. ಈ ಭಾಗದ ಜನರ ಬಹು ವರ್ಷಗಳ ಕನಸಾಗಿರುವ ಈ ಯೋಜನೆಯಿಂದ ರೈತರ ಜಮೀನಿಗೆ ಹನಿ ಹಾಗೂ ತುಂತುರು ನೀರಾವರಿ ಸೌಲಭ್ಯ ಸಿಗಲಿದೆ. ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಈ ಯೋಜನೆ ಬಗ್ಗೆ ಆಶ್ವಾಸನೆಗಳು ಕೇಳಿ ಬರುತ್ತಲೇ ಇದ್ದವು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ.
ಕೊನೆಗೂ ಸರ್ವೆ ಕಾರ್ಯ ಆರಂಭ ಈಗ ಕಾಲ ಕೂಡಿಬಂದಂತಿದೆ. ಬಹು ದಿನಗಳ ಬೇಡಿಕೆಯ ನಂತರ ಈಗ ಸರ್ವೆ ಕಾರ್ಯ ಆರಂಭವಾಗಿದೆ. ಸರ್ವೆ ಮುಗಿದ ಬಳಿಕ ವಿಸ್ತೃತವಾದ ಯೋಜನಾ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು. ಆನಂತರ ಸರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಇದೀಗ ಸರ್ವೆ ಕಾರ್ಯ ಆರಂಭವಾಗಿರೋದ್ರಿಂದ ಈ ಭಾಗದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿ ಧಾರವಾಡಕ್ಕೆ ಎಂಟ್ರಿ ಈ ಯೋಜನೆಯ ಪ್ರಮುಖ ಜಲಮೂಲ ತುಪ್ಪರಿ ಹಳ್ಳ. ಇದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕಿತ್ತೂರ ಬಳಿ ಹುಟ್ಟಿ, ಧಾರವಾಡ ತಾಲೂಕಿನ ಹಳೆ ತೇಗೂರ ಗ್ರಾಮದ ಹತ್ತಿರ ಧಾರವಾಡ ಜಿಲ್ಲೆ ಪ್ರವೇಶಿಸುತ್ತದೆ. ಹಳೆ ತೇಗೂರು, ಬೋಗೂರು, ಸಿಂಗನಹಳ್ಳಿ, ಅಗಸನಹಳ್ಳಿ, ಗರಗ, ಕೊಟಬಾಗಿ, ಲೋಕೂರ, ಉಪ್ಪಿನ ಬೆಟಗೇರಿ, ಕಲ್ಲೇ, ಕಬ್ಬೇನೂರ, ಹಾರೋಬೆಳವಡಿ ಗ್ರಾಮಗಳ ಪಕ್ಕದಲ್ಲಿ ಹರಿದು, ನವಲಗುಂದದ ಹತ್ತಿರ ಬೆಣ್ಣಿಹಳ್ಳ ಸೇರುತ್ತದೆ.
ಈ ತುಪ್ಪರಿ ಹಳ್ಳ ಒಟ್ಟು 102 ಕಿ.ಮೀ. ಉದ್ದ ಹೊಂದಿದ್ದು, 1123 ಚ. ಕಿ. ಮೀ. ಜಲಾನಯನದ ಪ್ರದೇಶ ಹೊಂದಿದೆ. ಮಳೆಗಾಲದಲ್ಲಿ 2.175 ಟಿ.ಎಂ.ಸಿ ನೀರನ್ನು ಇದರಿಂದ ಪಡೆಯಬಹುದು.
20 ಹಳ್ಳಿಗಳ ರೈತರಿಗೆ ವರದಾನ ಆದರೆ ಬ್ಯಾರೇಜುಗಳು ಶೀಥಿಲಾವಸ್ಥೆಯಲ್ಲಿರೋದ್ರಿಂದ ನೀರಿನ ಶೇಖರಣೆಯಾಗುತ್ತಿಲ್ಲ. ಹೀಗಾಗಿ ಈ ಬ್ಯಾರೇಜುಗಳನ್ನ ಪುನಃಶ್ಚೇತನಗೊಳಿಸಿ ಏತ ನೀರಾವರಿ ಮೂಲಕ ಹನಿ ಹಾಗೂ ತುಂತುರು ನೀರಾವರಿ ಯೋಜನೆಗಳನ್ನ ಕೈಗೊಂಡರೆ, ಧಾರವಾಡ ತಾಲೂಕಿನ 20 ಹಳ್ಳಿಗಳ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸಬಹುದು. ಹೀಗಾಗಿ ಧಾರವಾಡ ತಾಲೂಕಿನ ಜನರು ಅನೇಕ ವರ್ಷಗಳಿಂದ ಈ ಯೋಜನೆಯ ಜಾರಿಗೆ ಆಗ್ರಹಿಸುತ್ತಲೇ ಬಂದಿದ್ದರು. ಇದೀಗ ಈ ಯೋಜನೆಯ ಸರ್ವೆ ಕಾರ್ಯ ಆರಂಭವಾಗಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ -ನರಸಿಂಹಮೂರ್ತಿ ಪ್ಯಾಟಿ