ಸಿಹಿ ತಿಂಡಿಯನ್ನು ಎಲ್ಲರೂ ಕೂಡ ಇಷ್ಟ ಪಡುವವರೇ. ಕರಾವಳಿ ಪ್ರದೇಶಗಳಲ್ಲಿ ಮಾಡುವ ಸಿಹಿ ತಿಂಡಿಗಳಲ್ಲಿ ಅರಶಿನ ಎಲೆ ಕಡುಬು ಕೂಡ ಒಂದಾಗಿದ್ದು, ಇದನ್ನು ಹಬ್ಬದ ದಿನ ಮಾತ್ರವಲ್ಲದೇ ಬೆಳಗ್ಗಿನ ತಿಂಡಿಗೆ ಮಾಡಿ ಸವಿಯಬಹುದು. ಅರಶಿನ ಎಲೆಯ ಕಡುಬಿನ ರುಚಿಯನ್ನು ಒಮ್ಮೆ ನಾಲಿಗೆಗೆ ಹತ್ತಿಸಿಕೊಂಡರೆ, ಮತ್ತೆ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಸಾಂಪ್ರಾದಾಯಿಕ ಅಡುಗೆಯಲ್ಲಿ ಒಂದಾಗಿರುವ ಈ ಅರಶಿನ ಎಲೆಯ ಕಡುಬು ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಂಡರೂ ರುಚಿಯ ವಿಚಾರದಲ್ಲಿ ಬೇರೆ ಸಿಹಿ ತಿಂಡಿಗಳನ್ನು ಮೀರಿಸುತ್ತದೆ.
ದೋಸೆ ಅಕ್ಕಿ- 2 ಲೋಟ, (ಇದಕ್ಕೆ ಮಂಗಳೂರು ರೈಸ್ ಅಥವಾ ಕುಚ್ಚಿಲಕ್ಕಿಯನ್ನು ಬಳಸಬಹುದು), ಒಂದು ಲೋಟದಷ್ಟು ಬೆಲ್ಲ, ಒಂದು ಲೋಟ ಹಸಿ ತೆಂಗಿನಕಾಯಿ ತುರಿ, ತುಪ್ಪ, ಅರಶಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು.
ಇದನ್ನೂ ಓದಿ: ಕೂದಲಿನ ನಾನಾ ರೀತಿಯ ಸಮಸ್ಯೆಗಳಿಂದ ಬೇಸೆತ್ತು ಹೋಗಿದ್ದೀರಾ
* ಕುಚ್ಚಿಲಕ್ಕಿಯಾದರೆ ಹಿಂದಿನ ದಿನ ರಾತ್ರಿ ಅಕ್ಕಿ ನೆನೆಹಾಕಬೇಕು. ದೋಸೆ ಅಕ್ಕಿಯಾದರೆ ಮೂರು ಗಂಟೆ ನೆನೆಹಾಕಿದರೆ ಸಾಕು.
* ನೆನೆಸಿಟ್ಟ ಅಕ್ಕಿಯನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.
* ಆ ಬಳಿಕ ಬೆಲ್ಲ ತುರಿದು, ಅದಕ್ಕೆ 1 ಕಪ್ ಕಾಯಿತುರಿ, ತುಪ್ಪ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ಹುರಿದ ಕಪ್ಪು ಎಳ್ಳು ಹಾಕಿ.
* ನಂತರದಲ್ಲಿ ಅರಶಿನ ಎಲೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ತೆಳ್ಳಗೆ ಸವರಿಕೊಳ್ಳಿ. ಈಗಾಗಲೇ ಮಿಶ್ರಣ ಮಾಡಿಟ್ಟ ಕಾಯಿತುರಿಯನ್ನು ಅಕ್ಕಿ ಹಿಟ್ಟಿನ ಮೇಲೆ ಹಾಕಿ ಎಲೆಯನ್ನು ಮಡಚಿಕೊಳ್ಳಿ.
* ಇಡ್ಲಿ ಪಾತ್ರೆಯಲ್ಲಿಟ್ಟು 10-15 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿದರೆ ಘಮ ಘಮಿಸುವ ಅರಶಿನ ಎಲೆ ಕಡುಬು ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ