
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸನ್ನು ಗಳಿಸಲು ಏನು ಮಾಡಬೇಕು, ಏನು ಮಾಡಬಾರದು, ಒಳ್ಳೆಯದಾಗಬೇಕೆಂದರೆ ಮಾಡಬೇಕಾದ್ದೇನು ಎಂಬುದರ ಬಗ್ಗೆ ತಿಳಿಸಿರುವಂತೆ ಜೀವನದಲ್ಲಿ ಬರುವ ಕೆಟ್ಟ ಸಮಯಗಳು ಅಥವಾ ಬಿಕ್ಕಟ್ಟುಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುವ ಚಿಹ್ನೆಗಳ ಬಗ್ಗೆಯೂ ವಿವರಿಸಿದ್ದಾರೆ. ದೈನಂದಿನ ಜೀವನದಲ್ಲಿ ನಡೆಯುವ ಈ ಕೆಲವೊಂದು ವಿಚಾರಗಳು, ಅಶುಭ ಘಟನೆಗಳು ಕೆಟ್ಟ ಸಮಯ ಬರುವುದರ ಮುನ್ಸೂಚನೆಯಾಗಿರಬಹುದು, ಅವುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ಹಾಗಿದ್ದರೆ, ಕೆಟ್ಟ ಕಾಲ ಬರೋ ಮುನ್ನ ಯಾವೆಲ್ಲಾ ಸೂಚನೆಗಳು ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ತಿಳಿಯಿರಿ.
ತುಳಸಿ ಗಿಡ ಒಣಗುವುದು: ತುಳಸಿ ಗಿಡ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುವ ಈ ಸಸ್ಯ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಒಂದು ವೇಳೆ ಮನೆಯಲ್ಲಿರುವ ಈ ಗಿಡ ಯಾವುದೇ ಕಾರಣವಿಲ್ಲದೆ ಒಣಗಲು ಪ್ರಾರಂಭಿಸಿದರೆ ಅದನ್ನು ಅಶುಭದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತಿದೆ, ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು ಎಂಬುದರ ಸೂಚನೆಯಾಗಿದ್ದು, ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಚಾಣಕ್ಯರು ಹೇಳಿದ್ದಾರೆ.
ಮನೆಯೊಳಗೆ ಜಗಳ: ಮನೆಯಲ್ಲಿ ಪದೇ ಪದೇ ಜಗಳಗಳು ಕಾಣಿಸಿಕೊಂಡರೆ, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಕುಟುಂಬದಲ್ಲಿ ಅಶಾಂತಿ ಅಥವಾ ಅಪಶ್ರುತಿ ಹೆಚ್ಚಾದರೆ, ಅದು ಕಷ್ಟದ ಸಮಯಗಳು ಸಮೀಪಿಸುತ್ತಿವೆ ಎಂಬುದರ ಸೂಚನೆಯಾಗಿದೆ. ಇದು ಆರ್ಥಿಕ ನಷ್ಟ, ಮಾನಸಿಕ ಒತ್ತಡ ಅಥವಾ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಶಾಂತ ರೀತಿಯಲ್ಲಿ ವರ್ತಿಸಬೇಕು, ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು, ಧಾರ್ಮಿಕ ಚಟುವಟಿಕೆಗಳನ್ನು ಮನೆಯಲ್ಲಿ ನಡೆಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಇಂತಹ ಜನರು ಹಾವಿಗಿಂತಲೂ ಸಖತ್ ಡೇಂಜರ್; ಅವರ ಸಹವಾಸ ಬೇಡ್ವೇ ಬೇಡ
ಪದೇ ಪದೇ ಗಾಜು ಒಡೆಯುವುದು: ಚಾಣಕ್ಯ ನೀತಿಯ ಪ್ರಕಾರ, ಮನೆಯಲ್ಲಿರುವ ಕನ್ನಡಿ ಅಥವಾ ಗಾಜು ತಾನಾಗಿಯೇ ಒಡೆದರೆ, ಅದು ಕೆಟ್ಟ ಸಮಯ ಅಥವಾ ಬಿಕ್ಕಟ್ಟಿನ ಮುನ್ಸೂಚನೆಯಾಗಿದೆ. ಇದು ವ್ಯಕ್ತಿಯ ಭವಿಷ್ಯದಲ್ಲಿ ಅಡೆತಡೆಗಳು, ತೊಂದರೆಗಳು ಬರುತ್ತವೆ ಎಂಬುದನ್ನು ಸೂಚಿಸುತ್ತದೆ. ಇದಲ್ಲದೆ ಒಡೆದ ಗಾಜನ್ನು ಮನೆಯಲ್ಲಿ ಇಡಬಾರದು ಏಕೆಂದರೆ ಅದು ಬಡತನ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ, ಪ್ರಕೃತಿ ಮತ್ತು ಪರಿಸರದಲ್ಲಿನ ಈ ಸಣ್ಣ ಬದಲಾವಣೆಗಳು ನಮಗೆ ಭವಿಷ್ಯದ ಸೂಚನೆಗಳನ್ನು ನೀಡುತ್ತವೆ. ಈ ಎಚ್ಚರಿಕೆಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಂಡು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡರೆ, ಮುಂಬರುವ ಕೆಟ್ಟ ಸಮಯಗಳನ್ನು, ಬಿಕ್ಕಟ್ಟನ್ನು ಜಾಗರೂಕತೆ, ಸಂಯಮ ಮತ್ತು ಬುದ್ಧಿವಂತಿಕೆಯಿಂದ ಪರಿಹರಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಗಮನಿಸಿ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ಟಿವಿ9 ಕನ್ನಡ ಇದನ್ನು ದೃಢೀಕರಿಸುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ