ಪರೀಕ್ಷೆಯ ಸನಿಹದಲ್ಲಿರುವ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಆಹಾರ ಪದ್ಧತಿ ಮತ್ತು ಜೀವನಶೈಲಿ ಸಹಕಾರಿ
Lifestyle: ನಿಮ್ಮ ಮಕ್ಕಳ ಏಕಾಗ್ರತೆ ಮತ್ತು ಸಾಮರ್ಥ್ಯ ಹೆಚ್ಚಿಸಲು ಅವರ ದೈನಂದಿನ ಚಟುವಟಿಕೆ ಹಾಗೂ ಆಹಾರದತ್ತ ಕಾಳಜಿ ವಹಿಸುವುದೂ ಅವಶ್ಯಕ. ಹಾಗಾದರೆ, ಈ ಸಂದರ್ಭದಲ್ಲಿ ನಿಮ್ಮ ಮಕ್ಕಳಿಗೆ ಯಾವ ಆಹಾರ ಒಳ್ಳೆಯದು? ಅವರು ಎಷ್ಟು ಹೊತ್ತು ನಿದ್ದೆ ಮಾಡಬೇಕು? ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕೊರೊನಾದಿಂದಾಗಿ ಶಾಲೆ, ಕಾಲೇಜ್, ಪರೀಕ್ಷೆ ಎಲ್ಲವೂ ಉಲ್ಟಾಪಲ್ಟಾ ಆಗಿವೆ. ಹೆಚ್ಚಿನ ಮಕ್ಕಳು ಲಾಕ್ಡೌನ್ ಸಮಯದಲ್ಲಿ ಪುಸ್ತಕದತ್ತ ತಿರುಗಿಯೂ ನೋಡದ ಕಾರಣ ಈಗ ಪರೀಕ್ಷೆ ಹತ್ತಿರಾಗುತ್ತಿದ್ದಂತೆಯೇ ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಸಂದಿಗ್ಧತೆಯಲ್ಲಿದ್ದಾರೆ. ವಿದ್ಯಾಭ್ಯಾಸದ ವಿಚಾರದಲ್ಲಿ ಮಕ್ಕಳಿಗಿಂತಲೂ ಪೋಷಕರಿಗೆ ಹೆಚ್ಚಿನ ಚಿಂತೆ ಆಗುತ್ತಿರುತ್ತದೆ. ಈಗ ಪರೀಕ್ಷೆಯೂ ಸನಿಹದಲ್ಲಿರುವುದರಿಂದ ನಿಮ್ಮ ಮಕ್ಕಳ ಏಕಾಗ್ರತೆ ಮತ್ತು ಸಾಮರ್ಥ್ಯ ಹೆಚ್ಚಿಸಲು ಅವರ ದೈನಂದಿನ ಚಟುವಟಿಕೆ ಹಾಗೂ ಆಹಾರದತ್ತ ಕಾಳಜಿ ವಹಿಸುವುದೂ ಅವಶ್ಯಕ. ಹಾಗಾದರೆ, ಈ ಸಂದರ್ಭದಲ್ಲಿ ನಿಮ್ಮ ಮಕ್ಕಳಿಗೆ ಯಾವ ಆಹಾರ ಒಳ್ಳೆಯದು? ಅವರು ಎಷ್ಟು ಹೊತ್ತು ನಿದ್ದೆ ಮಾಡಬೇಕು? ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪರೀಕ್ಷೆ ಹತ್ತಿರವಿರುವ ಈ ಸಂದರ್ಭದಲ್ಲಿ ಮಕ್ಕಳ ದೈಹಿಕ ಕ್ಷಮತೆ ಹೆಚ್ಚಿಸಲು ಮತ್ತು ಏಕಾಗ್ರತೆ ಕಾಪಾಡಲು ಈ ಆಹಾರಗಳು ಸಹಕಾರಿ: 1. ಹಸಿರು ಸೊಪ್ಪಿನ ತರಕಾರಿಗಳು ಸಾಧಾರಣವಾಗಿ ಹಸಿರು ಸೊಪ್ಪಿನ ತರಕಾರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಒಳಗೊಂಡಿರುತ್ತವೆ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ವೃದ್ಧಿಸುವ ಜೊತೆಗೆ ಮೆದುಳು ಸಕ್ರಿಯವಾಗಿರಲು ಸಹಕಾರಿಯಾಗುತ್ತದೆ. ಹೀಗಾಗಿ ಮಕ್ಕಳ ಆಹಾರದಲ್ಲಿ ಹಸಿರು ಸೊಪ್ಪಿನ ತರಕಾರಿಗಳು ನಿಯಮಿತ ಪ್ರಮಾಣದಲ್ಲಿ ಇದ್ದರೆ ಓದಿನತ್ತ ಹೆಚ್ಚು ಗಮನ ವಹಿಸಲು ಸಹಕಾರಿ.
2. ಪ್ರೋಟೀನ್ ಅಂಶ ಹೆಚ್ಚಿರುವ ಆಹಾರ ಹಾಲು, ಮೊಟ್ಟೆ, ಕಾಳು, ಮೀನು ಇತ್ಯಾದಿ ಆಹಾರಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಈ ರೀತಿಯ ಆಹಾರವನ್ನು ಹೆಚ್ಚೆಚ್ಚು ನೀಡುವುದರಿಂದ ಅವರ ಮೆದುಳು ಸಕ್ರಿಯವಾಗಿರುವುದಲ್ಲದೇ ಏಕಾಗ್ರತೆ ವೃದ್ಧಿಸುವಲ್ಲಿ ಮತ್ತು ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
3. ಸಕ್ಕರೆ ಅಂಶ ಹೆಚ್ಚಿರುವ ಆಹಾರ ಕಡಿಮೆ ಮಾಡಿದರೆ ಉತ್ತಮ ಪರೀಕ್ಷೆಯ ಸಂದರ್ಭದಲ್ಲಿ ಅತಿಯಾದ ಸಿಹಿ ಸೇವನೆ, ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳ ಸೇವನೆ ಕೆಲ ತೊಂದರೆಗಳನ್ನು ಉಂಟುಮಾಡುತ್ತದೆ. ಸಕ್ಕರೆ ಅಂಶ ರಕ್ತದಲ್ಲಿ ಏರುಪೇರಾದಾಗ ಪರೀಕ್ಷೆಯಲ್ಲಿ ಕೆಲ ಮುಖ್ಯ ಅಂಶಗಳೇ ಮರೆತು ಹೋಗಬಹುದು. ಓದಿದ್ದು ನೆನಪಿಗೆ ಬಾರದೇ ಪರೀಕ್ಷಾ ಕೊಠಡಿಯಲ್ಲಿ ಒದ್ದಾಡುವಂತೆ ಆಗಬಹುದು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಿಹಿ ತಿನಿಸುಗಳಿಂದ ದೂರ ಇರುವುದು ಉತ್ತಮ.
4. ನಿಯಮಿತವಾಗಿ ನೀರು ಕುಡಿಯುವುದು ಒಳ್ಳೆಯದು ನೀರು ನಮ್ಮ ದೇಹಕ್ಕೆ ಅತ್ಯವಶ್ಯಕ ಸಂಗತಿ. ಆದರೆ, ಅನೇಕರು ಅದರಲ್ಲೂ ವಿಶೇಷವಾಗಿ ಮಕ್ಕಳು ನೀರು ಕುಡಿಯಲು ಸೋಮಾರಿತನ ತೋರುತ್ತಾರೆ. ನೀರು ಕುಡಿದರೆ ಮೂತ್ರ ವಿಸರ್ಜನೆಗೆ ಹೋಗುತ್ತಿರಬೇಕಾಗುತ್ತದೆ ಎಂಬ ಭಯಕ್ಕೆ ಬಿದ್ದು ನೀರು ಕುಡಿಯದೇ ಉಳಿಯುತ್ತಾರೆ. ಆದರೆ, ವಾಸ್ತವವಾಗಿ ದೇಹದ ಸಮತೋಲನ ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ 2 ಲೀಟರ್ ನೀರು ಸೇವಿಸಬೇಕು. ಪರೀಕ್ಷೆ ಸಮಯದಲ್ಲಿ ನಿಯಮಿತವಾಗಿ ನೀರು ಸೇವನೆ ಮಾಡುವುದರಿಂದ ದೇಹ ಮತ್ತು ಮನಸ್ಸು ಸಕ್ರಿಯವಾಗಿರುವುದಲ್ಲದೇ, ತಲೆ ಸುತ್ತುವಿಕೆ, ನಿರ್ಜಲೀಕರಣದಂತಹ ಸಮಸ್ಯೆಗಳಿಂದ ಪಾರಾಗಲೂ ಸಹಕಾರಿಯಾಗುತ್ತದೆ.
ಕನಿಷ್ಠ 8 ಗಂಟೆಯ ನಿದ್ರೆ ಅತ್ಯವಶ್ಯಕ ಪರೀಕ್ಷೆಯ ಸಂದರ್ಭದಲ್ಲಿ ಉತ್ತಮ ಆಹಾರ ಸೇವಿಸುವುದು ಎಷ್ಟು ಮುಖ್ಯವೋ.. ಅಂತೆಯೇ, ಉತ್ತಮವಾಗಿ ನಿದ್ದೆ ಮಾಡುವುದೂ ಮುಖ್ಯ. ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿ ಬೇಕೆಂದರೆ ನಿದ್ದೆ ಬೇಕೇ ಬೇಕು. ಹೀಗಾಗಿ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸುವುದು ಒಳ್ಳೆಯದು. ಚೆನ್ನಾಗಿ ನಿದ್ದೆ ಮಾಡಿದಾಗ ಮರೆವು ಕಡಿಮೆಯಾಗಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಇದನ್ನೂ ಓದಿ: ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು