ಪ್ರಪಂಚದ ಎಲ್ಲಾ ಮಾಜಿ ಆಟಗಾರರು ಹೇಳುವಂತೆ, ಆಸ್ಟ್ರೇಲಿಯಾದ ಸರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ಗಳಲ್ಲೊಬ್ಬರಾಗಿರುವ ಗ್ಲೆನ್ ಮೆಕ್ಗ್ರಾ ಕೂಡ ಅದನ್ನೇ ಹೇಳುತ್ತಿದ್ದಾರೆ, ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಸ್ಟ್ರೇಲಿಯಾ ವಿರುದ್ಧ ಪ್ರಸಕ್ತ ಸರಣಿಯ ಕೊನೆಯ ಮೂರು ಟೆಸ್ಟ್ಗಳಲ್ಲಿ ಆಡದಿರುವುದು ಭಾರತದ ಟೀಮಿನ ಪ್ರದರ್ಶನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಈಗ ಡೌನ್ಅಂಡರ್ ಪ್ರವಾಸದಲ್ಲಿರುವ ಭಾರತ ಇದಕ್ಕೆ ಮೊದಲು ಆ ದೇಶದ ಪ್ರವಾಸ ಮಾಡಿದ ತಂಡಗಳಿಗಿಂತ ಹೆಚ್ಚು ಆತ್ಮವಿಶ್ವಾಸದಿಂದ ಕೂಡಿದೆ ಮತ್ತು ಸರಣಿ ಗೆಲ್ಲುವ ಮನೋಬಲವನ್ನು ಹೊಂದಿದೆ ಎಂದು ಆಪ್ತವಲಯದಲ್ಲಿ ‘ಪಿಜನ್’ ಎಂದು ಕರೆಸಿಕೊಳ್ಳುತ್ತಿದ್ದ ಮೆಕ್ಗ್ರಾ ಹೇಳುತ್ತಾರೆ.
‘‘ಯಾವುದೇ ಭೀತಿಯಿಲ್ಲದೆ ಅಸ್ಟ್ರೇಲಿಯಾದಲ್ಲಿ ಕಾಲಿಟ್ಟಿರುವ ಕೊಹ್ಲಿಯ ತಂಡದ ಆತ್ಮವಿಶ್ವಾಸ ಮುಗಿಲೆತ್ತರದಲ್ಲಿದೆ. ಕಳೆದ ಬಾರಿ ಇಲ್ಲಿ ನಡೆದ ಸರಣಿಯನ್ನು ಈ ತಂಡ 2-1 ಅಂತರದಿಂದ ಗೆದ್ದಿರುವುದು ಇದಕ್ಕೆ ಕಾರಣ. ನಾನಂದುಕೊಳ್ಳುವ ಹಾಗೆ, ಕೊಹ್ಲಿ ಒಬ್ಬ ನಾಯಕನಾಗಿ ಮಾಡಿರುವ ಅತ್ಯುತ್ತಮ ಸಾಧನೆ ಇದು. ಆದರೆ ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಆ ಸರಣಿಯಲ್ಲಿ ಬಾಲ್ ಟ್ಯಾಪರಿಂಗ್ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಸಸ್ಪೆಂಡ್ ಆಗಿದ್ದ ದೇವಿಡ್ ವಾರ್ನರ್ ಮತ್ತು ಸ್ಟಿವೆನ್ ಸ್ಮಿತ್ ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಅತಿಥೇಯ ಟೀಮಿನ ಬ್ಯಾಟಿಂಗ್ ದುರ್ಬಲಗೊಂಡಿತ್ತು. ಈ ಬಾರಿ ಅವರಿಬ್ಬರೂ ಆಡುತ್ತಾರೆ ಮತ್ತು ಮೊದಲ ಟೆಸ್ಟ್ ಆಡಿದ ನಂತರ ಕೊಹ್ಲಿ ಸ್ವದೇಶಕ್ಕೆ ಮರಳಲಿದ್ದಾರೆ. ಹಾಗಾಗಿ ಕಳೆದ ಬಾರಿಯ ಫಲಿತಾಂಶವನ್ನು ಪುನರಾವರ್ತಿಸಲು ಇಂಡಿಯಾ ಬಹಳ ಶ್ರಮಪಡಬೇಕಾಗುತ್ತದೆ,’’ ಎಂದು ಮೆಕ್ಗ್ರಾ ಹೇಳಿದ್ದಾರೆ.
‘‘ಕೊಹ್ಲಿ ಒಬ್ಬ ಕ್ಲಾಸ್ ಮತ್ತು ಕ್ವಾಲಿಟಿ ಆಟಗಾರ, ಅವರ ಸೇವೆಯನ್ನು ಟೀಮ್ ಇಂಡಿಯಾ ಎರಡು ವಿಧದಲ್ಲಿ ಮಿಸ್ ಮಾಡಿಕೊಳ್ಳಲಿದೆ–ಬ್ಯಾಟ್ಸ್ಮನ್ ಮತ್ತು ನಾಯಕನಾಗಿ. ಕೊಹ್ಲಿಯ ಫೀಲ್ಡ್ ಪ್ಲೇಸಿಂಗ್ ಅಸಾಮಾನ್ಯವಾಗಿರುತ್ತದೆ. ಅವರ ಅನುಪಸ್ಥಿತಿಯಲ್ಲಿ ಬೇರೆ ಆಟಗಾರರರು ಹೆಚ್ಚಿನ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹಾಗೆ ನೋಡಿದರೆ. ಕೊಹ್ಲಿ ಹೊರತಾಗಿಯೂ, ಇಂಡಿಯಾ ಟೀಮಿನ ಬ್ಯಾಟಿಂಗ್ ಸದೃಢವಾಗಿದೆ, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರಾ, ಅಜಿಂಕಾ ರಹಾನೆ ಮತ್ತು ಕೆಎಲ್ ರಾಹುಲ್ ಸಹ ಕ್ವಾಲಿಟಿ ಆಟಗಾರರೇ,’’ ಎಂದು ಮೆಕ್ಗ್ರಾ ಹೇಳಿದ್ದಾರೆ.
ಪೂಜಾರಾ ಹೆಚ್ಚು ಕಡಿಮೆ ಒಂದು ವರ್ಷದಿಂದ ಸ್ಫರ್ಧಾತ್ಮಕ ಕ್ರಿಕೆಟ್ ಆಡಿಲ್ಲವಾದ್ದರಿಂದ, ಅವರು ಕಳೆದ ಸಲದಂತೆ ರನ್ ಗಳಿಸಲು ಕಷ್ಟಪಡಬೇಕಾಗಬಹುದೆಂದು ಮೆಕ್ಗ್ರಾ ಹೇಳುತ್ತಾರೆ.
‘‘ಪೂಜಾರಾ, 2018-19 ಸರಣಿಯಲ್ಲಿ ಚಾಂಪಿಯನ್ನಂತೆ ಬ್ಯಾಟ್ ಮಾಡಿ 74.42 ಸರಾಸರಿಯಲ್ಲಿ 521 ರನ್ ಗಳಿಸಿದ್ದರು. ಅವರು ಟೋಟಲ್ಲೀ ಡಿಫರೆಂಟ್ ಕೆಲಿಬರ್ನ ಆಟಗಾರ. ಬೌಲರ್ ಮೇಡನ್ ಓವರ ಬೌಲ್ ಮಾಡಿದರೆ, ಇತರ ಆಟಗಾರರಂತೆ ಮರುಓವರ್ನಲ್ಲಿ ರನ್ ಗಳಿಸಲೇಬೇಕೆಂಬ ಒತ್ತಡಕ್ಕೆ ಅವರ ಸಿಕ್ಕಿಕೊಳ್ಳುವುದಿಲ್ಲ. ಕ್ರೀಸ್ ಮತ್ತು ಮೈದಾನ ತನಗೆ ಸೇರಿದ ಸಾಮ್ರಾಜ್ಯವೆನ್ನುವ ರೀತಿಯಲ್ಲಿ ಅವರು ಆಡುತ್ತಾರೆ. ಅನಾವಶ್ಯಕ ಒತ್ತಡಕ್ಕೆ ಅವರು ಒಳಗಾಗುವುದಿಲ್ಲ. ಆದರೆ, ಅವರಿಗೆ ಈ ಬಾರಿ ಮ್ಯಾಚ್ ಪ್ರ್ಯಾಕ್ಟೀಸಿನ ಕೊರತೆ ಇರುವುದರಿಂದ ಕಳೆದ ಸಲದಂತೆ ರನ್ ಗಳಿಸಲಾರರೇನೋ,’’ ಎಂದು ಅವರು ಹೇಳಿದ್ದಾರೆ.
ಟೀಮ್ ಇಂಡಿಯಾದ ವೇಗದ ಬೌಲಿಂಗ್ ಹಿದೆಂದಿಗಿಂತಲೂ ಶಕ್ತವಾಗಿದೆ ಎನ್ನುವುದನ್ನು ಮೆಕ್ಗ್ರಾ ಒಪ್ಪಿಕೊಳ್ಳುತ್ತಾರೆ. ಕಳೆದ ಸರಣಿಯಲ್ಲಿ 21 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಪ್ರಸಕ್ತವಾಗಿ ವಿಶ್ವದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರೆಂದು ಹೇಳುವ ಮೆಕ್ಗ್ರಾ, ಮೊಹಮ್ಮದ್ ಶಮಿಯವರ ಕಂಟ್ರೋಲ್ ಮತ್ತು ಸ್ವಿಂಗ್, ಉಮೇಶ್ ಯಾದವ್ ಅವರ ಕಚ್ಚಾ ವೇಗ ಮತ್ತು ಬುಮ್ರಾ ಅವರ ನಿಖರತೆ ಆಸ್ಸೀ ಬ್ಯಾಟ್ಸ್ಮನ್ಗಳನ್ನು ಪರದಾಡುವಂತೆ ಮಾಡಲಿದೆಯೆಂದು ಹೇಳುತ್ತಾರೆ.