AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ಸೇವಿಸುದರಿಂದ ಲಭಿಸುವ ಲಾಭಗಳೇನು?

ನೈಸರ್ಗಿಕ ಸಿಹಿಕಾರಕವಾಗಿರುವ ಹಾಗೂ ಆಂಟಿಆಕ್ಸಿಡೆಂಟ್‌ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಸೇರಿದಂತೆ ಇತ್ಯಾದಿ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪ ದೇಹಕ್ಕೆ ಪೋಷಣೆಯನ್ನು ಒದಗಿಸುವುದಲ್ಲದೆ ನಮ್ಮ ಆರೋಗ್ಯವನ್ನು ಹಲವು ವಿಧಗಳಲ್ಲಿ ಸುಧಾರಿಸುತ್ತದೆ. ಹೀಗಿರುವಾಗ ಈ ಚಳಿಗಾಲದಲ್ಲಿ ಪ್ರತಿರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪವನ್ನು ತಿಂದ್ರೆ ಯಾವೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ಸೇವಿಸುದರಿಂದ ಲಭಿಸುವ ಲಾಭಗಳೇನು?
ಸಾಂದರ್ಭಿಕ ಚಿತ್ರ Image Credit source: Pexels
ಮಾಲಾಶ್ರೀ ಅಂಚನ್​
|

Updated on: Dec 27, 2025 | 6:06 PM

Share

ಚಳಿಗಾಲದ (winter) ಶೀತ ವಾತಾವರಣದಲ್ಲಿ ತ್ವಚೆ ಸಂಬಂಧಿ ಸಮಸ್ಯೆಗಳ ಜೊತೆಗೆ  ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೀಗಾಗಿ ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕರು ಆರೋಗ್ಯಕರ ಕಷಾಯ, ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಮಾತ್ರವಲ್ಲದೆ ಚಳಿಗಾಲದಲ್ಲಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವನೆ ಮಾಡಬಹುದು. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಜೇನುತುಪ್ಪವನ್ನು ಚಳಿಗಾಲದಲ್ಲಿ ಸೇವನೆ ಮಾಡುವುದರಿಂದ ಲಭಿಸುವ ಲಾಭಗಳೇನು ಎಂಬುದನ್ನು ನೋಡೋಣ.

ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ತಿಂದ್ರೆ ಏನಾಗುತ್ತದೆ?

ಉತ್ತಮ ನಿದ್ರೆ: ಜೇನುತುಪ್ಪವು ಗ್ಲೂಕೋಸ್ ಅಂಶವನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಎರಡೂ ಅಂಶಗಳು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ತಿನ್ನುವ ಅಭ್ಯಾಸ  ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಜೇನುತುಪ್ಪವು ನೈಸರ್ಗಿಕ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದ್ದು, ಅದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ ಜೇನುತುಪ್ಪವು ವಿಟಮಿನ್ ಸಿ ಮತ್ತು ಸತುವನ್ನು ಸಹ ಹೊಂದಿರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಗಂಟಲು ನೋವಿನಿಂದ ಪರಿಹಾರ: ಚಳಿಗಾಲದಲ್ಲಿ ಗಂಟಲು ನೋವು ಮತ್ತು ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ.  ಹೀಗಿರುವಾಗ ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪದ ಸೇವನೆಯಿಂದ  ಗಂಟಲು ನೋವು, ಕೆಮ್ಮು ಕಡಿಮೆಯಾಗುತ್ತದೆ ಮತ್ತು ಉಸಿರಾಟದ ಕಾರ್ಯ ಸುಧಾರಿಸುತ್ತದೆ. ಜೇನುತುಪ್ಪವು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸಹ ಹೊಂದಿದ್ದು, ಇದು ದೇಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮ: ಜೇನುತುಪ್ಪವು ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಶುಷ್ಕತೆಯನ್ನು ಹೋಗಲಾಡಿಸಲು ಮತ್ತು ಚರ್ಮವನ್ನು  ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಜೇನುತುಪ್ಪವನ್ನು ಸೇವಿಸುವುದರಿಂದ ಕಾಲಜನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ. ಇದು ವಯಸ್ಸಾದ ಚಿಹ್ನೆಗಳು ಕಾಣಿಸುವುದನ್ನು ತಡೆಯುತ್ತದೆ.  ಇದು ಚರ್ಮದ ಟೋನ್ ಸುಧಾರಿಸುತ್ತದೆ ಮತ್ತು ವಯಸ್ಸಾದ ಚಿಹ್ನೆಗಳನ್ನು ನಿಧಾನಗೊಳಿಸುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಜೇನುತುಪ್ಪವು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗಳು ಆರೋಗ್ಯಕರ ರಕ್ತನಾಳಗಳನ್ನು ಕಾಪಾಡಿಕೊಳ್ಳಲು, ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು, ಆದ್ದರಿಂದ ಜೇನುತುಪ್ಪದ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳೇ ಸಾಕು

ಯಾರು ಜೇನುತುಪ್ಪ ಸೇವಿಸಬಾರದು?

ಜೇನುತುಪ್ಪವು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವರು ಅದನ್ನು ಸೇವಿಸುವುದನ್ನು ತಪ್ಪಿಸಬೇಕು. ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪವನ್ನು ಎಂದಿಗೂ ನೀಡಬಾರದು, ಮಧುಮೇಹಿಗಳು ಜೇನುತುಪ್ಪವನ್ನು ಎಚ್ಚರಿಕೆಯಿಂದ ಸೇವಿಸಬೇಕು, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದಲ್ಲದೆ, ಅಲರ್ಜಿ ಇರುವವರು ಜೇನುತುಪ್ಪ ಸೇವಿಸಬಾರದು. ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಮೇರೆಗೆ  ಜೇನುತುಪ್ಪ ಸೇವಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ