
ತಂತ್ರಜ್ಞಾನ ಮಾತ್ರವಲ್ಲ ಆರೋಗ್ಯ, ಆಯಸ್ಸಿನ ವಿಚಾರದಲ್ಲೂ ಜಪಾನ್ ಸದಾ ಮುಂದಿದೆ. ಜಗತ್ತಿನ ಬಹುತೇಕ ಜನ ಒತ್ತಡದ ಜೀವನವನ್ನು ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಜನರು ಮಾತ್ರ ಆರೋಗ್ಯಕರ (healthy life), ನೆಮ್ಮದಿಯ, ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಪದ್ಧತಿಯೇ ಇವರ ಸದೃಢ ಮತ್ತು ಆರೋಗ್ಯಕರ ಜೀವನದ ಗುಟ್ಟು. ಜಪಾನಿನ ಜನರ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಾವು ಸಹ ಅವರಂತೆಯೇ ಆರೋಗ್ಯವಂತರಾಗಿ ಜೀವನವನ್ನು ನಡೆಸಬಹುದು. ನಿಮಗೂ ಕೂಡ ಫಿಟ್ ಆಗಿರಬೇಕು, ನೂರ್ಕಾಲ ಆರೋಗ್ಯವಂತರಾಗಿ ಜೀವನ ಸಾಗಿಸಬೇಕು ಎಂಬ ಹಂಬಲವಿದ್ದರೆ, ಜಪಾನಿಯರ ಈ ಕೆಲವು ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ.
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ: ಜಪಾನಿನ ಜನರು ಯಾವಾಗಲೂ ಹೆಚ್ಚಿನ ಪೌಷ್ಟಿಕಾಂಶಯುಕ್ತ, ಸಮತೋಲಿತ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಹೌದು ಅವರು ಸಮುದ್ರಾಹಾರ, ಹಸಿರು ತರಕಾರಿಗಳು, ಸುಟ್ಟ ಮತ್ತು ಆವಿಯಲ್ಲಿ ಬೇಯಿಸಿದ ಆಹಾರಗಳು ಸೇರಿದಂತೆ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಮತ್ತು ಇವರು ಸಂಸ್ಕರಿಸಿದ ಆಹಾರ, ಜಂಕ್ ಫುಡ್‌ಗಳ ಸೇವನೆಯನ್ನು ತಪ್ಪಿಸುತ್ತಾರೆ. ಇವು ಚಯಾಪಚಯಕ್ರಿಯೆಯನ್ನು ಹೆಚ್ಚಿಸಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜಪಾನಿಯರ ಈ ಆಹಾರಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ಬಾಳಬಹುದು.
ಚಾಪ್‌ಸ್ಟಿಕ್‌ಗಳ ಬಳಕೆ: ನಾವು ಕೈಯಲ್ಲಿ ಆಹಾರವನ್ನು ಸೇವನೆ ಮಾಡುವಂತೆ ಜಪಾನಿಯರು ಚಾಪ್‌ಸ್ಟಿಕ್‌ನಲ್ಲಿ ತಿನ್ನುತ್ತಾರೆ. ಇದು ಅವರಿಗೆ ಸಣ್ಣ ಆಹಾರವನ್ನು ಆಹಾರವನ್ನು ಸೇವಿಸಲು ಅನುವು ಮಾಡಿಕೊಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ಸಹ ಜಪಾನಿಯರಂತೆ ಸಣ್ಣ ಸಣ್ಣ ತುತ್ತು ತಿನ್ನುವ ಮೂಲಕ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಬೇಗ ಊಟ ಮಾಡುವುದು: ಜಪಾನಿನ ಜನರು ಸಂಜೆ 7 ಗಂಟೆಯೊಳಗೆ ತಮ್ಮ ರಾತ್ರಿಯ ಭೋಜನವನ್ನು ಮುಗಿಸುತ್ತಾರೆ. ಮತ್ತು ಅವರು ಕಡಿಮೆ ಪ್ರಮಾಣದ ಹಾಗೂ ಹಗುರವಾದ ಆಹಾರವನ್ನು ಸೇವನೆ ಮಾಡುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮಾತ್ರವಲ್ಲದೆ, ದೇಹದಲ್ಲಿ ಬೊಜ್ಜು ಸಂಗ್ರಹವಾಗುವುದನ್ನು ತಡೆಯುತ್ತದೆ. ಫಿಟ್ ಮತ್ತು ಆರೋಗ್ಯಕರವಾಗಿರಲು ನೀವು ಕೂಡ ಈ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಗ್ರೀನ್ ಟೀ ಸೇವನೆ: ಜಪಾನ್‌ನಲ್ಲಿ ಗ್ರೀನ್ ಟೀ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ, ತೂಕ ನಿಯಂತ್ರಣದಲ್ಲಿರುತ್ತದೆ ಮತ್ತು ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ನೀವು ಸಹ ಆರೋಗ್ಯವಂತರಾಗಿರಲು ಗ್ರೀನ್ ಟೀ ಸೇವಿಸಿ.
ಇದನ್ನೂ ಓದಿ: ಈ ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ
ವಾಕಿಂಗ್ ಮತ್ತು ಸೈಕ್ಲಿಂಗ್: ಜಪಾನಿನ ಜನರು ತಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಸೈಕ್ಲಿಂಗ್ ಮಾಡುತ್ತಾರೆ ಮತ್ತು ವಾಕಿಂಗ್ ಹೋಗುತ್ತಾರೆ. ಇದು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ. ಇದಲ್ಲದೆ, ಇದು ಫಿಟ್ ಆಗಿರಲು ಕೂಡ ಸಹಕಾರಿ. ನೀವು ಕೂಡ ಊಟದ ನಂತರ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
ಬಲವಾದ ಸಾಮಾಜಿಕ ಸಂಬಂಧಗಳು: ಜಪಾನಿಯರು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇದು ಅವರ ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುತ್ತದೆ. ಭಾವನಾತ್ಮಕ ಆರೋಗ್ಯಕ್ಕೆ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮುಖ್ಯವಾಗಿದೆ. ಇದು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತದೆ, ಇದು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಕೂಡ ನಿಮ್ಮವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ