Ajwain Leaves : ರೋಗ ದೂರ ಮಾಡುವಲ್ಲಿ ದೊಡ್ಡ ಪತ್ರೆಯ ಗುಣ ಬಹುದೊಡ್ಡದು
ಮನೆಯ ಹಿತ್ತಲಿನಲ್ಲಿರುವ ಪ್ರತಿಯೊಂದು ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಈಗಿನ ಕಾಲದವರಿಗೆ ಯಾವ ಯಾವ ಸಸ್ಯಗಳು ಗಿಡಮೂಲಿಕೆಯ ಸಸ್ಯಗಳಾಗಿವೆ ಎನ್ನುವುದು ತಿಳಿದಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹಿತ್ತಲಿನಲ್ಲಿಯೇ ಸಿಗುವ ಈ ದೊಡ್ಡ ಪತ್ರೆ ಅಥವಾ ಸಾಂಬಾರ ಸೊಪ್ಪನ್ನು ಮದ್ದಾಗಿ ಬಳಸಬಹುದು. ಇದರ ಎಲೆಗಳು ನೋಡಲು ಹಸಿರು ಬಣ್ಣದಿಂದ ಕೂಡಿದ್ದು, ದಪ್ಪವಾಗಿ ಸುವಾಸನೆ ಭರಿತವಾಗಿರುತ್ತದೆ. ಕಾಯಿಲೆಗಳು ಬಂದಾಗ ಈ ಎಲೆಯಿಂದ ಮನೆಮದ್ದನ್ನು ತಯಾರಿಸಿ ಸೇವಿಸುವುದು ಪರಿಣಾಮಕಾರಿಯಾಗಿದೆ.
ಮನೆಯ ಹಿತ್ತಲಿನಲ್ಲಿ ಬೆಳೆಯಬಹುದಾದ ಗಿಡಮೂಲಿಕೆ ಸಸ್ಯಗಳಲ್ಲಿ ಒಂದಾಗಿರುವ ಈ ದೊಡ್ಡ ಪತ್ರೆ ಎಲೆಗಳು ರೋಗಗಳನ್ನು ದೂರ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ಎಲೆಗಳಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಯಂತಹ ಪೋಷಕಾಂಶಗಳು ಹೇರಳವಾಗಿದೆ. ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಆರೋಗ್ಯಕ್ಕೂ ಬಲು ಪ್ರಯೋಜನಕಾರಿಯಾಗಿದೆ. ದೊಡ್ಡ ಪತ್ರೆ ಎಲೆಯಿಂದ ಗೊಜ್ಜು, ಚಟ್ನಿ, ತಂಬುಳಿ ಸೇರಿದಂತೆ ಹೀಗೆ ಅನೇಕ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಹೀಗಾಗಿ ಅಡುಗೆಗೂ ಸೈ ಹಾಗೂ ಆರೋಗ್ಯ ಸೈ ಎನ್ನಬಹುದು.
ದೊಡ್ಡ ಪತ್ರೆ ಎಲೆಯ ಮನೆ ಮದ್ದುಗಳು:
* ಐದಾರು ದೊಡ್ಡಪತ್ರೆ ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ, ರಸ ತೆಗೆದು ನಾಲ್ಕೈದು ಗಂಟೆಗಳಿಗೊಮ್ಮೆ ನಿಯಮಿತವಾಗಿ ಕುಡಿಯುತ್ತಿದ್ದರೆ ಜ್ವರವು ವಾಸಿಯಾಗುತ್ತದೆ.
* ಕಾಮಾಲೆ ರೋಗವುಳ್ಳವರು ಹತ್ತು ದಿನಗಳ ಕಾಲ ಈ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸುವುದು ಪರಿಣಾಮಕಾರಿಯಾಗಿದೆ.
* ಅಜೀರ್ಣ ಸಮಸ್ಯೆಯಿರುವವರು ದೊಡ್ಡಪತ್ರೆ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಸೇವಿಸುವುದು ಉತ್ತಮ.
* ದೊಡ್ಡಪತ್ರೆ ಎಲೆಯನ್ನು ಜಜ್ಜಿ ರಸವನ್ನು ಹುಳುಕಡ್ಡಿಯಿರುವ ಜಾಗಕ್ಕೆ ಹಚ್ಚುವುದರಿಂದ ಗುಣಮುಖವಾಗುತ್ತದೆ.
* ದೊಡ್ಡಪತ್ರೆಯ ಎಲೆಯ ರಸ ತೆಗೆದು ಒಂದು ಚಮಚದಷ್ಟು ಜೇನುತುಪ್ಪ ಬೆರೆಸಿ ಸೇವಿಸುತ್ತ ಬಂದರೆ ಮಕ್ಕಳಲ್ಲಿ ಕಂಡುಬರುವ ಹೊಟ್ಟೆಯುಬ್ಬರ, ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತದೆ
* ದೊಡ್ಡಪತ್ರೆ ನಾಲ್ಕೈದು ಎಲೆಗಳನ್ನು ನೀರಿಗೆ ಹಾಕಿ ಕುದಿಸಿ, ಅದಕ್ಕೆ ಕೆಂಪು ಕಲ್ಲುಸಕ್ಕರೆಯನ್ನು ಸೇರಿಸಿ ಕಷಾಯಮಾಡಿ ಕುಡಿಯುವುದರಿಂದ ತುರಿಕೆಯಂತಹ ಚರ್ಮದ ಸಮಸ್ಯೆಗಳು ಶಮನವಾಗುತ್ತದೆ.
ಇದನ್ನೂ ಓದಿ: ಹೋಳಿದಂದು ನಿಮ್ಮ ಮನೆಯ ಅಲಂಕಾರ ಹೇಗಿರಬೇಕು? ಕಡಿಮೆ ಖರ್ಚಿನಲ್ಲಿ ಮಾಡುವುದು ಹೇಗೆ?
* ಐದಾರು ದೊಡ್ಡಪತ್ರೆಯ ಎಲೆಗಳು, ಒಂದೆರಡು ಕರಿಮೆಣಸು ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಜಜ್ಜಿ ರಸವನ್ನು ಸೇವಿಸುವುದರಿಂದ ಪಿತ್ತದ ಸಮಸ್ಯೆಗಳು ದೂರವಾಗುತ್ತದೆ.
* ವಿಪರೀತವಾದ ತಲೆನೋವಿನ ಸಮಸ್ಯೆಯಿದ್ದರೆ ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿಕೊಂಡು ಹಣೆಗೆ ಹಚ್ಚುವುದರಿಂದ ಈ ಸಮಸ್ಯೆಯು ಕಡಿಮೆಯಾಗುತ್ತದೆ.
* ಕೆಮ್ಮು, ಕಫ ತೊಂದರೆಯಿದ್ದರೆ ದೊಡ್ಡಪತ್ರೆ ಎಲೆಗಳನ್ನು ಹುರಿದು, ರಸ ತೆಗೆದು ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.
* ಸಂಧಿವಾತದ ಸಮಸ್ಯೆಯಿರುವವರು ದೊಡ್ಡಪತ್ರೆ ಎಲೆಗಳನ್ನು ಅರೆದು ಪೇಸ್ಟ್ ತಯಾರಿಕೊಂಡು ನೋವಿರುವ ಜಾಗಕ್ಕೆ ಲೇಪನಮಾಡಿದರೆ ಈ ಸಮಸ್ಯೆಯು ದೂರವಾಗುತ್ತದೆ.
ಈ ಮನೆಮದ್ದನ್ನು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ