ಇತ್ತೀಚೆಗಷ್ಟೇ ಮುಂಬೈ ಮೂಲದ ನಟ ಸಂದೀಪ್ ನಾಹರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿನ ಸುದ್ದಿ ಇಡೀ ಚಿತ್ರರಂಗ ಶಾಕ್ಗೆ ಒಳಗಾಗಿತ್ತು. ಈ ಕಹಿ ನೆನಪು ಮಾಸುವ ಮೊದಲೇ ಮತ್ತೋರ್ವ ನಟ ಆತ್ಮಹತ್ಯೆ ಶರಣಾಗಿದ್ದಾರೆ. ತಮಿಳು ಕಿರುತೆರೆ ನಟ ಇಂದ್ರಕುಮಾರ್ ಪೆರಂಬಲೂರಿನಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆಳೆಯನ ಮನೆಯಲ್ಲಿ ಇವರು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಇಂದ್ರಕುಮಾರ್ ಗೆಳೆಯರ ಜೊತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದರು. ಅಂದು ಅವರು ಖುಷಿ ಖುಷಿ ಆಗಿಯೇ ಇದ್ದರು. ಸಿನಿಮಾ ನೋಡಿ ಬಂದ ನಂತರ ಗೆಳೆಯನ ಮನೆಗೆ ತೆರಳಿದ್ದ ಅವರು ಒಂಟಿಯಾಗಿ ಉಳಿದುಕೊಂಡಿದ್ದರು. ಈತನಿಗಾಗಿ ಗೆಳೆಯರು ಹಾಗೂ ಕುಟುಂಬದವರು ಹುಡುಕಿದರೂ ಇಂದ್ರಕುಮಾರ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಗೆಳೆಯನ ಮನೆಯಲ್ಲಿ ಅವರು ಉಳಿದುಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಅಲ್ಲಿಗೆ ಹುಡುಕಲು ಪೊಲೀಸರು ತೆರಳಿದ್ದರು. ಈ ವೇಳೆ ಇಂದ್ರಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ.
ಸದ್ಯ, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸಾವಿಗೀಡಾದ ಜಾಗದಲ್ಲಾಗಲೀ, ಸಾಮಾಜಿಕ ಜಾಲತಾಣದಲ್ಲಾಗಲೀ ಯಾವುದೇ ಆತ್ಮಹತ್ಯೆ ನೋಟ್ ಸಿಕ್ಕಿಲ್ಲ. ಇಂದ್ರಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗೆಳೆಯರನ್ನು ಕರೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇಂದ್ರಕುಮಾರ್ ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಮದುವೆ ಆಗಿದ್ದು, ಒಂದು ಮಗು ಕೂಡ ಇದೆ. ಬಣ್ಣದ ಲೋಕದಲ್ಲಿ ಮತ್ತಷ್ಟು ಬೆಳೆಯಬೇಕು ಎನ್ನುವುದು ಇಂದ್ರಕುಮಾರ್ ಉದ್ದೇಶವಾಗಿತ್ತು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇನ್ನು, ಪತ್ನಿ ಜತೆಗೂ ಕೆಲ ಜಗಳಗಳು ಏರ್ಪಟ್ಟಿದ್ದವು ಎಂದು ತಿಳಿದು ಬಂದಿದೆ.
ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಈ ವೇಳೆ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿತ್ತು. ಇದರಿಂದ ಸಿನಿಮಾ ರಂಗದ ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಅನ್ಲಾಕ್ ಘೋಷಣೆ ಆದ ನಂತರ ಚಿತ್ರಮಂದಿರದ ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: Sandeep Nahar ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸಂದೀಪ್ ನಾಹರ್ ತನ್ನ ಡೆತ್ನೋಟ್ನಲ್ಲಿ ಬರೆದಿಟ್ಟಿದ್ರು ನೋವಿನ ಕಥೆ