
ಜೀವನದ ಏಳ್ಗೆ, ಯಶಸ್ಸಿನಲ್ಲಿ ಜೀವನ ಸಂಗಾತಿಯ (Life Partner) ಪಾತ್ರ ಕೂಡ ಬಹುಮುಖ್ಯವಾಗಿರುತ್ತದೆ. ಅದಕ್ಕಾಗಿಯೇ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಎಚ್ಚರದಿಂದ ಆಯ್ಕೆ ಮಾಡಬೇಕು ಎಂದು ಹೇಳುವುದು. ಕೆಲವೊಮ್ಮೆ ತಪ್ಪು ಆಯ್ಕೆಗಳಿಂದ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಪುರುಷರು ಮದುವೆ, ಪ್ರೀತಿ-ಪ್ರೇಮದ ವಿಚಾರದಲ್ಲಿ ಇಂತಹ ಮಹಿಳೆಯರಿಂದ ಆದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು, ಇಲ್ಲದಿದ್ದರೆ ಕುಟುಂಬದ ನೆಮ್ಮದಿ ಹಾಳಾಗುವುದರ ಜೊತೆಗೆ ಜೀವನವೂ ಹಾಳಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಹೀಗಿರುವಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದರ ಜೊತೆಗೆ ಕುಟುಂಬವೂ ನೆಮ್ಮದಿಯಿಂದಿರಲು ಪುರುಷರು ಎಂತಹ ಮಹಿಳೆಯರಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ.
ಸ್ವಾರ್ಥಿ ಮತ್ತು ದುರಾಸೆಯ ಮಹಿಳೆಯರಿಂದ ದೂರವಿರಿ: ಚಾಣಕ್ಯನ ಪ್ರಕಾರ, ಸ್ವಾರ್ಥಕ್ಕಾಗಿ ಪ್ರೀತಿಸುವಂತಹ ಹೆಣ್ಣಿನಿಂದ ದೂರವಿರಬೇಕಂತೆ. ಏಕೆಂದರೆ ಅಂತಹ ಮಹಿಳೆಯರು ತಮ್ಮ ಉದ್ದೇಶ ಸಾಧಿಸಿದ ನಂತರ ಸಂಬಂಧಗಳನ್ನು ಮುರಿದುಕೊಂಡು ಹೋಗುತ್ತಾರೆ. ಇದು ಪುರುಷನ ಜೀವನದಲ್ಲಿ ಅಶಾಂತಿಯನ್ನು ಉಂಟುಮಾಡುತ್ತದೆ. ಈ ಅಂಶ ಆತನ ನೆಮ್ಮದಿಯನ್ನು ಕೆಡಿಸುವುದರ ಜೊತೆಗೆ ಆತನ ವಿನಾಶಕ್ಕೂ ಕಾರಣವಾಗುತ್ತದಂತೆ.
ಕೆಟ್ಟ ಸ್ವಭಾವದ ಮಹಿಳೆಯರು: ಮಹಿಳೆಯ ದೇಹ ಸೌಂದರ್ಯವನ್ನು ನೋಡಿ ಆಕೆಯನ್ನು ಜೀವನ ಸಂಗಾತಿಯೆಂದು ಆಯ್ಕೆ ಮಾಡಬಾರದು, ಆಕೆಯ ಗುಣವನ್ನು ನೋಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅವರ ಪ್ರಕಾರ ಮೌಲ್ಯಗಳ ಕೊರತೆಯಿರುವ ಮಹಿಳೆಯರು ಇತರರಿಗೂ ಅಗೌರವ ತೋರುತ್ತಾರೆ. ಹೀಗಿರುವಾಗ ಇಂತಹ ಮಹಿಳೆಯನ್ನು ಮದುವೆಯಾದರೆ ಸಂಬಂಧದಲ್ಲಿ ಬಿರುಕು ಮೂಡಿ ಮನೆಯೇ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಇದು ಪುರುಷನ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರ ಮೇಲೂ ಪರಿಣಾಮವನ್ನು ಬೀರುತ್ತದೆ.
ಚಾರಿತ್ರ್ಯವಿಲ್ಲದ ಮಹಿಳೆ: ಆಚಾರ್ಯ ಚಾಣಕ್ಯರ ಪ್ರಕಾರ, ಸದ್ಗುಣಗಳಿರುವ ಹೆಣ್ಣು ನಿಮ್ಮ ಜೀವನಕ್ಕೆ ಬಂದರೆ ಜೀವನ ಬೆಳಗುವಂತೆ, ಸುಳ್ಳು ಹೇಳುವ, ಗೌರವ ನೀಡದ ಚಾರಿತ್ರ್ಯಹೀನ ಮಹಿಳೆಯಿಂದ ಜೀವನವೇ ಹಾಳಾಗುತ್ತದೆ. ಹೌದು ಕೆಲವರು ಪ್ರೀತಿಯಲ್ಲಿದ್ದರೂ, ಅಥವಾ ಮದುವೆಯಾಗಿದ್ದರೂ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾರೆ. ಇಂತಹವರ ಜೊತೆ ಇದ್ರೆ ಜೀವನವೇ ಹಾಳಾಗುತ್ತದೆ ಮಾತ್ರವಲ್ಲದೆ ಸಾಕಷ್ಟು ಅವಮಾನಗಳನ್ನೂ ಎದುರಿಸಬೇಕಾಗುತ್ತದೆ. ಹಾಗಾಗಿ ಅಂತಹ ಮಹಿಳೆಯರಿಂದ ದೂರವಿರಬೇಕೆಂದು ಚಾಣಕ್ಯರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಇಂತಹ ಜನರೊಂದಿಗೆ ಇದ್ದರೆ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ
ಅಜ್ಞಾನಿ ಮಹಿಳೆಯರ ಬಗ್ಗೆಯೂ ಎಚ್ಚರದಿಂದಿರಿ: ಅಜ್ಞಾನಿ ಮತ್ತು ಸಾಮಾನ್ಯ ಜ್ಞಾನವಿಲ್ಲದ ಮಹಿಳೆಯರಿಂದಲೂ ದೂರವಿರಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಜ್ಞಾನವು ಜೀವನದ ದಿಕ್ಕನ್ನು ನಿರ್ಧರಿಸುತ್ತದೆ ಎಂದು ನಂಬಿದ್ದ ಆಚಾರ್ಯ ಚಾಣಕ್ಯರು, ಶಿಕ್ಷಣ ಮತ್ತು ತಿಳುವಳಿಕೆಯ ಕೊರತೆಯಿರುವ ಮಹಿಳೆಯರು ತಾವು ಹಿಂದೆ ಉಳಿಯುವುದಲ್ಲದೆ ತಮ್ಮ ಕುಟುಂಬವನ್ನು ಮುನ್ನಡೆಸುವಲ್ಲಿ ವಿಫಲರಾಗುತ್ತಾರೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಚಾಣಕ್ಯನ ಪ್ರಕಾರ, ಉತ್ತಮ ನಡವಳಿಕೆಯ, ಸುಸಂಸ್ಕೃತ ಮತ್ತು ಜ್ಞಾನವುಳ್ಳ ಒಬ್ಬ ಮಹಿಳೆ ಮಾತ್ರ ಪುರುಷನನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲಳು. ಅಂತಹ ಮಹಿಳೆಯರು ಗಂಡನ ಏಳ್ಗೆಗೆ ಶ್ರಮಿಸುವುದರ ಜೊತೆಗೆ ಕುಟುಂಬವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ