
ಗಂಡ ಹೆಂಡತಿ ನಡುವಿನ ಸಂಬಂಧ ತುಂಬಾನೇ ಸುಂದರವಾದದ್ದು. ಈ ಸಂಬಂಧ ಶಾಶ್ವತವಾಗಿ ಸುಂದರವಾಗಿರಬೇಕೆಂದರೆ ಗಂಡ ಹೆಂಡತಿ (husband-wife) ತಮ್ಮ ನಡುವಿನ ಸಂಬಂಧದ ಬಗ್ಗೆ ಯಾರೊಂದಿಗೂ ಚರ್ಚಿಸಬಾರದು. ಕೆಲವೊಂದು ರಹಸ್ಯಗಳನ್ನು ಯಾರಿಗೂ ಶೇರ್ ಮಾಡಬಾರದು. ಇಬ್ಬರ ನಡುವೆ ಮೂರನೇ ವ್ಯಕ್ತಿ ಬರಲು ಬಿಡಲೇಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೀಗೆ ಗಂಡ ಹೆಂಡತಿ ನಡುವೆ ಮೂರನೇ ವ್ಯಕ್ತಿ ಬಂದರೆ ಸಂಬಂಧವೇ ಹಾಳಾಗುತ್ತದೆ. ಜೊತೆಗೆ ಗಂಡನಾದವನು ತನ್ನ ಹೆಂಡತಿಯ ಕೆಲವೊಂದು ವಿಚಾರಗಳನ್ನು ಇತರರ ಬಳಿ ಹಂಚಿಕೊಳ್ಳುವುದರಿಂದಲೂ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪತಿ ತನ್ನ ಪತ್ನಿಯ ಈ ವಿಚಾರಗಳನ್ನು ಯಾರಿಗೂ ಹೇಳಬಾರದು ಅದನ್ನು ಆದಷ್ಟು ಖಾಸಗಿಯಾಗಿರಿಸಬೇಕು ಎಂದು ಚಾಣಕ್ಯರು ಸಲಹೆ ನೀಡಿದ್ದಾರೆ. ಆ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಮನಸ್ತಾಪ, ಜಗಳ: ಪ್ರತಿಯೊಂದು ಮನೆಯಲ್ಲೂ ಜಗಳಗಳು ನಡೆಯುತ್ತವೆ. ಅದರಲ್ಲೂ ಗಂಡ ಹೆಂಡತಿಯ ನಡುವೆ ಸಣ್ಣಪುಟ್ಟ ಮನಸ್ತಾಪ, ಜಗಳ ನಡೆಯುವುದು ಸಾಮಾನ್ಯ. ಕೆಲವು ಜನರು ತಮ್ಮ ಕುಟುಂಬ ವಿವಾದಗಳನ್ನು ಇತರರ ಮುಂದೆ ಹಂಚಿಕೊಳ್ಳುತ್ತಾರೆ. ಇದು ಕೆಟ್ಟ ಅಭ್ಯಾಸ ಎಂದು ಚಾಣಕ್ಯ ಹೇಳುತ್ತಾರೆ. ಗಂಡನೇ ಆಗಿರಲಿ ಅಥವಾ ಹೆಂಡತಿಯೇ ಆಗಿರಲಿ ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಮನಸ್ತಾಪಗಳನ್ನು ಇತರರ ಬಳಿ ಹೇಳಿದಾಗ ಕೆಲವರು ಗೇಲಿ ಮಾಡುತ್ತಾರೆ, ನಿಮ್ಮ ಜಗಳದ ಲಾಭವನ್ನು ಪಡೆದು ಪತಿ ಪತ್ನಿಯ ನಡುವಿನ ಸುಂದರ ಬಂಧವನ್ನು ಹಾಳು ಮಾಡುತ್ತಾರೆ. ಹಾಗಾಗಿ ಗಂಡ ಹೆಂಡತಿ ತಮ್ಮ ನಡುವೆ ಜಗಳ ಏರ್ಪಟ್ಟರೆ ಅದನ್ನು ಯಾರ ಬಳಿಯೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.
ಪ್ರೀತಿ ವಿಚಾರ: ನಿಮ್ಮ ಹೆಂಡತಿ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾಳೆ ಎಂಬುದನ್ನು ಯಾರಬಳಿಯೂ ಹಂಚಿಕೊಳ್ಳಲು ಹೋಗಬೇಡಿ. ಅಂತಹ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧ ಹಾಳಾಗುವ ಅಪಾಯ ಹೆಚ್ಚಿರುತ್ತದೆ ಎನ್ನುತ್ತಾರೆ ಚಾಣಕ್ಯ.
ಹೆಂಡತಿಯ ನ್ಯೂನತೆಗಳನ್ನು ಯಾರಿಗೂ ಹೇಳಬೇಡಿ: ನಿಮ್ಮ ಹೆಂಡತಿಗೆ ಕೆಟ್ಟ ಅಭ್ಯಾಸವಿದ್ದರೆ ಅಥವಾ ಸಣ್ಣಪುಟ್ಟ ವಿಷಯಕ್ಕೂ ಕೋಪಮಾಡಿಕೊಳ್ಳುವಂತಹ ನ್ಯೂನತೆಗಳಿದ್ದರೆ ನೀವು ಅದನ್ನು ಎಂದಿಗೂ ಇತರರೊಂದಿಗೆ ಹೇಳಬಾರದು. ನಿಮ್ಮ ಹೆಂಡತಿಯ ನ್ಯೂನತೆಗಳು ಅಥವಾ ಕೆಟ್ಟ ಅಭ್ಯಾಸಗಳ ಬಗ್ಗೆ ಉಲ್ಲೇಖಿಸುವುದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಅಲ್ಲದೆ ನಿಮ್ಮ ಸಂಬಂಧದ ಬಗ್ಗೆ ಇತರರು ಗೇಲಿ ಮಾಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಈ ಗುಣಗಳಿದ್ದರೆ ಜನ ನಿಮ್ಮನ್ನು ಸುಲಭವಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ ಎಚ್ಚರ…!
ಹೆಂಡತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು: ನಿಮ್ಮ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದೈಹಿಕವಾಗಿ ಅಸ್ವಸ್ಥರಾಗಿದ್ದರೆ, ನೀವು ಅದನ್ನು ಯಾರಿಗೂ ಹೇಳಬಾರದು. ಇದು ಹೆಂಡತಿಯ ಮನಸ್ಸನ್ನು ಘಾಸಿಗೊಳಿಸುತ್ತದೆ ಜೊತೆಗೆ ಮೂರನೇ ವ್ಯಕ್ತಿ ಇಲ್ಲಸಲ್ಲದ ಮಾತುಗಳನ್ನಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಹೆಂಡತಿಗೆ ಆರೋಗ್ಯಕ ಸಮಸ್ಯೆಗಳಿದ್ದರೆ ನೀವು ಅವಳಿಗೆ ಬೆಂಬಲವಾಗಿ ನಿಲ್ಲಬೇಕು, ಆಕೆಯ ದೌರ್ಬಲ್ಯಗಳನ್ನು ಜಗತ್ತಿಗೆ ಬಹಿರಂಗಪಡಿಸಬಾರದು.
ಹೆಂಡತಿಯ ಹಿಂದಿನ ವಿಷಯಗಳ ಬಗ್ಗೆ ಮಾತನಾಡಬಾರದು: ಪ್ರತಿಯೊಬ್ಬರಿಗೂ ಪಾಸ್ಟ್ ಇದ್ದೇ ಇರುತ್ತದೆ. ನಿಮ್ಮ ಹೆಂಡತಿ ಮದುವೆಗೂ ಮುನ್ನ ಯಾರನ್ನೋ ಪ್ರೀತಿಸುತ್ತಿದ್ದರೆ ಅಥವಾ ಆಕೆಯ ಮನಸ್ಸಿಗೆ ಏನಾದ್ರೂ ನೋವಾಗಿದ್ದರೆ ಹೆಂಡತಿಯ ಈ ಭೂತಕಾಲದ ಸಂಗತಿಗಳನ್ನು ಗಂಡ ಯಾರ ಬಳಿಯೂ ಹಂಚಿಕೊಳ್ಳಬಾರದು. ಇದರಿಂದ ಹೆಂಡತಿ ಅಸಮಾಧಾನಗೊಳ್ಳಬಹುದು ಮತ್ತು ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ