
ಸ್ನೇಹ (Friendship) ಎನ್ನುವುದು ಸುಂದರ ಬಂಧ ಮಾತ್ರವಲ್ಲ, ಭರವಸೆ, ನಂಬಿಕೆಯೂ ಹೌದು. ಆದರೆ ಸ್ನೇಹಿತರನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಾವು ಬಹಳಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಒಬ್ಬ ಉತ್ತಮ ಸ್ನೇಹಿತನಿಂದ ನಮ್ಮ ಜೀವನ ಬೆಳಗುವಂತೆ, ಒಬ್ಬ ನಕಲಿ, ದುಷ್ಟ ಸ್ನೇಹಿತನ ಕಾರಣದಿಂದ ನಮ್ಮ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಒಬ್ಬ ನಕಲಿ ಸ್ನೇಹಿತ 100 ಶತ್ರುಗಳಿಗೆ ಸಮ. ಇವರು ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದು ಮಾತ್ರವಲ್ಲದೆ, ನಿಮ್ಮ ನಂಬಿಕೆಗೆ, ಬೆನ್ನಿಗೆ ಚೂರಿ ಹಾಕುತ್ತಾರೆ. ಇಂತಹವರ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹೀಗಿರುವಾಗ ನಕಲಿ ಸ್ನೇಹಿತನನ್ನು ಗುರುತಿಸುವುದು ಹೇಗೆ, ಒಬ್ಬ ಉತ್ತಮ ಸ್ನೇಹಿತ ಹೇಗಿರುತ್ತಾನೆ ಎಂಬುದನ್ನು ತಿಳಿಯುವುದು ಬಹಳ ಅವಶ್ಯಕ.
ನಿಮ್ಮಒಳ್ಳೆಯ ಸಮಯದಲ್ಲಿ ಮಾತ್ರ ನಿಮ್ಮನ್ನು ಬೆಂಬಲಿಸುವ ಮತ್ತು ನಿಮ್ಮ ಕೆಟ್ಟ ಸಮಯದಲ್ಲಿ ನಿಮ್ಮ ಜೊತೆಯಲ್ಲಿ ನಿಲ್ಲದವನು ಎಂದಿಗೂ ಉತ್ತಮ ಸ್ನೇಹಿತನಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ನಿಜವಾದ ಸ್ನೇಹಿತ ಎಂದರೆ ನಿಮ್ಮ ಸಂತೋಷ ಮಾತ್ರವಲ್ಲದೆ ದುಃಖದ ಸಮಯದಲ್ಲೂ ನಿಮ್ಮ ಹೆಗಲಾಗಿ ನಿಲ್ಲುವವನು. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವನು, ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡದವನು.
ಆಚಾರ್ಯ ಚಾಣಕ್ಯ ಹೇಳುತ್ತಾರೆ, “ಶತ್ರುಚ್ಛಾಯ ಮಿತ್ರತಾ ಭವತಿ ವಿನಾಶಾಯ.” ಅಂದರೆ, ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣುವ ಆದರೆ ಆಳವಾಗಿ ಅಸೂಯೆ ಪಡುವ ಸ್ನೇಹಿತರು ನಿಮ್ಮ ವಿನಾಶಕ್ಕೆ ಕಾರಣ. ನಕಲಿ ಸ್ನೇಹಿತರು ನಿಮ್ಮ ಪ್ರಗತಿಯನ್ನು ನೋಡಿ ಅಸೂಯೆ ಪಡುತ್ತಾರೆ, ನಿಮ್ಮ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಂಡು ಇತರರ ಮುಂದೆ ನಿಮ್ಮ ಘನತೆಯನ್ನು ಹಾಳು ಮಾಡುತ್ತಾರೆ. ಮುಖ್ಯವಾಗಿ ನಿಮಗೆ ಕಷ್ಟ ಅಂತ ಬಂದಾಗ, ನಿಮ್ಮ ಸಹಾಯಕ್ಕೆ ನಿಲ್ಲದೆ ಅಲ್ಲಿಂದ ಓಡಿ ಹೋಗುತ್ತಾರೆ.
ಇಂತಹ ನಕಲಿ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಶತ್ರುಗಳು ಎದುರು ನಿಂತು ದಾಳಿ ಮಾಡುತ್ತಾರೆ, ಆದರೆ ನಕಲಿ ಸ್ನೇಹಿತರು ಬೆನ್ನ ಹಿಂದೆ ಚೂರಿ ಹಾಕಿ, ಮನಸ್ಸಿಗೆ ಘಾಸಿ ಮಾಡುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ನಕಲಿ ಸ್ನೇಹಿತರು ಗುಪ್ತ ಶತ್ರು ಇದ್ದಂತೆ. ಇವರುಗಳು ಯಾವತ್ತಿಗೂ ಅಪಾಯಕಾರಿ. ಇವರಿಗೆ ದೌರ್ಬಲ್ಯಗಳೇನು ಎಂಬುದೆಲ್ಲಾ ತಿಳಿದುರುತ್ತದೆ. ಮತ್ತು ಇವರು ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ನಕಲಿ ಸ್ನೇಹಿತನಿಗಿಂತ ಅಪಾಯಕಾರಿ ಯಾರೂ ಇಲ್ಲ ಎಂದು ಚಾಣಕ್ಯ ಹೇಳುತ್ತಾರೆ.
ಇದನ್ನೂ ಓದಿ: ಮುಖ್ಯವಾಗಿ ಈ ನಾಲ್ಕು ಕೆಲಸಗಳನ್ನು ಏಕಾಂತದಲ್ಲಿರುವಾಗಲೇ ಮಾಡಿದರೆ ಒಳ್ಳೆಯದಂತೆ
ಆದ್ದರಿಂದ ಯಾವಾಗಲೂ ಬುದ್ಧಿವಂತ ಮತ್ತು ನಿಮ್ಮ ಒಳ್ಳೆಯದನ್ನು ಬಯಸುವ ಸ್ನೇಹಿತರನ್ನು ಮಾತ್ರ ಆರಿಸಿ. ಎಂದಿಗೂ ಮೂರ್ಖರು ಅಥವಾ ಸ್ವಾರ್ಥಿಗಳ ಸ್ನೇಹವನ್ನು ಮಾಡದಿರಿ. ನಿಮ್ಮ ಮುಂದೆ ನಗುವ ಪ್ರತಿಯೊಂದು ಮುಖವೂ ವಿಶ್ವಾಸಾರ್ಹವಲ್ಲ, ಸ್ನೇಹಿತರನ್ನು ಮಾಡಿಕೊಳ್ಳುವಾಗ ಯಾವಾಗಲೂ ಎಚ್ಚರಿಕೆ ವಹಿಸಿ ಎಂದು ಚಾಣಕ್ಯರು ಸಲಹೆ ನೀಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ