
ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುವುದು ತುಂಬಾನೇ ಮುಖ್ಯ. ಆದರೆ ಅತಿಯಾದ ಒಳ್ಳೆಯತನ (honesty) ಎಂದಿಗೂ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿಯಾದ ಒಳ್ಳೆಯತನದಿಂದ ನಾವೇ ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಒಳ್ಳೆಯ ಗುಣಕ್ಕೂ ಒಂದು ಮಿತಿ ಇರಬೇಕು, ಜಾಸ್ತಿ ಒಳ್ಳೆಯತನವನ್ನು ತೋರಿದರೆ ಕೆಲವೊಮ್ಮೆ ಅದೇ ಗುಣವು ದೌರ್ಬಲ್ಯವಾಗಿ ಬದಲಾಗಬಹುದು ಮತ್ತು ಜನ ನಮ್ಮ ಈ ಒಳ್ಳೆಯತನ ಲಾಭವನ್ನು ಪಡೆಯಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಅತಿಯಾದ ಒಳ್ಳೆಯತನ ಏಕೆ ಒಳ್ಳೆಯದಲ್ಲ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸುಲಭವಾಗಿ ಮೋಸ ಹೋಗಬಹುದು: ಎಲ್ಲದಕ್ಕೂ ಹೌದು ಎಂದು ಹೇಳುವುದು ಅಥವಾ ನಾನು ಇಲ್ಲ ಎಂದು ಹೇಳಿದರೆ ಅವರ ಭಾವನೆಗಳಿಗೆ ನೋವಾಗಬಹುದೇನೋ ಎಂದು ಭಾವಿಸಿ ಎಲ್ಲದಕ್ಕೂ ಹೌದು ಹೇಳಿ ಅತಿಯಾದ ಒಳ್ಳೆಯತನ ತೋರಿಸುತ್ತಾ ಹೋದರೆ ನೀವು ಸುಲಭವಾಗಿ ಮೋಸ ಹೋಗುತ್ತೀರಿ. ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ನಿಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ಇತರರು ನಿಮ್ಮನ್ನು ದುರ್ಬಲರೆಂದು ನೋಡುತ್ತಾರೆ.
ಇತರರ ಸ್ವಾರ್ಥಕ್ಕಾಗಿ ಬಲಿಯಾಗಬೇಕಾಗುತ್ತದೆ: ತುಂಬಾ ಒಳ್ಳೆಯವರಾಗಿದ್ದರೆ ನೀವು ಇತರರ ಸ್ವಾರ್ಥಕ್ಕೆ ಬಹುಬೇಗನೇ ಬಲಿಯಾಗುತ್ತೀರಿ. ಜಾಸ್ತಿ ಒಳ್ಳೆಯತನವನ್ನು ತೋರಿದರೆ ಕೆಲವೊಮ್ಮೆ ಅದೇ ಗುಣವು ದೌರ್ಬಲ್ಯವಾಗಿ ಬದಲಾಗಬಹುದು ಆದ್ದರಿಂದ, ಪರಿಸ್ಥಿತಿಯ ಬಗ್ಗೆ ಯೋಚಿಸಿ ಸಮತೋಲನದಿಂದ ವರ್ತಿಸುವುದು ಬಹಳ ಮುಖ್ಯ.
ಇದನ್ನೂ ಓದಿ: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ
ಅವಕಾಶಗಳು ಕಳೆದುಹೋಗುತ್ತವೆ: ಯಾವಾಗಲೂ ಒಳ್ಳೆಯತನ ತೋರುವುದರಿಂದ ಇತರರಿಗೆ ಒಳ್ಳೆಯದಾಗಲಿ ಎಂದು ನೀವು ಅವರಿಗಾಗಿ ಅವಕಾಶಗಳನ್ನು ಬಿಟ್ಟುಕೊಟ್ಟಾಗ ನಿಮ್ಮ ಪಾಲಿಗೆ ಬರುವಂತಹ ಒಳ್ಳೊಳ್ಳೆ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಇದರಿಂದ ಇತರರು ಜೀವನದಲ್ಲಿ ಮುಂದೆ ಸಾಗುತ್ತಾರೆ ನೀವು ಹಿಂದೆಯೇ ಉಳಿಯಬೇಕಾಗುತ್ತದೆ. ಹಾಗಾಗಿ ಯಾವತ್ತಿಗೂ ಅತಿಯಾಗಿ ಒಳ್ಳೆಯವರಾಗಿರಬೇಡಿ
ಒಳ್ಳೆಯತನ ಒಳ್ಳೆಯದೆ ಆದರೆ ಅತಿಯಾದ ಒಳ್ಳೆಯತನ ನಿಮಗೆಯೇ ಮುಳುವಾಗಿ ಪರಿಣಮಿಸುತ್ತದೆ. ಆದ್ದರಿಂದ ನಿಮ್ಮ ಯಶಸ್ಸಿಗಾಗಿ ನೀವು ಶ್ರಮಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:31 pm, Thu, 11 June 26