ಮೈಸೂರು: ಗಡಿಭಾಗದಲ್ಲಿ ಕನ್ನಡ ಭಾಷೆ ಕಡಿಮೆಯಾಗಿ ಪರಭಾಷಿಕರ ಪ್ರಭಾವ ಹೆಚ್ಚಾಗುತ್ತಿದೆ ಅನ್ನೋ ಆರೋಪ ಇದೆ. ಇಂತಹ ಸಂದರ್ಭದಲ್ಲಿ ಕೇರಳ ಮೂಲದ ಅಮೀರ್ ಅಮ್ಜಾ ಎಂಬುವವರ ಕನ್ನಡ ಪ್ರೇಮ ಎಲ್ಲರ ಗಮನ ಸೆಳೆಯುತ್ತಿದೆ.
ಅಪರೂಪದ ಕನ್ನಡ ಪ್ರೇಮ
ಅಮೀರ್ ಅಮ್ಜಾ ಹುಟ್ಟಿದ್ದು ಕೇರಳದಲ್ಲಿ ಆದರೆ ಜೀವನದ ರಥ ಎಳೆಯುತ್ತಿರುವುದು ಕನ್ನಡ ನಾಡಿನಲ್ಲಿ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆಯ ಮುಸ್ಲಿಂ ಬ್ಲಾಕ್ ನಿವಾಸಿ ಅಮೀರ್ ಅಯ್ಯಂಗಾರ್ ಬಡಾವಣೆಯ ಕರ್ನಾಟಕ ಬ್ಯಾಂಕ್ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಕನ್ನಡ ನಾಡು, ನುಡಿಗೆ ತಮ್ಮದೇ ಆದ ರೀತಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಂಗಡಿಗೆ ಬಂದರೆ ನಾಲಿಗೆಗೆ ಬಿಸಿ ಬಿಸಿ ಚಹಾದ ಜೊತೆಗೆ ಮನಸಿಗೆ ಮುದ ನೀಡುವ ಕನ್ನಡದ ಸುಭಾಷಿತಗಳು ಕಾಣ ಸಿಗುತ್ತವೆ. ಇವರು ತಮ್ಮ ಚಹಾದ ಅಂಗಡಿಯ ತುಂಬೆಲ್ಲಾ ಕನ್ನಡ ಭಾಷೆಯ ಸರಳ ಸುಭಾಷಿತಗಳನ್ನು ಬರೆಸಿದ್ದಾರೆ.
ಅಮೀರ್ ಅವರು ಹೆಚ್.ಡಿ. ಕೋಟೆ ಪಟ್ಟಣದ ಉರ್ದು ಶಾಲೆಯಲ್ಲಿ ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ನಂತರ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೆ ಟೀ ಅಂಗಡಿ ಆರಂಭಿಸಿದರು. ಅಮೀರ್ ದೈನಂದಿನ ವ್ಯವಹಾರದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರತಿದಿನ ವಿವಿಧ ಕನ್ನಡ ದಿನಪತ್ರಿಕೆಯನ್ನು ಬಹಳ ಇಷ್ಟಪಟ್ಟು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
ಚಹಾ ಜೊತೆ ಕನ್ನಡ ಪದಗಳ ಸ್ವಾದ:
ಅಷ್ಟೇ ಅಲ್ಲ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ಸುಭಾಷಿತ, ನುಡಿಮುತ್ತುಗಳು, ಮಹನೀಯರ ಸಂದೇಶಗಳನ್ನು ತೆಗೆದುಕೊಂಡು ಅದನ್ನು ಮುದ್ರಿಸಿ ತಮ್ಮ ಅಂಗಡಿಗಳಲ್ಲಿ ಅಂಟಿಸಿದ್ದಾರೆ. ಕಳೆದ 25 ವರ್ಷಗಳಿಂದ ಇವರ ಕನ್ನಡ ಸೇವೆ ನಿರಂತರವಾಗಿ ನಡೆದಿದೆ. ಅಂಗಡಿಗೆ ಟೀ ಕುಡಿಯಲು ಬರುವ ನೂರಾರು ಗ್ರಾಹಕರು ಈ ಸಂದೇಶಗಳನ್ನು ಓದಲಿ ಎನ್ನುವುದು ಇವರ ಉದ್ದೇಶ. ಗ್ರಾಹಕರು ಇವರು ಮುದ್ರಿಸಿರುವ ಸಂದೇಶಗಳನ್ನು ಓದುತ್ತಾ ಟೀ ಕುಡಿಯುತ್ತಾರೆ. ಜತೆಗೆ ಅಮೀರ್ ಅವರ ಕನ್ನಡ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ʻನಾನು 15 ವರ್ಷದವನಾಗಿದ್ದಾಗ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಜೊತೆಗೆ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡೆ. ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಕಳೆದ 25 ವರ್ಷಗಳಿಂದ ನನ್ನ ಅಂಗಡಿಯಲ್ಲಿ ಕನ್ನಡದ ನುಡಿ ಮುತ್ತುಗಳು, ಸಂದೇಶಗಳನ್ನು ಮುದ್ರಿಸಿ, ಗೋಡೆಗಳ ಮೇಲೆ ಅಂಟಿಸಿದ್ದೇನೆ. ಬರುವ ಜನರು ಆ ಸಂದೇಶಗಳ ಮಹತ್ವ ಅರಿತುಕೊಳ್ಳಲಿ ಎಂಬುದೇ ನನ್ನ ಉದ್ದೇಶ. ಜನರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಖುಷಿಯಾಗುತ್ತದೆ. ನನಗೆ ನನ್ನ ಮೇಲೆ ಅಭಿಮಾನ ಮೂಡುತ್ತದೆ. ನನ್ನ ಕೊನೆ ಉಸಿರು ಇರುವವರೆಗೂ ಇದನ್ನು ನಾನು ಮುಂದುವರಿಸುತ್ತೇನೆ ಎಂದು ಟೀ ಅಂಗಡಿ ವ್ಯಾಪಾರಿ ಅಮೀರ್ ಹಮ್ಜ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ್ರು.
ಕೇವಲ ನವೆಂಬರ್‌ನಲ್ಲಿ ಕನ್ನಡದ ಕಹಳೆ ಮೊಳಗಿಸಿ ಸುಮ್ಮನಾಗುವ ಎಷ್ಟೋ ಸ್ವಯಂ ಘೋಷಿತ ಕನ್ನಡ ಪ್ರೇಮಿಗಳಿಗೆ ಅಮೀರ್ ಅವರ ಕಾರ್ಯ ಮಾದರಿಯಾಗಬೇಕು. ಕನ್ನಡಾಂಬೆಯ ನಿತ್ಯೋತ್ಸವ ನಿರಂತರವಾಗಿ ನಡೆಯಬೇಕು. ಇದರ ಜೊತೆಗೆ ನಾವು ನವೆಂಬರ್ ಕನ್ನಡಿಗರಲ್ಲ ಎಂದೆಂದಿಗೂ ಕನ್ನಡಿಗರು ಅನ್ನೋ ಭಾವವನ್ನು ಮೂಡಿಸಿಕೊಂಡು ಕನ್ನಡ ಭಾಷೆ ನೆಲ ಜಲದ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕು. ಆಗ ಮಾತ್ರ ಕನ್ನಡಾಂಬೆಯ ನೆಲದಲ್ಲಿ ಹುಟ್ಟಿದ ಋಣವನ್ನು ತೀರಿಸಲು ಸಾಧ್ಯ. -ರಾಮ್
Published On - 2:32 pm, Sun, 1 November 20