ಭಾರತದಲ್ಲಿ ಪ್ರಜಾಪ್ರಭುತ್ವ ಹೋಯ್ತು ಎಂದ ವಿ-ಡೆಮ್ ವರದಿ ತಪ್ಪು ಯಾಕೆ ಗೊತ್ತಾ?

| Updated By: guruganesh bhat

Updated on: Mar 12, 2021 | 7:58 PM

ಸ್ವೀಡನ್ನಿನ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ತಯಾರಿಸಿದ 2020 ರ ಪ್ರಜಾಪ್ರಭುತ್ವದ ಮೇಲಿನ ವರದಿ, ಭಾರತಕ್ಕೆ ನಿರಂಕುಶತ್ವ ಕಾಲಿಟ್ಟಿದೆ ಎಂದು ಹೇಳಿದೆ. ಇದು ಎಷ್ಟು ನಿಜ ಎಂಬ ಕುರಿತಾದ ವಿಶ್ಲೇಷಣೆ ಇಲ್ಲಿದೆ.

ಭಾರತದಲ್ಲಿ ಪ್ರಜಾಪ್ರಭುತ್ವ ಹೋಯ್ತು ಎಂದ ವಿ-ಡೆಮ್ ವರದಿ ತಪ್ಪು ಯಾಕೆ ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸತ್ ಭವನ
Follow us on

ದೇಶದ ಅತೀ ದೊಡ್ಡ ಇಂಗ್ಲಿಷ್ ದಿನ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾದ ಗುರುವಾರದ ಆವೃತ್ತಿಯಲ್ಲಿ ದೇಶದ ಪ್ರಧಾನ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ಅವರು ಒಂದು ಅಗ್ರ ಲೇಖನ ಬರೆದು, ಹೇಗೆ ಪಾಶ್ಚಾತ್ಯ ರಾಷ್ಟ್ರಗಳು ನಮ್ಮಂಥ ದೇಶದ ಅನೇಕ ಬೆಳವಣಿಗೆಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ತಮ್ಮ ದೃಷ್ಟಿಕೋನವನ್ನು ಹೊಂದುತ್ತವೆ. ಅಷ್ಟೇ ಅಲ್ಲ, ಆ ದೇಶಗಳು ತಮ್ಮ ಹಿತಾಸಕ್ತಿ ಬಿಟ್ಟು ನಮ್ಮ ದೇಶದ ಅಭಿಪ್ರಾಯಕ್ಕೆ ಕವಡೆ ಕಿಮ್ಮತ್ತು ಕೊಡಲ್ಲ ಎಂದು ಬರೆದಿದ್ದಾರೆ. ಅಚಾನಕ್ ಆಗಿ ಅದೇ ದಿನ ಸ್ವೀಡನ್​ನ ವೆರೈಟೀಸ್ ಆಫ್ ಡೆಮಾಕ್ರಸಿ ಎಂಬ ಪ್ರಜಾಪ್ರಭುತ್ವವನ್ನು ಅಧ್ಯಯನ ಮಾಡುವ ಸಂಸ್ಥೆ ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡುತ್ತ, ಭಾರತದ ಬಗ್ಗೆ ಕೆಂಪಕ್ಷರದಲ್ಲಿ ಶರಾ ಬರೆದಿದೆ. ಆ ಸಂಸ್ಥೆಯ ಸಂಶೋಧನಾಕಾರರ ಪ್ರಕಾರ, ಭಾರತ ಈಗ ಅಧಿಕೃತವಾಗಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಬದಲಾಗಿ ಚುನಾವಣೆ ಇರುವ ನಿರಂಕುಶ ಪ್ರಭುತ್ವ ಇರುವ ದೇಶವಾಗಿ ಬದಲಾಗಿದೆ.

ಈ ವರದಿ ಬರುತ್ತಿದ್ದಂತೆ, ದೇಶದ ಅನೇಕ ಬುದ್ಧಿವಂತರು, ಪ್ರಜ್ಞಾವಂತರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷವನ್ನು ಜಾಡಿಸಿದ್ದಾರೆ. ಈ ವಾರದ ಕೊನೆಯಲ್ಲಿ ಮತ್ತು ಮುಂದಿನ ವಾರದ ಆರಂಭದಲ್ಲಿ ಅಗ್ರ ಲೇಖನ ಬರೆಯುವ ದೇಶದ ಅಗ್ರಮಾನ್ಯ ಲೇಖಕರು ಮತ್ತು ಅಂಕಣಕಾರರು ತಮ್ಮದೇ ರೀತಿಯಲ್ಲಿ ಈ ವರದಿಯ ಹೂರಣವನ್ನು ಬಿಚ್ಚಿಟ್ಟು ದೇಶದ ಜನರನ್ನು ಎಚ್ಚರಿಸುವ ಮತ್ತು ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಆರಿಸಿ, ಹೇಗೆ ದೇಶವನ್ನು ಬನಾನಾ ರಿಪಬ್ಲಿಕ್ (ಅಂದರೆ ಕಾನೂನು ಮತ್ತು ಯಾವ ನೈತಿಕ ಮೌಲ್ಯ ಇಲ್ಲದ ಪ್ರಜಾಸತ್ತಾತ್ಮಕ ರಾಷ್ಟ್ರ ಎಂದು ಹೇಳುವ ಮಾತು) ಮಾಡಿದ್ದಾರೆ ಎಂದು ಹೇಳಲಿದ್ದಾರೆ. ಇದರಿಂದ ಮುಂದೆ ಯಾವ ರೀತಿಯ ಅಪಾಯ ನಮಗೆಲ್ಲಾ ಕಾದಿದೆ ಎಂದು ಭವಿಷ್ಯ ಬರೆಯಲಿದ್ದಾರೆ .

ಆ ವರದಿಯಲ್ಲಿ ಏನಿದೆ?
ಹಾಗೆ ನೋಡಿದರೆ, ವಿಶ್ವದ ಪ್ರಜಾಪ್ರಭುತ್ವವನ್ನು ಅಧ್ಯಯನ ಮಾಡುತ್ತ ಬಂದಿರುವ ಸ್ವೀಡನ್ನಿನ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಅವರ ಅಧ್ಯಯನದಲ್ಲಿ ಹೊಸದೇನೂ ಇಲ್ಲ. ನಮ್ಮ ಅಗ್ರಗಣ್ಯ ಬರಹಗಾರಾದ ಪ್ರತಾಪ್ ಬಾನು ಮೆಹ್ತಾ ಮತ್ತು ರಾಮಚಂದ್ರ ಗುಹಾ ಅಂತವರು ಇಷ್ಟು ದಿನ ಏನು ಹೇಳಿದ್ದಾರೋ ಅದನ್ನೇ ಪುನರುಚ್ಚರಿಸಿದೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಎನ್​ಡಿಎ ಸರಕಾರ ಹೇಗೆ ಮೊಳೆ ಹೊಡಿದು ಮುಗಿಸಿದೆ, ಎನ್​ಜಿಒ ವಲಯವನ್ನು ಹೇಗೆ ಮುಗಿಸಲು ಹುನ್ನಾರ ಮಾಡಿದೆ, ಮಾತೆತ್ತಿದವರ ವಿರುದ್ಧ ದೇಶದ್ರೋಹದ ಕೇಸು ಹಾಕಿ ಜೈಲಿಗೆ ಅಟ್ಟುತ್ತಿದ್ದಾರೆ. ಇವೆಲ್ಲದರ ಬಗ್ಗೆ ಈ ಅಂಕಣಕಾರರು ಈಗಾಗಲೇ ತುಂಬಾ ಬರೆದಿದ್ದಾರೆ. ಈ ವಿಚಾರಗಳನ್ನು ಅಂಕಿ ಅಂಶದೊಂದಿಗೆ ಪ್ರಸ್ತುತಪಡಿಸಿ ವಿ-ಡೆಮ್ ಸಂಸ್ಥೆ ಭಾರತವನ್ನು ಆಳುತ್ತಿರುವ ಬಿಜೆಪಿ ಸರಕಾರದ ವಿರುದ್ಧ ತನ್ನ ತೀರ್ಪು ನೀಡಿ ದಕ್ಷಿಣ ಏಷಿಯಾದಲ್ಲಿ ಪ್ರಜಾಪ್ರಭುತ್ವಕ್ಕೆ ಕರಿಮೋಡ ಕವಿಯಿತು ಎಂದು ಹೇಳಿದೆ. ಒಂದು ಹಂತದಲ್ಲಿ ಭಾರತವನ್ನು ಪಕ್ಕದ ಪಾಕಿಸ್ತಾನಕ್ಕೂ ಮತ್ತು ಆಫ್ರಿಕಾದ ಅನೇಕ ದೇಶಗಳ ಜೊತೆ ಹೋಲಿಸಿ ಭಾರತವನ್ನು ಆಳುತ್ತಿರುವ ಎನ್ಡಿಎಗೆ ಬೆವರಿಳಿಸಲು ಮುಂದಾಗಿದೆ. ಈ ವರದಿಯನ್ನು ಓದಿದರೆ ಯಾರಿಗಾದರೂ ಹಾಗೆ ಅನ್ನಿಸದಿರದು. ಇಂಥ ವರದಿಗಳೇ ಹಾಗೆ: ಇಂಗ್ಲೀಷಿನ ಪ್ರಭುತ್ವ ಭಾಷೆ, ಸಂಖ್ಯಾಶಾಸ್ತ್ರದ ಅನೇಕ ಅಂಕಿ ಸಂಖ್ಯೆಯನ್ನು ವಿಶ್ಲೇಷಿಸುವ ಸಾಧನಗಳನ್ನು ಬಳಸಿ ನಮ್ಮ ತಲೆ ಮೇಲೆ ಹೊಡೆಯುವಂತಿರುತ್ತವೆ ಈ ವರದಿಗಳು.

ಈ ವರದಿ ದೇಶದ ಅನೇಕ ಬುದ್ಧಿವಂತರು, ಪ್ರಜ್ಞಾವಂತರು  ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷವನ್ನು ಜಾಡಿಸಿದ್ದಾರೆ.

ಸಂಶೋಧಕನಿಗೆ ಏಳುವ ಪ್ರಶ್ನೆಗಳು?
ಮೊದಲೇ ಹೇಳಿಬಿಡುವುದು ಒಳ್ಳೆಯದು. ಈ ವರದಿ ವಿರುದ್ಧ ಅಂತರಾಷ್ಟ್ರೀಯ ಪಿತೂರಿ ಇದೆ. ಇದರ ಹಿಂದೆ ಅನೇಕ ಕಾಣದ ಕೈಗಳು ಕೆಲಸ ಮಾಡಿವೆ. ಭಾರತದಲ್ಲಿ ಆಡಳಿತದಲ್ಲಿ ಇರುವ ಆಡಳಿತ ಪಕ್ಷವನ್ನು ಮುಗಿಸಲು ಹೊಂಚು ಹಾಕುತ್ತಿರುವವರ ಜೊತೆ ಈ ಸಂಸ್ಥೆ ಕೈ ಜೋಡಿಸಿದೆ ಎಂದು ಬಿಜೆಪಿಯ ವಕ್ತಾರರು ಹೇಳುವ ಸಾಧ್ಯತೆ ಹೆಚ್ಚು. ಅದಕ್ಕೆ ಯಾವ ಸಾಕ್ಷಾಧಾರಗಳು ಇಲ್ಲದ ಕಾರಣ ಆ ಕುರಿತು ಚರ್ಚೆ ಈಗ ಅನವಶ್ಯ.

ಆದರೆ, ಚರ್ಚೆ ಆಗಲೇ ಬೇಕಾಗಿದ್ದುದು ಈ ಸಂಶೋಧನೆಯ ಹಿಂದಿರುವ ಸಂಶೋಧನಾ ವಿಧಾನ (methodology) ಕುರಿತು ಮತ್ತು ಇಂತಹ ಸಂಶೋಧನಾ ವಿಧಾನ ಎಂತಹ ತಪ್ಪು ಅಭಿಪ್ರಾಯ ನೀಡಲು ಸಾಧ್ಯ ಎಂಬುದು. ಪಿಎಚ್ಡಿಯನ್ನು ಮಾಡುವ ಸಂಶೋಧಕರಿಗೆ ಮೊದಲು ಹೇಳುವ ಪಾಠವೆಂದರೆ, ನೀವು ಬರೀ ದಿನಪತ್ರಿಕೆ ಅಥವಾ ವಾರಪತ್ರಿಕೆಗಳನ್ನೇ ಆಕರವಾಗಿಟ್ಟುಕೊಂಡು ಸಂಶೋಧನೆ ಮಾಡುವಂತಿಲ್ಲ. ಆದರೆ, ಇಲ್ಲಿ ಆಗಿರುವುದು ಅದೇ. ಇದು ಮೂಲಭೂತವಾಗಿ ಕಾಣುವ ಅತಿದೊಡ್ಡ ಸಮಸ್ಯೆ. ದಿ ಇಕಾನಮಿಸ್ಟ್​ನಂತಹ ಪತ್ರಿಕೆ ಎಡಪಂಥೀಯ ವಾದವನ್ನು ನೆಚ್ಚಿಕೊಂಡು ಭಾರತವನ್ನು ಯಾವತ್ತು ಕೆಟ್ಟದಾಗಿ ಬಿಂಬಿಸುವುದು ಸಾಮಾನ್ಯವಾಗಿರುವಾಗ, ಇಂತ ಪತ್ರಿಕೆಗಳ ಮಾಹಿತಿ ಆಧರಿಸಿ ತಯಾರಿಸಿದ ವರದಿ ಹೇಗೆ ಪ್ರಬುದ್ಧ ಎಂದು ನಂಬುವುದು? ಹಾಗಂತ ಅವರು ಬೇರೆ ಮಾಹಿತಿ ಬಳಸಿಲ್ಲ ಅಂತಲ್ಲ. ಉದಾಹರಣೆಗೆ ಕೇಂದ್ರ ಸರಕಾರದ ಗೃಹ ಖಾತೆಯ ಅಂತರ್ಜಾಲದಿಂದ ಅನೇಕ ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಆದರೆ, ಈ ವರದಿ ತಯಾರಿಸಿದವರು ಒಂದಂಶವನ್ನು ಬುದ್ಧಿವಂತಿಕೆಯಿಂದ ಮರೆ ಮಾಚಿದ್ದಾರೆ. ಉದಾಹರಣೆಗೆ ದೇಶದ್ರೋಹದ ಕೇಸಿನ ಇತಿಹಾಸ ನೋಡಿ. ದೇಶದ್ರೋಹದ ಕೇಸುಗಳ ಗಣನೆ ಮಾಡಿ ಅದನ್ನು ಬೇರೆಯ ತಲೆಬರಹದಡಿ ಪ್ರಕಟಿಸಲು ಶುರುಮಾಡಿದ್ದೇ 2013-14 ರಿಂದ. ಸ್ವಾಭಾವಿಕವಾಗಿ ಆ ನಂತರ ದೇಶದ್ರೋಹದ ಕೇಸಿನ ವಿವರ ಸಿಗುತ್ತದೆ. ಅದಕ್ಕಿಂತ ಮೊದಲು ಆ ವಿವರ ಸಿಗದಿರುವ ಕಾರಣಕ್ಕಾಗಿ, ಯಾರೂ ಕೂಡ ಮೊದಲಿನ ಸ್ಥಿತಿಗತಿ ಕುರಿತು ಹೋಲಿಸಲಾಗದು. ಒಂದು ಕಾಲಘಟ್ಟದಲ್ಲಿನ ಅಂಕಿ ಅಂಶ ಮಾತ್ರ ಇಟ್ಟುಕೊಂಡು ಈ ರೀತಿಯ ವರದಿ ಬರೆದರೆ ಸ್ವಾಭಾವಿಕವಾಗಿ ಭಾರತ ಬನಾನಾ ರಿಪಬ್ಲಿಕ್ ಆಗಿಯೇ ಕಾಣುತ್ತದೆ.

ಶಾಕಿಂಗ್ ವಿವರ ಏನು ಗೊತ್ತಾ?
ಚರ್ಚೆಗೋಸ್ಕರ (for argument sake) ಒಂದು ಕ್ಷಣ ಭಾರತದ ಸ್ಥಿತಿ ಹದಗೆಟ್ಟು ಹೋಗಿದೆ ಎಂದು ಹೇಳೋಣ. ಹಾಗಾದರೆ ವಿಶ್ವದ ಎಲ್ಲ ರಾಷ್ಟ್ರಗಳನ್ನು ಸಮಾನವಾಗಿ ಅಧ್ಯಯನ ಮಾಡುತ್ತೇವೆಂದು ಹೇಳುವ ಈ ಸಂಸ್ಥೆಯ ಸಂಶೋಧಕರು ಅಮೇರಿಕೆ ಬಗ್ಗೆ ಮಾತನಾಡದಿರುವುದು. ಆ ವಿಚಾರ ಇಲ್ಲಿ ಯಾಕೆ ಎಂದಿರಾ? ಇಲ್ಲಿಯೇ ಇದೆ ಈ ಸಂಶೋಧನಾ ವರದಿಯ ಹಿಕ್ಮತ್ತು. ಕಳೆದ ನಾಲ್ಕು ವರ್ಷದಲ್ಲಿ ಅಮೇರಿಕೆಯನ್ನು ಆಳಿದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ಜಗತ್ತಿಗೆ ಅವಮಾನ ಮಾಡುವಂತೆ ತಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಮಾನ ಕಳೆದರು. ತನ್ನ  2020ರ ವರದಿಯಲ್ಲಿ ವಿ-ಡೆಮ್  ಸಂಸ್ಥೆ ಯಾವುದಾದರೂ ದೇಶದ ಬಗ್ಗೆ ಬರೆಯಬೇಕಾಗಿದ್ದರೆ ಅದು ಅಮೇರಿಕೆ ಬಗ್ಗೆ ಬರೆಯಬೇಕಿತ್ತು.  ಟ್ರಂಪ್​ ಪತ್ರಕರ್ತರ ಮೇಲೆ ಬ್ಯಾನ್ ಹೇರಿಸಿದರು. ಅವರ ಆಡಳಿತದ ಕಾಲದಲ್ಲಿ ಬ್ಲಾಕ್ ಲೈವ್ಸ್ ಮಾಟರ್ (Black lives matter) ಎನ್ನುವ ಚಳುವಳಿ ನಡೆದೇ ಹೋಯಿತು. ಅದಕ್ಕಿಂತ ದೊಡ್ಡ ಕಪ್ಪು ಚುಕ್ಕೆ ಪ್ರಜಾಪ್ರಭುತ್ವಕ್ಕೆ ಬೇರೆ ಬೇಕೆ? ಇದರ ಬಗ್ಗೆ ಒಂದು ಸಾಲನ್ನು ಈ ವರದಿಯಲ್ಲಿ ಹೇಳಿಲ್ಲ. ಇದು ಶಾಕಿಂಗ್ ಅಲ್ಲದೇ ಇನ್ನೇನು. ಅಮೇರಿಕೆ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ. ಯಾಕೆಂದರೆ ಅಲ್ಲಿ ಈಗ ಆ ಆಡಳಿತ ಇಲ್ಲ ಎಂದು ಈ ಸಂಸ್ಥೆ ಹೇಳಿಕೊಳ್ಳಬಹುದು. ಅದು ಒಂದು ಪ್ರೌಢ ವಾದವಾಗಲ್ಲ. ಅಷ್ಟೇ ಅಲ್ಲ, ಇದು ಪಲಾಯನವಾದವಾಗಬಹುದು. ಪ್ರಜಾಪ್ರಭುತ್ವ ಅಧ್ಯಯನದ ಹಲವಾರು ಮಾನದಂಡಗಳ ಜೊತೆಗೆ, ಅಮೇರಿಕ ಮತ್ತು ಇಂಗ್ಲೆಂಡ್ನಲ್ಲಿ ಇವತ್ತಿಗೂ ಜೀವಂತವಾಗಿರುವ ಜನಾಂಗೀಯ ಭೇದ (racial discrimination) ಎಂಬ ಮಾನದಂಡವನ್ನು ಬಳಸದೇ ಇರೋದು ಮತ್ತೊಂದು ಶಾಕಿಂಗ್ ವಿಚಾರ.

ಇದು ಪ್ರಜಾಪ್ರಭುತ್ವ ಅಧ್ಯಯನದಲ್ಲಿ ಮಾತ್ರ ಈ ರೀತಿ ನಡೆಯುತ್ತದೆ ಎಂದು ನಾವು ತಿಳಿದುಕೊಂಡರೆ, ಅದು ದೊಡ್ಡ ತಪ್ಪಾಗುತ್ತದೆ. ಭೃಷ್ಠಾಚಾರವನ್ನು ಅಧ್ಯಯನ ಮಾಡುವ ಟ್ರಾನ್ಸಫ್ರೆನ್ಸಿ ಇಂಟರ್ನ್ಯಾಶನಲ್ ಎಂಬ ಸಂಸ್ಥೆ, ಅಧ್ಯಯನ ಮಾಡಲು ಬಳಸು ಮಾನದಂಡಗಳಲ್ಲಿ ಕೂಡ ಇಂತದೇ ವೈರುಧ್ಯವನ್ನು ಕಾಣಬಹುದು (ಈ ವಿಚಾರ ತುಂಬಾ ದೀರ್ಘವಾಗಿರುವುದರಿಂದ ಇಲ್ಲ ಇಷ್ಟೇ ಮಾಹಿತಿ ಸಾಕು). ಈ ಸುದ್ದಿ ವಿಶ್ಲೇಷಣೆಯ ಪ್ರಾರಂಭದಲ್ಲಿ ದೇಶದ ಪ್ರಧಾನ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ಬರೆದ ವಿಚಾರಕ್ಕೆ ಪುನಃ ಹಿಂದಿರುರೋಣ. ಅವರು ಬರೆದ ವಿಚಾರಗಳನ್ನು ಈ ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ಈಗ ಅರ್ಥವಾಗುತ್ತದೆ: ದಾಲ್ ಮೇ ಕುಚ್ ಕಾಲಾ ಹೈ. ಈ ವರದಿ ಅಪೂರ್ಣ ಮತ್ತು ತಪ್ಪು ಮಾಹಿತಿ ಆಧರಿಸಿ ತಯಾರಿಸಿದ ವರದಿ ಎಂದು. ಹಾಗಂತ ನಾವು ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಿಲ್ಲಿಸಬೇಕೆ? ಖಂಡಿತ ಇಲ್ಲ. ಆಥವಾ ಪ್ರಜಾಪ್ರಭುತ್ವವನ್ನು ಬಲಪಡಿಸುವ ಹೊಸ ವಿಚಾರಕ್ಕೆ ಪೂರ್ಣ ರಜಾ ಕೊಡಬೇಕೆ? ಇಲ್ಲಿ. ಚರ್ಚೆ ನಮ್ಮಲ್ಲಿಯೇ ನಡೆಯಲಿ. ಆದರೆ, ಚರ್ಚೆಗೆ ಬಳಸುವ ಮಾನದಂಡ ಮತ್ತು ಮಾಹಿತಿ ಮಾತ್ರ ಸತ್ಯದ ಹತ್ತಿರವಿರುವಂತೆ ನೋಡಿಕೊಂಡರೆ ನಮ್ಮ ಚರ್ಚೆ ಪರಿಪೂರ್ಣವಾಗಬಹುದು ಮತ್ತು ಪ್ರಜಾಪ್ರಭುತ್ವ ಬಲಪಡಿಸಲು ಅನುಕೂಲವಾಗಬಹುದು.

ಇದನ್ನೂ ಓದಿ: ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?